Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಡೆ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ಈ ಸಂಬಂಧ ಹೊಸ ಮೆಟ್ರೋ ರೈಲು ಮಾರ್ಗಗಳನ್ನು ತೆರೆಯಲು ಮೆಟ್ರೋ ಅಧಿಕಾರಿಗಳು ಸಜ್ಜಾಗಿದ್ದಾರೆ. ಇನ್ನೊಂದೆಡೆ ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚಿಸುತ್ತಿದ್ದಾರೆ. ಅದರ ಭಾಗವಾಗಿ ಹಳದಿ ಮಾರ್ಗಕ್ಕೆ 9ನೇ ಡ್ರೈವರ್ ಲೆಸ್ ರೈಲು ಸೆಟ್‌ಗಳು ನಗರದ ಹೆಬ್ಬಗೋಡಿ ಡಿಪೋಗೆ ಸೋಮವಾರ ಆಗಮಿಸಿವೆ.
ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ 19.5 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಸದ್ಯ 08 ರೈಲುಗಳು ಸಂಚಾರ ನಡೆಸುತ್ತಿವೆ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಅತ್ಯಗತ್ಯವಾದ ಒಂಬತ್ತನೇ ರೈಲು ಆಗಮಿಸಿದೆ.

ಸೋಮವಾರ ಬೆಳಗಿನ ಜಾವ ನೈಸ್ ರಸ್ತೆ ಮಾರ್ಗವಾಗಿ ಹೆಬ್ಬಗೋಡಿ ಡಿಪೋಗೆ ಆರು ಬೋಗಿಗಳ ರೈಲು ಸೆಟ್ ಆಗಮಿಸಿತು. ಈ ಬಗ್ಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಂದೀಪ್ (@sandeepshenoyh) ಅನ್ನುವವರು ಹಂಚಿಕೊಂಡಿದ್ದಾರೆ. ನಾನು 'ಮೆಟ್ರೋದ ಹೊಸ ರೈಲುಗಳ ಸೆಟ್ ಅನ್ನು ನೋಡಿದೆ! ಹಳದಿ ಮಾರ್ಗದ 9 ರೈಲು ಇದಾಗಿದ್ದು, ಸಂಧು ಲಾಜಿಸ್ಟಿಕ್ಸ್ ಇದನ್ನು ಸಾಗಿಸಿದೆ' ಎಂದು ಬರೆದುಕೊಂಡಿದ್ದಾರೆ.
ಶೀಘ್ರವೇ ತಪಾಸಣೆ, ಪ್ರಾಯೋಗಿಕ ಸಂಚಾರ
ಪಶ್ಚಿಮ ಬಂಗಾಳದ ಟಿಟಾಗರ್ ಕಂಪನಿಯಿಂದ ಒಂಬತ್ತನೇ ರೈಲು ಏಪ್ರಿಲ್ ಆರಂಭದಲ್ಲಿ ಪೂರೈಕೆ ಆಗಿತ್ತು. ಅಂದು ಲಾರಿ ಮೂಲಕ ರೈಲು ಸೆಟ್‌ಗಳು ಬೆಂಗಳೂರಿನತ್ತ ಹೊರಟಿದ್ದವು. ನಿಗದಿಯಂತೆ ರಸ್ತೆ ಮಾರ್ಗವಾಗಿ ನೂರಾರು ಕಿಲೋ ಮೀಟರ್ ಹಾದು ಬೆಂಗಳೂರಿಗೆ ಆಗಮಿಸಿವೆ. ಈ ಮೆಟ್ರೋ ಬೋಗಿಗಳನ್ನು ಹಳಿಗೆ ಜೋಡಿಸುವ ಕಾರ್ಯ ಈ ವಾರ ನಡೆಯಲಿದೆ. ಬಳಿಕ ಪ್ರಾಯೋಗಿಕ ಸಂಚಾರ, ಸಿಗ್ನಲಿಂಗ್ ಹಾಗೂ ಇನ್ನಿತರ ಶಾಸನಬದ್ಧ ತಪಾಸಣೆಗಳನ್ನು ನಡೆಸಿ ಮೇ ತಿಂಗಳಲ್ಲಿ ಕಾರ್ಯಾಚರಣೆಗೆ ಇಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಚಿಂತನೆ ಮಾಡಿದೆ.
10ನೇ ರೈಲು ಆಗಮನ ಯಾವಾಗ?
ಏಪ್ರಿಲ್ ಮೂರನೇ ವಾರದಲ್ಲಿ ಹಳದಿ ಮಾರ್ಗದ ಹತ್ತನೇ ರೈಲನ್ನು ಟಿಟಾಗರ್ ಪೂರೈಕೆ ಮಾಡುವ ಸಾಧ್ಯತೆ ಇದೆ. ಅದು ಏಪ್ರಿಲ್ ಅಂತ್ಯಕ್ಕೆ ಇಲ್ಲವೇ ಮೇ ಮೊದಲ ವಾರ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಆಗಮಿಸಲಿದೆ.
ಮೆಟ್ರೋಗಳ ರೈಲುಗಳ ಪೂರೈಕೆಯಿಂದ ಸುಮಾರು ಎರಡು ವರ್ಷ ಕಾರ್ಯಾಚರಣೆ ಆರಂಭಿಸುವುದು ವಿಳಂಬವಾಗಿದ್ದ ಹಳದಿ ಮಾರ್ಗಕ್ಕೆ ನಿಗದಿಯಂತೆ ಒಂದ ಹಿಂದೊಂದರಂತೆ ರೈಲುಗಳ ಪೂರೈಕೆ ಆಗುತ್ತಿವೆ.
ಹಸಿರು, ನೇರಳೆ ಮಾರ್ಗದಲ್ಲಿ ದಟ್ಟಣೆ ಇಳಿಕೆಗೆ ಕ್ರಮ
ಮತ್ತೊಂದೆಡೆ ಪ್ರೊಟೋಟೈಪ್ ಮಾದರಿ ಒಳಗೊಂಡಂತೆ 21 ರೈಲುಗಳನ್ನು ಚೀನಾ ಮೂಲದ ಕಂಪನಿ ಪೂರೈಕೆ ಮಾಡಲಿದೆ. ಈಗಾಗಲೇ 2025ರಲ್ಲಿ ಒಂದು ಮತ್ತು ಇತ್ತೀಚೆಗೆ ಬಂದ ಡಿಟಿಜಿ ರೈಲು ಸೇರಿ ಒಟ್ಟು ಮೂರು ಮೆಟ್ರೋ ರೈಲುಗಳು ನಗರದಲ್ಲಿದ್ದು, ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಅದಾದ ಬಳಿಕ ಅವುಗಳನ್ನು ಹಸಿರು ಮತ್ತು ನೇರಳೆ ಮಾರ್ಗದಲ್ಲಿ ನಿಯೋಜಿಸಲಾಗುತ್ತದೆ. ಈ ಮೂಲಕ ಹೆಚ್ಚುತ್ತಿರುವ ದಟ್ಟಣೆ ಕಡಿಮೆಗೆ ಬಿಎಂಆರ್‍ಸಿಎಲ್ ನಿರ್ಧರಿಸಿದೆ.












Click it and Unblock the Notifications