Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್!
ಕರ್ನಾಟಕ ಜನತೆಗೆ ರಾಜ್ಯ ಸರ್ಕಾರ ಒಂದಾದ ನಂತರ ಒಂದು ಬೆಲೆ ಏರಿಕೆ ಶಾಕ್ ಕೊಡುತ್ತಿದೆ. ಈಗಾಗಲೇ ಕೆಎಸ್ಆರ್ ಸಿಟಿ, ಬಿಎಂಟಿಸಿ ಬಸ್ ದರ ಏರಿಕೆಗೆ ಸಂಚಿವ ಸಂಪುಟ ಒಪ್ಪಿಗೆ ನೀಡಿದ್ದು ಜನವರಿ 5ರಿಂದಲೇ ಜಾರಿಗೆ ಬರಲಿದೆ. 15 ಪ್ರತಿಶತ ದರ ಏರಿಕೆಯಾಗಲಿದ್ದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಹಿಳೆಯರಿಗೆ ಉಚಿತ ಟಿಕೆಟ್ ಕೊಡಲು ಗಂಡಸರ ಮೇಲೆ ಬರೆ ಹಾಕುತ್ತಿದ್ದೀರಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರು ಜನತೆಗೆ ನಮ್ಮ ಮೆಟ್ರೋ ಶಾಕ್ ಕೊಡಲು ಮುಂದಾಗಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ( BMRCL) ಪ್ರಯಾಣದರ ಹೆಚ್ಚಿಸಲು ನಿರ್ಧರಿಸಿದೆ. ಪ್ರಯಾಣ ದರ 20 ಪ್ರತಿಶತ ಹೆಚ್ಚಿಸಲು ಯೋಜಿಸಿದೆ ಎಂದು ವರದಿಯಾಗಿದ್ದು, ಜನವರಿ 18 ರಿಂದ ಪ್ರಯಾಣದರ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

ಪ್ರಯಾಣ ದರ ನಿಗದಿ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಲು ಪರಿಶೀಲನೆ ಮಾಡಲಾಗಿದೆ. ಸಮಿತಿಯು ಈಗಾಗಲೇ ತನ್ನ ಅಂತಿಮ ವರದಿಯನ್ನು ಬಿಎಂಆರ್ ಸಿಎಲ್‌ಗೆ ಸಲ್ಲಿಸಿದ್ದು, ಬಿಎಂಆರ್ ಸಿಎಲ್ ಜನವರಿ 17 ರಂದು ಸಭೆಯಲ್ಲಿ ಶಿಫಾರಸುಗಳನ್ನು ಪರಿಶೀಲನೆ ಮಾಡಲಿದೆ ಎಂದು ನ್ಯೂಸ್ 9 ವರದಿ ಮಾಡಿದೆ. ಸಮಿತಿಯ ಸಲಹೆಗಳನ್ನು ಯಾವುದೇ ವಿರೋಧ ಮಾಡದೇ ಅನುಮೋದನೆ ಮಾಡಲಾಗುತ್ತದೆ. ಸಮಿತಿಯ ನಿರ್ಧಾರಗಳು 2002ರ ಮೆಟ್ರೋ ಕಾಯಿದೆಗೆ ಅನುಗುಣವಾಗಿ ಸಮಿತಿಯ ನಿರ್ಧಾರಗಳಿಗೆ ಬಿಎಂಆರ್ ಸಿಎಲ್ ಬದ್ದವಾಗಿರಬೇಕಾಗುತ್ತದೆ.
2017ರ ಬಳಿಕ ಮೊದಲ ಬಾರಿ ದರ ಏರಿಕೆ
ನಮ್ಮ ಮೆಟ್ರೋ 2017ರಲ್ಲಿ ಕೊನೆಯ ಬಾರಿ ದರ ಪರಿಷ್ಕರಣೆ ಮಾಡಿತ್ತು. 10-15 ಪ್ರತಿಶತ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಬಳಿಕ ಹಣದುಬ್ಬರ ಹೆಚ್ಚಳ, ಕಾರ್ಯಾಚರಣೆ ವೆಚ್ಚ ಹೆಚ್ಚಳ ನಮ್ಮ ಮೆಟ್ರೋ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದ್ದು ನಷ್ಟವನ್ನು ತಪ್ಪಿಸಲು ದರ ಏರಿಕೆ ಒಂದೇ ದಾರಿ ಎನ್ನಲಾಗಿದೆ.
ನಮ್ಮ ಮೆಟ್ರೋ ಪ್ರಯಾಣ ದರ ಈಗ ಕನಿಷ್ಠ 10 ರೂಪಾಯಿ ಇದ್ದರೆ ಗರಿಷ್ಠ 60 ರೂಪಾಯಿ ಆಗಿದೆ. ಮೆಟ್ರೋ ಕಾರ್ಡ್ ಮತ್ತು ಆನ್‌ಲೈನ್ ಟಿಕೆಟ್ ಬಳಕೆದಾರರಿಗೆ ಪ್ರಯಾಣ ವೆಚ್ಚದಲ್ಲಿ 5 ಪ್ರತಿಶತ ವಿನಾಯಿತಿ ಸಿಗುತ್ತಿದೆ. ಈಗ 20 ಪ್ರತಿಶತ ಬೆಲೆ ಏರಿಕೆಗೆ ಅನುಮೋದನೆ ಸಿಕ್ಕರೆ ಕನಿಷ್ಠ ದರ 12 ರೂಪಾಯಿಗೆ ಮತ್ತು ಗರಿಷ್ಠ ದರ 72 ರೂಪಾಯಿಗೆ ಏರಿಕೆಯಾಗಲಿದೆ.
ಈ ಬಗ್ಗೆ ಬಿಎಂಆರ್ ಸಿಎಲ್ ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿ ಇದ್ದು, ಒಟ್ಟಾರೆ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಬರೆ ಬೀಳುವುದಂತೂ ಖಚಿತವಾಗಿದೆ. ಆದರೆ ಎಷ್ಟು ಮತ್ತು ಯಾವಾಗ ಎನ್ನುವುದನ್ನು ಬಿಎಂಆರ್ ಸಿಎಲ್ ಅಧಿಕೃತವಾಗಿ ತಿಳಿಸಬೇಕಿದೆ.












Click it and Unblock the Notifications