ಬೆಂಗಳೂರಿನಲ್ಲಿ ಉದ್ಯೋಗ ಕಸಿದುಕೊಳ್ಳಲಿದೆ ಎಐ; ಇಲ್ಲಿದೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ಬೆಂಗಳೂರು, ಏಪ್ರಿಲ್ 29: ಡಿಸಿಎಂ ಡಿಕೆ ಶಿವಕುಮಾರ್ ಅವರು ಏಪ್ರಿಲ್ 28ರಂದು ನಡೆದ ಫ್ಯೂಚರ್ ಆಫ್ ವರ್ಕ್ ಶೃಂಗಸಭೆಯಲ್ಲಿ ಮಾತನಾಡುತ್ತಾ, ಭಾರತದಲ್ಲಿ ತಂತ್ರಜ್ಞಾನದ ಭವಿಷ್ಯ ರೂಪಿಸುವಲ್ಲಿ ಬೆಂಗಳೂರಿನ ಪಾತ್ರ ಬಹಳ ದೊಡ್ಡದು. ಜಾಗತಿಕ ನಾಯಕರು ಮತ್ತು ಉದ್ಯಮಿಗಳು ಭಾರತಕ್ಕೆ ಭೇಟಿ ನೀಡುವಾಗ ನವದೆಹಲಿಗೆ ಹೋಗುವ ಮೊದಲೇ ಬೆಂಗಳೂರಿಗೆ ಭೇಟಿ ನೀಡಲು ಆದ್ಯತೆ ನೀಡುತ್ತಾರೆ ಎಂದು ಅವರು ಹೇಳಿದರು.
ಇಡೀ ಜಗತ್ತು ಬೆಂಗಳೂರಿನ ಮೂಲಕ ಭಾರತದತ್ತ ನೋಡುತ್ತಿದೆ. ಭಾರತದ ಆರ್ಥಿಕ ಮತ್ತು ಐಟಿ ಸಾಮರ್ಥ್ಯವನ್ನು ಅಳೆಯಲು ಜಗತ್ತು ಬೆಂಗಳೂರನ್ನು ಒಂದು ಮಾನದಂಡವಾಗಿ ಬಳಸುತ್ತಿದೆ. ಬೆಂಗಳೂರು 22.6 ದಶಲಕ್ಷಕ್ಕೂ (2.26 ಕೋಟಿ) ಹೆಚ್ಚು ಐಟಿ ವೃತ್ತಿಪರರಿಗೆ ನೆಲೆಯಾಗಿದೆ. ಪ್ರತಿಭೆ ಮತ್ತು ಹವಾಮಾನದ ವಿಚಾರದಲ್ಲಿ ಈ ನಗರಕ್ಕೆ ಮತ್ಯಾವ ನಗರವೂ ಸಾಟಿಯಿಲ್ಲ ಎಂದು ಹೇಳಿದರು.

ಎಐ ಬಗ್ಗೆ ಆತಂಕ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ.ಶಿ
ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವದ ಕುರಿತು ಅವರು ಆತಂಕ ವ್ಯಕ್ತಪಡಿಸಿದರು. "ಜಾಗತಿಕ ಮಟ್ಟದ ಐಟಿ ಹಬ್‌ಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ತಾಂತ್ರಿಕ ನೈಪುಣ್ಯತೆ ಹೊಂದಿರುವ ಉದ್ಯೋಗಿಗಳಿದ್ದಾರೆ. ಬೆಂಗಳೂರಿನ ಹಿತಕರವಾದ ಹವಾಮಾನವು ಹೂಡಿಕೆದಾರರು ಮತ್ತು ವೃತ್ತಿಪರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ," ಎಂದು ಹೇಳಿದರು. ಅಲ್ಲದೆ, ತಂತ್ರಜ್ಞಾನ ಬೆಳೆದಂತೆಲ್ಲಾ ಕೃತಕ ಬುದ್ಧಿಮತ್ತೆಯು ಹಲವು ಉದ್ಯೋಗಗಳಿಗೆ ಸವಾಲಾಗಬಹುದು ಎಂಬ ಆತಂಕವನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
"ಕೃತಕ ಬುದ್ಧಿಮತ್ತೆ (AI)ಯಿಂದ ಬೆಂಗಳೂರು ಮತ್ತು ದೇಶದ ವಿವಿಧ ಭಾಗಗಳಲ್ಲಿ ಶೇಕಡಾ 50 ರಷ್ಟು ಉದ್ಯೋಗಗಳನ್ನು ಕಳೆದುಕೊಳ್ಳಬಹುದು. ಇದು ಭವಿಷ್ಯದ ಅತ್ಯಂತ ದೊಡ್ಡ ಸವಾಲು," ಎಂದು ಆತಂಕ ವ್ಯಕ್ತಪಡಿಸಿದರು. ಇನ್ನೂ "ಮುಂಬೈನ ಜೀವನ ವೆಚ್ಚಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದರಗಳು ಇಂದಿಗೂ ಕೈಗೆಟುಕುವಂತಿವೆ. ಮುಂಬೈನಲ್ಲಿ ಬಾಡಿಗೆ ಸ್ಥಳಕ್ಕೆ 3.5 ಡಾಲರ್ ವೆಚ್ಚವಾದರೆ, ಬೆಂಗಳೂರಿನಲ್ಲಿ ಅದನ್ನು 1 ಡಾಲರ್‌ನಲ್ಲೇ ನಿಭಾಯಿಸಬಹುದು," ಎಂದು ಅವರು ಹೇಳಿದರು.
ಎಂ.ಬಿ. ಪಾಟೀಲ್ ಹೇಳಿದ್ದೇನು?
"ಎಲ್ಲಾ ಫಾರ್ಚೂನ್ 500 ಕಂಪನಿಗಳು ಈಗಾಗಲೇ ಬೆಂಗಳೂರಿನಲ್ಲಿವೆ ಮತ್ತು ಎನ್ವಿಡಿಯಾ ಕೂಡ ಅವುಗಳಲ್ಲಿ ಒಂದು," ಎಂದು ಎಂ.ಬಿ. ಪಾಟೀಲ್ ಅವರು ಹೇಳಿದರು. ಎನ್ವಿಡಿಯಾ ಕಂಪನಿಯು ಬೆಂಗಳೂರಿನ ಮಹದೇವಪುರ ಭಾಗದಲ್ಲಿ ಸುಮಾರು 7.6 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳವನ್ನು 10 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದೆ. ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರನ್ನು ತಮ್ಮ ನೆಚ್ಚಿನ ತಾಣವಾಗಿ ಆರಿಸಿಕೊಳ್ಳುತ್ತಿರುವುದು ನಗರದ ಜಾಗತಿಕ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಎನ್ವಿಡಿಯಾ ಕಂಪನಿಯು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿ ಕಚೇರಿ ಆರಂಭಿಸುತ್ತಿರುವುದು ಸ್ವಾಗತಾರ್ಹ. ಬೆಂಗಳೂರು ಈಗಾಗಲೇ ವಿಶ್ವದ ಅಗ್ರಗಣ್ಯ ಕಂಪನಿಗಳ ಕೇಂದ್ರವಾಗಿದ್ದು, ಎನ್ವಿಡಿಯಾ ಸೇರ್ಪಡೆಯು ನಗರದ ತಾಂತ್ರಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಒಂದು ಬೃಹತ್ ಸೆಮಿಕಂಡಕ್ಟರ್ ಯೋಜನೆಗೆ ಸಹಿ ಹಾಕಿದೆ ಎಂದು ಮಾಹಿತಿ ನೀಡಿದ ಅವರು, ಅದರ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಿಲ್ಲ. ಇದೇ ವೇಳೆ ಅವರು ಕೃತಕ ಬುದ್ಧಿಮತ್ತೆಯಿಂದ (AI) ಉದ್ಯೋಗ ನಷ್ಟವಾಗುವ ಆತಂಕದ ಬಗ್ಗೆಯೂ ಮಾತನಾಡಿದರು.
'AI ತಂತ್ರಜ್ಞಾನಕ್ಕೆ ಹೊಂದಿಕೊಳ್ಳದಿದ್ದರೆ ತುಂಬಾ ಕಷ್ಟ'
"ನಾವು ಐಟಿ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ ಮತ್ತು ಈಗ AI ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾದ ಸಮಯ ಬಂದಿದೆ. ನಮ್ಮಲ್ಲಿ ಪ್ರತಿಭೆಯಿದ್ದರೂ ಸಹ, AI ಕಾರಣದಿಂದಾಗಿ ಉದ್ಯೋಗ ಕಡಿತದಂತಹ ಸಮಸ್ಯೆಗಳು ಎದುರಾಗುವುದು ಅನಿವಾರ್ಯ," ಎಂದು ಸಚಿವ ಎಂಬಿ ಪಾಟೀಲ್ ಅವರು ಹೇಳಿದ್ದಾರೆ.












Click it and Unblock the Notifications