ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಟೋಲ್ ಶುಲ್ಕ ತಪ್ಪಿಸಲು ನಿಯಮ ಮೀರುತ್ತಿರುವ ವಾಹನ ಸವಾರರು
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಜೊತೆಗೆ ದುಬಾರಿ ಶುಲ್ಕ ಸಂಗ್ರಹಿಸುತ್ತಿರುವುದಕ್ಕೆ ಭಾರಿ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಎಕ್ಸ್‌ಪ್ರೆಸ್‌ವೇನಲ್ಲಿ ರಾಂಗ್ ಸೈಡಿನಲ್ಲಿ ಚಲಿಸುವ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದ, ವಾಹನ ಸವಾರರಿಗೆ ಭಯ ಹುಟ್ಟಿಸುತ್ತಿದೆ.
ಇತ್ತೀಚೆಗಷ್ಟೇ ಬೆಂಗಳೂರು-ಮೈಸೂರು ನೂತನ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣ್ ನಗರದ ರೋಹಿತ್ ಎಸ್. ಎನ್ನುವವರು ತಮಗೆ ಆಗಿರುವ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಇಡೀ ರಸ್ತೆಯುದ್ದಕ್ಕೂ ಆತಂಕದಲ್ಲೇ ಪ್ರಯಾಣಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

"ಬಿಡದಿ ದಾಟಿದ ನಂತರ ಏಕಾಏಕಿ ರಾಂಗ್‌ಸೈಡಿನಲ್ಲಿ ಬರುವ ವಾಹನಗಳ ಸಂಖ್ಯೆ ಹೆಚ್ಚಿರುವುದು ಗಮನಕ್ಕೆ ಬಂದಿದ್ದು, ಅವು ಇತರ ವಾಹನ ಸವಾರರ ಪ್ರಾಣಕ್ಕೂ ಅಪಾಯ ತಂದೊಡ್ಡಿವೆ. ಹಿಂತಿರುಗಿ ಬರುವಾಗ ನಾಲ್ಕು ಕಾರು, ಬೈಕ್‌ಗಳು ರಾಂಗ್ ಸೈಡ್‌ನಲ್ಲಿ ಬರುತ್ತಿರುವುದು ಗಮನಕ್ಕೆ ಬಂದಿದೆ. ಭಯ ಹುಟ್ಟಿಸುವ ಅನುಭವವಾಗಿದೆ. ಇದನ್ನು ಕೊನೆಗಾಣಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ," ಎಂದು ಅವರು ಮನವಿ ಮಾಡಿದ್ದಾರೆ.
"ಎಕ್ಸ್‌ಪ್ರೆಸ್‌ವೇ ವಿನ್ಯಾಸದಲ್ಲಿ ಹಲವು ನ್ಯೂನತೆಗಳಿವೆ ಎಂದು ರೋಹಿತ್ ಹೇಳಿದ್ದಾರೆ, ವಿಶೇಷವಾಗಿ ಮುಖ್ಯ ಕ್ಯಾರೇಜ್‌ವೇಗಳು ಸರ್ವೀಸ್ ರಸ್ತೆಗಳಿಗೆ ಪ್ರವೇಶ ಮತ್ತು ನಿರ್ಗಮನ ಪ್ರವೇಶವನ್ನು ಹೊಂದಿವೆ. "ಈ ನಿರ್ಗಮನ ಪಾಯಿಂಟ್‌ಗಳು ಥಟ್ಟನೆ ಕಾಣಿಸಿಕೊಳ್ಳುತ್ತವೆ ಮತ್ತು ಸೇವಾ ರಸ್ತೆಯನ್ನು ಪ್ರವೇಶಿಸಲು ಯಾವುದೇ ಸುರಕ್ಷಿತ ಲೇನ್ ಅನ್ನು ಒದಗಿಸಿಲ್ಲ. ಈ ಪಾಯಿಂಟ್‌ಗಳ ಬಳಿ ಸೈನ್‌ಬೋರ್ಡ್‌ಗಳು ಕೂಡ ಇಲ್ಲದಿರುವುದು ವಾಹನ ಚಾಲಕರಿಗೆ ತೊಂದರೆಯಾಗಿದೆ" ಎಂದು ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಗಮನ ಮತ್ತು ಪ್ರವೇಶ ಸ್ಥಳಗಳನ್ನು ಗುರುತಿಸಲು ಪ್ಲಾಸ್ಟಿಕ್ ಬೋಲಾರ್ಡ್‌ಗಳನ್ನು ಹಾಕಿದೆ. ಅಧಿಕಾರಿಗಳ ಪ್ರಕಾರ, ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ 14 ಪಾಯಿಂಟ್‌ಗಳಲ್ಲಿ ಸೇವಾ ರಸ್ತೆಗಳಿಂದ ಪ್ರವೇಶವನ್ನು ಒದಗಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ, ಹಲವಾರು ವಾಹನ ಚಾಲಕರು ರಾಂಗ್ ಸೈಡ್ ಡ್ರೈವಿಂಗ್‌ನ ಅಪಾಯಕಾರಿ ಪ್ರವೃತ್ತಿಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ, ಥರ್ಡ್ ಐ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಕಾರ್ ನ ಡ್ಯಾಶ್‌ಬೋರ್ಡ್ ಕ್ಯಾಮೆರಾದಿಂದ ರಾಂಗ್ ಸೈಡ್‌ನಲ್ಲಿ ಆಟೋರಿಕ್ಷಾ ಬರುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಹಂಚಿಕೊಂಡಿದೆ.
ಅಲೋಕ್ ಕುಮಾರ್ ಹೇಳಿದ್ದೇನು?
ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರ ಚಾಲನಾ ಪರವಾನಗಿಯನ್ನು ಸಹ ಅಮಾನತುಗೊಳಿಸಲಾಗುವುದು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಂಗ್ ಸೈಡ್ ಡ್ರೈವಿಂಗ್‌ಗೆ ಎರಡು ಪ್ರಾಥಮಿಕ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ. ಒಂದು ಟೋಲ್ ಪಾವತಿಸುವುದನ್ನು ತಪ್ಪಿಸಬಹುದು ಮತ್ತು ರಾಂಗ್‌ಸೈಡಿನಲ್ಲಿ ಬಂದರೆ ಸುತ್ತು ಬಳಸಿ ದೂರ ಪ್ರಯಾಣ ಮಾಡಿ ಬರುವುದು ತಪ್ಪುತ್ತದೆ ಎನ್ನುವುದು. ಇದು ತುಂಬಾ ಅಪಾಯಕಾರಿ, ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ರಾಂಗ್ ಸೈಡಿನಲ್ಲಿ ಬಂದ ಬಸ್ ಅಪಘಾತವಾಗಿ ಆರು ಜನ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ನಿಯಮ ಮೀರಿದರೆ ದಂಡ
ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಡದಿ ಮತ್ತು ಬೈರಪಟ್ಟಣದಲ್ಲಿ ವಾಹನಗಳು ತಪ್ಪು ದಾರಿಗೆ ಬರದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹಲವು ದಿನಗಳಿಂದ ನಿಯಮ ಮೀರಿ ವೇಗವಾಗಿ ಬರುವ ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ದುಬಾರಿ ದಂಡವನ್ನು ಕೂಡ ವಸೂಲಿ ಮಾಡಲಾಗುತ್ತಿದೆ. ಈ ವರೆಗೆ ಈ ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಒಟ್ಟು 2,000 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರಾಮನಗರ ಎಸ್‌ಪಿ ಮಾಹಿತಿ ನೀಡಿದ್ದಾರೆ.
ಟೋಲ್ ಪ್ಲಾಜಾಗಳನ್ನು ನೋಡಿದ ನಂತರ ಅವುಗಳನ್ನು ತಪ್ಪಿಸಲು ಸರ್ವಿಸ್ ರಸ್ತೆಗೆ ತೆರಳಲು ಪ್ರವೇಶವನ್ನು ಹುಡುಕುತ್ತಾ ರಾಂಗ್ ಸೈಡ್‌ನಲ್ಲಿ ಹೋಗುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications