Property Tax: ಮಂತ್ರಿಮಾಲ್‌ಗೆ ಕೊಂಚ ರಿಲೀಫ್: ಬಾಕಿ ₹30 ಕೋಟಿ ತೆರಿಗೆಯಲ್ಲಿ ಕಟ್ಟಿದ್ದೆಷ್ಟು?
Bengaluru Property Tax: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಒಟ್ಟು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಗುರಿ ತಲುಪಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಯಾವೆಲ್ಲ ವಾಣಿಜ್ಯ ಕಟ್ಟಡಗಳು ಇವೆ, ಅವುಗಳ ವಿರುದ್ಧ ಜಿಬಿಎ ಕಠಿಣ ಆದೇಶ ಹೊರಡಿಸಿದೆ. ತೆರಿಗೆ ಪಾವತಿಸದಿದ್ದರೆ ಮುಲಾಜಿಲ್ಲದೇ ಕಟ್ಟಡ ಸೀಲ್ ಮಾಡುವುದಾಗಿ ಎಚ್ಚರಿಸಿತ್ತು. ನಗರದ ಪ್ರತಿಷ್ಠಿತ ಮಂತ್ರಿಮಾಲ್ ಗೂ ಬೀಗ ಜಡಿಯಲಾಗಿತ್ತು. ಇಂದು ಶುಕ್ರವಾರ ಬಾಕಿ ತೆರಿಗೆಯಲ್ಲಿ ಒಂದಷ್ಟು ಹಣ ಕಟ್ಟಿದ ಮಾಲ್‌ಗೆ ಕೊಂಚ ರಿಲೀಫ್ ಸಿಕ್ಕಿದೆ.
ರಾಜಧಾನಿಯ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಒಂದಾಗಿರುವ ಮಂತ್ರಿಮಾಲ್ ಪ್ರತಿ ಬಾರಿಯು ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಮತ್ತು ಪಾಲಿಕೆ ಅಧಿಕಾರಿಗಳು ಬಂದ ಮಾಲ್‌ಗೆ ಬೀಗ ಜಡಿದ ವಿಚಾರವಾಗಿ ಸುದ್ದಿಯಾಗುತ್ತಿತ್ತು. ಕಳೆದ ವಾರ ಸಹಿತ ಒಟ್ಟು 30,81,45,600 ರೂಪಾಯಿ ಬಾಕಿ ಉಳಿಸಿಕೊಂಡಿದ್ದ ಮಂತ್ರಿಮಾಲ್‌ಗೆ ಅಧಿಕಾರಿಗಳು ಬೀಗ ಜಡಿದಿದ್ದರು. ನೋಟಿಸ್‌ಗೂ ಸ್ಪಂದಿಸದ ಕಾರಣ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

05 ಕೋಟಿ ರೂಪಾಯಿ ತೆರಿಗೆ ಪಾವತಿ
ಎಚ್ಚೆತ್ತ ಮಂತ್ರಿಮಾಲ್ ಆಡಳಿತ ಮುಖ್ಯಸ್ಥರು ಹಾಗೂ ಮಾಲೀಕರು ಇಂದು ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಬಾಕಿ ಆಸ್ತಿ ತೆರಿಗೆ ಪೈಕಿ 5.00 ಕೋಟಿ ರೂಪಾಯಿ ಪಾವತಿಸಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆಯಿಂದ ಚಿಕ್ಕಪೇಟೆಯಲ್ಲಿ ಅವರು ಆಸ್ತಿ ತೆರಿಗೆ ಪಾವತಿ, ಬಾಕಿ ಉಳಿಸಿಕೊಂಡವರ ಕುರಿತು ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಈ ವೇಳೆ ಉಚ್ಚ ನ್ಯಾಯಾಲಯದ ಆದೇಶದಂತೆ ಮಂತ್ರಿ ಮಾಲ್ ನಿಂದ ಬೆಂಗಳೂರು ಕೇಂದ್ರ ನಗರಪಾಲಿಕೆಗೆ ಕಟ್ಟಬೇಕಾಗಿರುವ ಬಾಕಿ ಮೊತ್ತದಲ್ಲಿ ಇಂದು ರೂ. 5.00 ಕೋಟಿಗಳ ಚೆಕ್ ಅನ್ನು ಮಂತ್ರಿಮಾಲ್ ನಿಂದ ಆಯುಕ್ತರಿಗೆ ನೀಡಲಾಯಿತು.
ಪರಿಶೀಲನೆ ಕಾರ್ಯದಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರುಗಳಾದ ಹೇಮಂತ್ ಶರಣ್, ರಂಗನಾಥ್, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್, ಸಹ ಕಂದಾಯ ಅಧಿಕಾರಿಗಳು ಹಾಗೂ ಕಂದಾಯ ವಿಭಾಗದ 100 ಕ್ಕೂ ಅಧಿಕ ಸಿಬ್ಬಂದಿ ಉಪಸ್ಥಿತರಿದ್ದರು. ಬಾಕಿ ತೆರಿಗೆಯನ್ನ ಮುಂದಿನ ದಿನಗಳಲ್ಲಿ ಕಟ್ಟುವುದಾಗಿ ಮಂತ್ರಿಮಾಲ್ ತಿಳಿಸಿದೆ ಎನ್ನಲಾಗಿದೆ.
ಬೃಹತ್ ಆಸ್ತಿ ತೆರಿಗೆ ಮೊತ್ತದಲ್ಲಿ ಅಲ್ಪ ತೆರಿಗೆ ಕಟ್ಟುವ ಮೂಲಕ ತಾತ್ಕಲಿಕವಾಗಿ ಮಂತ್ರಿಮಾಲ್ ರಿಲೀಫ್ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತೆ ಬಾಕಿ ಉಳಿಸಿಕೊಂಡರೆ ಮತ್ತೆ ಜಿಬಿಎ ನೋಟಿಸ್ ನೀಡಲಿದೆ. ಸ್ಪಂದಿಸದಿದ್ದರೆ ಮತ್ತೆ ಮಾಲ್ ಅನ್ನು ಸೀಲ್ ಮಾಡಲಿದೆ. ಏಕೆಂದರೆ ಇಂತಹ ವರ್ತನೆ ತೋರಿದ್ದರಿಂದಲೇ ಕೆಲವು ಬಾರಿ ಮಂತ್ರಿಮಾಲ್‌ಗೆ ಅಧಿಕಾರಿಗಳು ಈ ಹಿಂದೆ ಬೀಗ ಹಾಕಿದ್ದರು.
6700 ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ಜಿಬಿಎ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ 6700 ಕೋಟಿ ರೂಪಾಯಿ ಆಸ್ತಿ ಸಂಗ್ರಹಿಸುವ ಗುರಿ ನೀಡಲಾಗಿದೆ. ಆದರೆ ಈ ಬಾರಿ ಕೇಲವ 3533 ಕೋಟಿ ರೂಪಾಯಿ ಸಂಗ್ರಹ ಮಾತ್ರ ಆಗಿದೆ. ಹೀಗಾಗಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳ ವಿರುದ್ಧ ಜಿಬಿಎ ತೆರಿಗೆ ಸಂಗ್ರಹದ ಸಮರ ಸಾರಿದೆ. ತೆರಿಗೆ ಸಂಗ್ರಹದ ಗುರಿ ತಲುಪುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ ಇತ್ತೀಚೆಗೆ ಆದೇಶಿಸಲಾಗಿತ್ತು.












Click it and Unblock the Notifications