Meat Sale in Bengluru: ಬೆಂಗಳೂರಲ್ಲಿ ಕೋಳಿ - ಮಾಂಸ ಮಳಿಗೆಗಳಿಗೆ ಜಿಬಿಎ ದಿಢೀರ್ ಶಾಕ್: ನಿಯಮ ಉಲ್ಲಂಘಿಸುವ ಅಂಗಡಿಗಳಿಗೆ ನೋಟಿಸ್
Meat Sale in Bengluru: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಭಿವೃದ್ಧಿ ವ್ಯಾಪ್ತಿಯಲ್ಲಿ ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ವಿವಿಧ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆ ನಡೆಯಲಿದೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ಯಲಹಂಕ ಉಪನಗರ ವ್ಯಾಪ್ತಿಯಲ್ಲಿರುವ ಕೋಳಿ ಹಾಗೂ ಮಾಂಸ ಮಾರಾಟ ಮಳಿಗೆಗಳಲ್ಲಿ ನಿಯಮಿತ ಆರೋಗ್ಯ ಮತ್ತು ಪರವಾನಗಿ ಮಾನ್ಯತೆ ಅನುಸರಣೆ ಪರಿಶೀಲನೆ ನಡೆಸುವ ಉದ್ದೇಶದಿಂದ ನಗರ ಪಾಲಿಕೆಯ ಪಶುಪಾಲನಾ ಇಲಾಖೆ ವತಿಯಿಂದ ವಿಶೇಷ ತಪಾಸಣೆ ಕಾರ್ಯಾಚರಣೆಯನ್ನು ದಿನಾಂಕ 27.02.2026 ರಂದು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ತಪಾಸಣೆ ವೇಳೆ ಒಟ್ಟು 10 ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ಮಾಡಲಾಗಿದೆ. ಈ ಮಾದರಿಯನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲೂ ಮಾಡುವ ಸಾಧ್ಯತೆ ಇದೆ.

ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳಲ್ಲಿ ಈ ವಿಷಯ ಪರಿಶೀಲನೆ
1. ವ್ಯಾಪಾರ ಪರವಾನಗಿ (Trade License) ಮಾನ್ಯತೆ
2. ಆರೋಗ್ಯ ಮತ್ತು ಸ್ವಚ್ಛತಾ ಮಾನದಂಡಗಳು
3. ಶೀತಲೀಕರಣ ವ್ಯವಸ್ಥೆ (Cold Storage)
4. ಮಾಂಸದ ಸಂಗ್ರಹಣೆ ಹಾಗೂ ಪ್ರದರ್ಶನ ವಿಧಾನ
5. ಕಸದ ವಿಲೇವಾರಿ ವ್ಯವಸ್ಥೆ
6. ಸಿಬ್ಬಂದಿ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು
ಮಾನದಂಡಗಳನ್ನು ಪಾಲಿಸದ ಮಳಿಗೆಗಳಿಗೆ ನೋಟಿಸ್ ಜಾರಿ
ಇನ್ನು ಬೆಂಗಳೂರಿನಲ್ಲಿ ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳ ಕೆಲವೊಂದು ಪ್ರಮುಖ ತಪಾಸಣೆ ಮಾಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ತಪಾಸಣೆಯಲ್ಲಿ ಕೆಲವು ಮಳಿಗೆಗಳಲ್ಲಿ ಪರವಾನಗಿ ನವೀಕರಣ ಮಾಡದಿರುವುದು, ಸ್ವಚ್ಛತಾ ಕೊರತೆ, ಮತ್ತು ನಿಯಮಿತ ಆರೋಗ್ಯ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸದಿರುವುದು ಕಂಡುಬಂದಿದ್ದು, ಸಂಬಂಧಿಸಿದ ಮಳಿಗೆ ಮಾಲೀಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಅಗತ್ಯ ದಾಖಲೆಗಳನ್ನು ಹೊಂದಿರದ ಹಾಗೂ ನಿಯಮ ಉಲ್ಲಂಘನೆ ಮಾಡಿದ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಲಿಕೆಯ ನಿಯಮಾವಳಿಗಳ ಪ್ರಕಾರ, ಮಾಂಸ ಮಾರಾಟ ಮಳಿಗೆಗಳು ಸ್ವಚ್ಛತೆ, ಆರೋಗ್ಯ ಮತ್ತು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಮಾಂಸವನ್ನು ಸ್ವಚ್ಛ ಹಾಗೂ ವ್ಯಾಪಾರ ಪರವಾನಗಿ ಹೊಂದಿರುವ ಮಳಿಗೆಗಳಿಂದ ಮಾತ್ರ ಖರೀದಿಸಲು ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸಹ ಯಲಹಂಕ ಉಪನಗರ ಸೇರಿದಂತೆ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಇಂತಹ ತಪಾಸಣೆ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಈ ತಪಾಸಣೆ ವೇಳೆ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ಆರ್. ಮನೋಹರ್ ಹಾಗೂ ಸಿಬ್ಬಂದಿ ನಾರಾಯಣರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1533, ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿ, ಅಮೃತಹಳ್ಳಿ ಮುಖ್ಯರಸ್ತೆ, ಬ್ಯಾಟರಾಯನಪುರ, ಬೆಂಗಳೂರು.
ಇ-ಮೇಲ್[email protected]












Click it and Unblock the Notifications