Namma Metro: ಬೆಂಗಳೂರು ಎಲೆಕ್ಟ್ರಾನಿಕ್ಸ್ ಮೆಟ್ರೋ ಕಾರಿಡಾರ್‌ಗೆ ಚೀನಾದಿಂದ ಮೊದಲ ರೈಲು- ಯಾವಾಗ ಆರಂಭ, ಅಂಕಿಅಂಶ, ವಿವರ
ಬೆಂಗಳೂರು, ಜುಲೈ 31: ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಮೆಟ್ರೋ ಕಾರಿಡಾರ್ ಕೆಲ ತಿಂಗಳಲ್ಲೇ ಆರಂಭಗೊಳ್ಳಲಿದೆ. ಈ ಮಹತ್ವದ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಆರು ಬೋಗಿಗಳ ಎರಡು ಮೆಟ್ರೋ ರೈಲುಗಳು ಚೀನಾದಿಂದ ಬರಲಿವೆ. ಈ ಕಾರಿಡಾರ್ ಯಾವುದು, ಇದು ಯಾವಾಗ ಆರಂಭವಾಗಲಿದೆ ಎಂಬುದರ ಕುರಿತು ಮಾಹಿತಿ ಹಾಗೂ ವಿವರ ತಿಳಿಯಿರಿ.
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಮೆಟ್ರೋ ಕಾರಿಡಾರ್‌ನಲ್ಲಿ ಕಾರ್ಯನಿರ್ವಹಿಸಲು ಎರಡು ಪ್ರಮುಖ ರೈಲುಗಳು ಸೆಪ್ಟೆಂಬರ್ 2023 ರ ವೇಳೆಗೆ ಚೀನಾದಿಂದ ಆಗಮಿಸಲಿವೆ ಎಂದು ಟಿಟಾಗರ್ ರೈಲ್ ಸಿಸ್ಟಮ್ಸ್ ಎಂಡಿ ಮತ್ತು ಸಿಇಒ ಉಮೇಶ್ ಚೌಧರಿ 'ಮನಿ ಕಂಟ್ರೋಲ್'ಗೆ ಮಾಹಿತಿ ನೀಡಿದ್ದಾರೆ.

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೋ ಮಾರ್ಗಕ್ಕೆ ಎಲೆಕ್ಟ್ರಾನಿಕ್ಸ್ ಮೆಟ್ರೋ ಕಾರಿಡಾರ್ ಎಂದು ಕರೆಯಲಾಗುತ್ತಿದೆ. ಇದು ಯೆಲ್ಲೋ ಮಾರ್ಗವನ್ನು ಹೊಂದಿದೆ. ಇದು ಬೆಂಗಳೂರು ಮಹಾನಗರದ ಅತೀ ಮಹತ್ವದ ಮೆಟ್ರೋ ಕಾರಿಡಾರ್ ಆಗಿದೆ.
ಈ ಮಾರ್ಗವು ದಕ್ಷಿಣ ಬೆಂಗಳೂರಿನ ಜೊತೆ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಸಂಪರ್ಕಿಸುತ್ತದೆ. ಇದರಿಂದ ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಂಪನಿಗಳ ಉದ್ಯೋಗಿಗಳಿಗೆ ಸಹಾಯವಾಗಲಿದೆ.
ಹಳದಿ ಮಾರ್ಗದ ಸಿವಿಲ್ ಕೆಲಸವು ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕಾರಿಡಾರ್‌ಗೆ ಡಿಸೆಂಬರ್ 2023 ರ ಗಡುವನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿಗದಿಪಡಿಸಿದ್ದರೂ ಸಹ, ಹೊಸ ರೈಲುಗಳ ಆಗಮನದ ಬಗ್ಗೆ ಅನಿಶ್ಚಿತತೆ ಇದೆ.

ಈ ವಿಚಾರವಾಗಿ ಮನಿ ಕಂಟ್ರೋಲ್‌ಗೆ ಮಾತನಾಡಿರುವ ಚೌದರಿ ಅವರು, 'ಆರು ಬೋಗಿಗಳ ಮೊದಲ ಎರಡು ರೈಲುಗಳು (12 ಕೋಚ್‌ಗಳು) ಚೀನಾದಿಂದ ಬರಲಿವೆ. ಉಳಿದ 204 ಬೋಗಿಗಳನ್ನು ಭಾರತದಲ್ಲಿ ಟಿಟಾಗರ್ ರೈಲ್ ತಯಾರಿಸಲಿದೆ. ಎಲ್ಲಾ 216 ಕೋಚ್‌ಗಳನ್ನು ಮಾರ್ಚ್ 2025 ರೊಳಗೆ ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
'ಮೊದಲ ರೈಲನ್ನು (ಆರು ಕೋಚ್‌ಗಳು) ಸೆಪ್ಟೆಂಬರ್ 2023 ರೊಳಗೆ ಸಿಆರ್‌ಆರ್‌ಸಿ ಪೂರೈಸಲಿದೆ. ಡಿಸೆಂಬರ್ 2023 ರ ವೇಳೆಗೆ ಟಿಟಾಘರ್ ಮೊದಲ ರೈಲನ್ನು ನೀಡಲಿದೆ. ಮೊದಲ ಎರಡು ರೈಲುಗಳು ಮಾತ್ರ ಚೀನಾದಿಂದ ಬರುತ್ತವೆ. ಉಳಿದವುಗಳನ್ನು ಭಾರತದಲ್ಲಿ ಟಿಟಾಘರ್‌ನಿಂದ ತಯಾರಿಸಲಾಗುವುದು. ಪ್ರತಿ ತಿಂಗಳಿಗೆ ಎರಡು ರೈಲುಗಳನ್ನು (12 ಕೋಚ್‌ಗಳು) ತಯಾರಿಸಲು ನಾವು ಬಯಸಿದ್ದೇವೆ' ಎಂದು ಚೌದರಿ ಹೇಳಿದ್ದಾರೆ.
ಕೋಲ್ಕತ್ತಾ ಬಳಿಯ ಉತ್ತರ ಪರಗಣದಲ್ಲಿರುವ ಟಿಟಾಗರ್ ರೈಲಿನ ವ್ಯಾಗನ್ ಉತ್ಪಾದನಾ ಘಟಕದಲ್ಲಿ ಕೋಚ್‌ಗಳನ್ನು ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 2019 ರಲ್ಲಿ, ಚೀನೀ ಕಂಪನಿ, CRRC Nanjing Puzhen Co. Ltd ಗೆ 216 ಕೋಚ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ನೀಡಲಾಯಿತು. ಅದು 173 ವಾರಗಳಲ್ಲಿ ಬಿಎಂಆರ್‌ಸಿಎಲ್‌ಗೆ ತಲುಪಿಸುವ ನಿರೀಕ್ಷೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ, 75 ಪ್ರತಿಶತ ರೈಲುಗಳನ್ನು ಸ್ಥಳೀಯವಾಗಿ ತಯಾರಿಸಲು ಸರ್ಕಾರ ಬಯಸಿತ್ತು. ಆದರೆ, ಇದನ್ನೂ ಪೂರೈಸಲು ಸಿಆರ್‌ಆರ್‌ಸಿ ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್ -19, ವಿದೇಶಿ ನೇರ ಹೂಡಿಕೆ ನೀತಿಗಳು ಮತ್ತು ವ್ಯಾಪಾರ ನಿರ್ಬಂಧಗಳಂತಹ ಅಂಶಗಳಿಂದ ಪೂರೈಕೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗ ಸ್ಥಳೀಯವಾಗಿ ಕೋಚ್‌ಗಳನ್ನು ತಯಾರಿಸಲು ಮತ್ತು ಪೂರೈಸಲು ಸಿಆರ್‌ಆರ್‌ಸಿ ಕೋಲ್ಕತ್ತಾ ಮೂಲದ ಟಿಟಾಘರ್ ರೈಲ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಸಿಆರ್‌ಆರ್‌ಸಿಯೊಂದಿಗಿನ ಒಪ್ಪಂದವು ಪಾಲುದಾರಿಕೆ ಅಲ್ಲ ಎಂದು ಚೌಧರಿ ಹೇಳಿದ್ದಾರೆ. ಬದಲಿಗೆ ಟಿಟಾಗರ್ ರೈಲು ಯೋಜನೆಗೆ ಸಿಆರ್‌ಆರ್‌ಸಿ ಪೂರೈಕೆದಾರನಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
'ನಾವು ಮೊದಲು ಅಲ್ಯೂಮಿನಿಯಂ ಕೋಚ್‌ಗಳನ್ನು ಹೊಂದಿದ್ದೆವು. ಈಗ ಸ್ಟೇನ್‌ಲೆಸ್ ಕೋಚ್‌ಗಳನ್ನು ಪೂರೈಸುತ್ತಿದ್ದೇವೆ. ಈ ಕ್ರಮವು ಸ್ಟೇನ್‌ಲೆಸ್ ಸ್ಟೀಲ್ ಕೋಚ್ ಮಾರುಕಟ್ಟೆಯನ್ನು ಪ್ರವೇಶಿಸಲು ನಮಗೆ ಸಹಾಯ ಮಾಡಿತು. ನಮ್ಮ ಇಟಾಲಿಯನ್ ಅಸೋಸಿಯೇಟ್ (ಟಿಟಾಗರ್ ಫೈರ್‌ಮಾ ಎಸ್‌ಪಿಎ), ಸಹ ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಹೊಂದಿದೆ. ನಾವು ಪುಣೆಗೆ ಅಲ್ಯೂಮಿನಿಯಂ ಕೋಚ್‌ಗಳನ್ನು ಪೂರೈಸಿದ್ದೇವೆ' ಅವರು ಹೇಳಿದ್ದಾರೆ.
216 ಕೋಚ್‌ಗಳಲ್ಲಿ, 126 (21 ಆರು ಬೋಗಿಗಳ ರೈಲುಗಳಿಗೆ ಸಮನಾಗಿರುತ್ತದೆ) ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ನಿಯೋಜಿಸಲಾಗುವುದು. ಉಳಿದ 90 ಕೋಚ್‌ಗಳನ್ನು (15 ಆರು ಕೋಚ್ ರೈಲುಗಳಿಗೆ ಸಮನಾಗಿರುತ್ತದೆ) ಹಳದಿ ಮಾರ್ಗಕ್ಕಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಚೀನಾದ ಸಿಆರ್‌ಆರ್‌ಸಿ ಎಂಜಿನಿಯರ್‌ಗಳು ರೈಲುಗಳ ಪರೀಕ್ಷೆ ಮತ್ತು ಕಾರ್ಯಾರಂಭಕ್ಕಾಗಿ ಬೆಂಗಳೂರಿಗೆ ಬರಲು ವೀಸಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications