ಚುಡಾಯಿಸಿದ್ದನ್ನು ಪ್ರಶ್ನಿಸಿದ ಮಣಿಪುರ ವಿದ್ಯಾರ್ಥಿಗೆ ಥಳಿತ
ಬೆಂಗಳೂರು, ನ. 20: ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು ಸ್ವಯಂ ಪ್ರೇರಿತವಾಗಿ ತಡೆಯಲು ಮುಂದಾಗಬೇಕು ಎಂದು ಮಾಧ್ಯಮಗಳು, ಸಂಘ ಸಂಸ್ಥೆಗಳೂ, ಸರ್ಕಾರ ಹೇಳುತ್ತಿವೆ. ಆದರೆ ಹುಡುಗಿಯೊಬ್ಬಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿ ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದಾನೆ.
ಬೆಂಗಳೂರು ಕೊತ್ತನೂರು ಸಮೀಪದ ಭೈರತಿ ಕ್ರಾಸ್ ನಲ್ಲಿ ಪಾನಮತ್ತ ಯುವಕರ ಗುಂಪೊಂದು ಮಣಿಪುರದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದೆ.[ಮಣಿಪುರ ವಿದ್ಯಾರ್ಥಿ ಹಲ್ಲೆ ಆರೋಪಿಗಳು ಅಂದರ್]

ಕೊತ್ತನೂರು ಇಂಡೋ-ಏಷ್ಯನ್ ಅಕಾಡೆಮಿಯಲ್ಲಿ ಅಂತಿಮ ವರ್ಷದ ಬಿಇ ಓದುತ್ತಿರುವ ಸ್ಯಾಮ್ಯುಯಲ್ ಕಾಲೇಜಿನ ಪಕ್ಕದಲ್ಲೇ ವಾಸವಿದ್ದ. ಬುಧವಾರ ಸಂಜೆ ಸ್ನೇಹಿತನ ಮನೆಗೆ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಎದುರಿಗಿನಿಂದ ಬಂದ ಪಾನಮತ್ತ 3 ಜನ ಯುವಕರ ತಂಡ ಸ್ಥಳೀಯ ಯುವತಿಯೋರ್ವಳನ್ನು ಚುಡಾಯಿಸಿದೆ. ಇದನ್ನು ಪ್ರಶ್ನಿಸಿದ ಸ್ಯಾಮ್ಯುಯಲ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕರು ಹಲ್ಲೆ ನಡೆಸಿದ್ದಾರೆ.
ಮೊದಲು ಸ್ಯಾಮ್ಯುಯಲ್ ಮುಖಕ್ಕೆ ಗುದ್ದಿದ್ದಾರೆ. ಕೆಳಕ್ಕೆ ಬಿದ್ದ ವಿದ್ಯಾರ್ಥಿ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಸ್ಯಾಮ್ಯುಯಲ್ ನನ್ನು ಸ್ಥಳೀಯರು ಸಮೀಪದ ಆಸ್ತತ್ರೆಗೆ ದಾಖಲಿಸಿದ್ದಾರೆ.[ಹಲ್ಲೆ ಪ್ರಕರಣ, ಸಿಎಂ ಜೊತೆ ರಾಜನಾಥ್ ಮಾತುಕತೆ]
ವಿದ್ಯಾರ್ಥಿ ತಲೆಗೆ ಗಂಭೀರ ಗಾಯಗಳಾಗಿದ್ದು ಎರಡು ಹೊಲಿಗೆ ಹಾಕಲಾಗಿದೆ. ಈಶಾನ್ಯ ರಾಜ್ಯದ ವಿದ್ಯಾರ್ಥಿ ಎಂಬ ಕಾರಣಕ್ಕೆ ಹಲ್ಲೆ ನಡೆದಿಲ್ಲ. ಆರೋಪಿಗಳ ಮಾಹಿತಿ ಕಲೆಹಾಕಲಾಗಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ 14 ರಂದು ಕನ್ನಡ ಮಾತನಾಡಿಲ್ಲ ಎಂಬ ಕಾರಣಕ್ಕೆ ಬಿಎಂಎಸ್ ಕಾಲೇಜಿನ ಮಣಿಪುರದ ವಿದ್ಯಾರ್ಥಿಯೊಬ್ನ ಮೇಲೆ ಹಲ್ಲೆ ನಡೆದಿತ್ತು.












Click it and Unblock the Notifications