Namma Metro: ಮೆಟ್ರೋ ಪಾರ್ಕಿಂಗ್ ಖಾಲಿ ಖಾಲಿ, ಸ್ವಂತ ಗಾಡಿಗಳಲ್ಲೇ ಜಾಲಿ ಜಾಲಿ
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯು ಬೆಂಗಳೂರು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡಿದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಯ್ತು. ಬಳಿಕ ಪರಿಷ್ಕೃತದ ದರದಲ್ಲಿ ತುಸು ಕಡಿಮೆ ಮಾಡಿದ್ದರೂ ಸದ್ಯ ಟಿಕೆಟ್ ದರ ದುಬಾರಿಯೇ ಆಗಿದೆ. ಒಂದೆಡೆ ದರ ಏರಿದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೂಡ ಗಣನೀಯ ಇಳಿಕೆ ಕಂಡಿದೆ. ಮತ್ತೊಂದೆಡೆ ಮೆಟ್ರೋ ನಿಲ್ದಾಣಗಳಲ್ಲಿದ್ದ ಪಾರ್ಕಿಂಗ್ ಜಾಗಗಳು ಕೂಡ ಖಾಲಿ ಖಾಲಿಯಾಗಿವೆ.
ಮೆಟ್ರೋ ವಿರುದ್ಧ ಹಿಡಿಶಾಪ ಹಾಕುತ್ತಿರುವ ಪ್ರಯಾಣಿಕರು ದುಬಾರಿ ಟಿಕೆಟ್ ವೆಚ್ಚ ಭರಿಸಲಾರದೆ, ಬಿಎಂಟಿಸಿ, ಆಟೋ ಹಾಗೂ ತಮ್ಮ ಸ್ವಂತ ವಾಹನಗಳ ಬಳಕೆಗೆ ಮೊರೆ ಹೋಗಿದ್ದಾರೆ. ಇದರಿಂದ ಮೆಟ್ರೋ ನಿಲ್ದಾಣಗಳಲ್ಲಿನ ಪಾರ್ಕಿಂಗ್ ಪ್ರದೇಶಗಳು ಕೂಡ ಖಾಲಿ ಹೊಡೆಯುತ್ತಿವೆ. ವಾಹನ ಪಾರ್ಕಿಂಗ್ ಇಲ್ಲದೆ ಗುತ್ತಿಗೆದಾರರಿಗೂ ಈಗ ಸಂಕಷ್ಟ ಎದುರಾಗಿದೆ.

ಮೊದಲೆಲ್ಲ ಮೆಟ್ರೋ ಟಿಕೆಟ್ ದರ ಕೈಗೆಟುಕುತ್ತಿದ್ದರಿಂದ ಪ್ರಯಾಣಿಕರು ತಮ್ಮ ಸಮೀಪದ ಮೆಟ್ರೋ ನಿಲ್ದಾಣಗಳಿಗೆ ಸ್ವಂತ ಬೈಕ್, ಕಾರಿನಲ್ಲಿ ಬಂದು ಪಾರ್ಕ್ ಮಾಡಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ಇದರಿಂದ ಪಾರ್ಕಿಂಗ್ ಶುಲ್ಕ ವಿಧಿಸಿ ದಿನಕ್ಕೆ ಲಕ್ಷಾಂತರ ಹಣ ಕೂಡ ಸಂಗ್ರಹಿಸಲಾಗುತ್ತಿತ್ತು. ಇದನ್ನು ಗುತ್ತಿಗೆದಾರರು ನಿರ್ವಹಿಸುತ್ತಿದ್ದರು. ಈಗ ದಿಢೀರ್ ಟಿಕೆಟ್ ದರ ಏರಿಕೆಯಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ತಗ್ಗಿದ್ದಲ್ಲದೆ, ಪಾರ್ಕಿಂಗ್ ವಾಹನ ಸಂಖ್ಯೆಯೂ ಕುಸಿದಿದೆ.
ಈ ಮೊದಲು ಇರುತ್ತಿದ್ದ ಪಾರ್ಕಿಂಗ್‌ನಲ್ಲಿ ಈಗ ಅರ್ಧ ಪ್ರಮಾಣದಷ್ಟು ಕೂಡ ಜನ ವಾಹನಗಳನ್ನು ಪಾರ್ಕ್ ಮಾಡುತ್ತಿಲ್ಲ. ಮೆಟ್ರೋ ಟಿಕೆಟ್ ದರ ಜಾಸ್ತಿ ಆದ ನಂತರ ಮೆಟ್ರೋ ಸಹವಾಸವೇ ಬೇಡ ಎನ್ನುತ್ತಿದ್ದಾರೆ ಪ್ರಯಾಣಿಕರು. ದರ ಏರಿಕೆ ಬಳಿಕ ಬಿಎಂಟಿಸಿ ಬಸ್‌ಗಳನ್ನು ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಹೆಚ್ಚಳ ಕಂಡಿದೆ. ದಿನನಿತ್ಯ ಉದ್ಯೋಗಗಳಿಗೆ ಹೋಗುವವರು ಈಗ ಸ್ವಂತ ವಾಹನದಲ್ಲೇ ಹೋಗುತ್ತಿದ್ದಾರೆ. ಹಾಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್‌ಗೆ ಗುಡ್‌ಬೈ ಹೇಳಿದ್ದಾರೆ. ಇದರಿಂದ ಪಾರ್ಕಿಂಗ್ ಗುತ್ತಿಗೆ ಪಡೆದವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೊದಲು ಮೆಟ್ರೋ ಟಿಕೆಟ್ ದರ ಕಡಿಮೆ ಇದ್ದ ಕಾರಣ ಎಲ್ಲರೂ ಬೆಂಗಳೂರಿನ ಟ್ರಾಫಿಕ್‌ಗೆ ಹೆದರಿ ಮೆಟ್ರೋ ರೈಲು ಹತ್ತುತ್ತಿದ್ದರು. ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಕಾಯುವ ಬದಲು ಹೆಚ್ಚೆಂದರೆ ಅರ್ಧ ಗಂಟೆಯಲ್ಲಿ ಆ ಮೂಲೆಯಿಂದ ಈ ಮೂಲೆಗೆ ಹೋಗಬಹುದು ಎಂಬ ಕಾರಣಕ್ಕೂ ಮೆಟ್ರೋ ಬಳಸುತ್ತಿದ್ದರು. ಆದರೆ ದರ ಏರಿಕೆ ಬಿಸಿ ತಟ್ಟಿದ್ದರಿಂದ ಮೆಟ್ರೋ ಕಡೆಗೆ ಮುಖ ಕೂಡ ಹಾಕುತ್ತಿಲ್ಲ ಪ್ರಯಾಣಿಕರು.

ಪೆಟ್ರೋಲ್, ಡೀಸೆಲ್ ದರಗಳು ಕೂಡ ದುಬಾರಿ ಆಗಿರುವುದರಿಂದ ಇದಕ್ಕೆ ಹೋಲಿಸಿದರೆ ಮೆಟ್ರೋ ಟಿಕೆಟ್ ದರ ಕಡಿಮೆ ಎಂದು ಕಾರಣಕ್ಕೆ ಕೆಲಸಗಳಿಗೆ ಹೋಗುವವರು ಪ್ರತಿನಿತ್ಯ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದರು. ಆದರೆ ಪರಿಷ್ಕೃತ ದರವನ್ನು ಕಂಡು ಬೆಂಗಳೂರು ಮಂದಿ ಶಾಕ್ ಆಗಿದ್ದು, ತುಸು ದರ ಕಡಿಮೆ ಮಾಡಿದ್ದೇವೆ ಎಂದು ಮೆಟ್ರೋಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ. ಸಾವಿರಾರು ಕೋಟಿ ಖರ್ಚು ಮಾಡಿ ತಲೆ ಎತ್ತಿರುವ ಮೆಟ್ರೋ ಈಗ ಪ್ರಯಾಣಿಕರಿಲ್ಲದೆ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ.












Click it and Unblock the Notifications