Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ನಡೆದ ಲಂಬೋರ್ಗಿನಿ ಡ್ರಿಫ್ಟಿಂಗ್ (ಡೋನಟ್) ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮಾಜಿ ಭೂಗತ ಪಾತಕಿ, ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸೇರಿದೆಯೆನ್ನಲಾದ ಈ ಐಷಾರಾಮಿ ಲಂಬೋರ್ಗಿನಿ ಕಾರು ತಮ್ಮ ಬಳಿ ನೋಂದಣಿಯೇ ಆಗಿಲ್ಲ ಎಂದು ಪ್ರಾದೇಶಿಕ ಸಾರಿಗೆ ಕಚೇರಿ (RTO - ದಕ್ಷಿಣ) ಅಧಿಕಾರಿಗಳು ಪೊಲೀಸರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ನಕಲಿ ನಂಬರ್ ಪ್ಲೇಟ್ ಜಾಲದ ಸತ್ಯ ಬಯಲಾಗಿದೆ. ಘಟನೆಯ ತನಿಖೆ ಚುರುಕುಗೊಂಡಂತೆ ಅಚ್ಚರಿಯ ಮಾಹಿತಿಗಳು ಹೊರಬೀಳುತ್ತಿವೆ.
ನಕಲಿ ನಂಬರ್ ಪ್ಲೇಟ್
ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಜಪ್ತಿ ಮಾಡಿರುವ ಬಿಳಿ ಬಣ್ಣದ ಐಷಾರಾಮಿ ಸ್ಪೋರ್ಟ್ಸ್ ಲಂಬೋರ್ಗಿನಿ ಕಾರು 'KA 05 NR 0009' ಎಂಬ ಫ್ಯಾನ್ಸಿ ನಂಬರ್ ಪ್ಲೇಟ್ ಹೊಂದಿತ್ತು. ಆದರೆ ಪೊಲೀಸರ ತನಿಖೆ ವೇಳೆ ಈ ಕಾರಿನ ಅಸಲಿ ನೋಂದಣಿ ಸಂಖ್ಯೆ 'DL-1 CT-1515' (ದೆಹಲಿ ನೋಂದಣಿ) ಎಂಬುದು ಬೆಳಕಿಗೆ ಬಂದಿದೆ. ತೆರಿಗೆ ಪಾವತಿಸದೆ ಈ ವಾಹನವನ್ನು ಬಳಸುತ್ತಿದ್ದಕ್ಕಾಗಿ ಕಳೆದ ವರ್ಷ ಅಕ್ಟೋಬರ್ 28 ರಂದೇ ಆರ್ ಟಿ ಓ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಹಾಕೆ ಅಕ್ಷಯ್ ಮಚ್ಚೀಂದ್ರ, "ವಾಹನದ ದಾಖಲೆಗಳ ವಿವರಗಳನ್ನು ಕೋರಿ ನಾವು ಆರ್ ಟಿ ಓ (ದಕ್ಷಿಣ) ಕಚೇರಿಗೆ ಪತ್ರ ಬರೆದಿದ್ದೆವು. ಆದರೆ, ಈ ಲಂಬೋರ್ಗಿನಿ ಕಾರು ತಮ್ಮ ಕಚೇರಿಯಲ್ಲಿ ನೋಂದಣಿಯಾಗಿಲ್ಲ ಎಂದು ಆರ್ ಟಿ ಓ ಅಧಿಕಾರಿಗಳು ಮರುಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ," ಎಂದು ತಿಳಿಸಿದ್ದಾರೆ.

ಡಿಸಿಪಿ ಅವರ ಪ್ರಕಾರ, KA-05-NR-0009 ಎಂಬ ಫ್ಯಾನ್ಸಿ ನಂಬರ್ ಗಾಗಿ ಅರ್ಜಿ ಸಲ್ಲಿಸಿದ ನಂತರ ರಿಕ್ಕಿ ರೈ ಅವರು ಜನವರಿ 27 ರಂದು ಸಾರಿಗೆ ಇಲಾಖೆಯಿಂದ ಚಲನ್ ಪಡೆದಿದ್ದರು. ಆದರೆ ಮರು ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಮತ್ತು ನಕಲಿ ನಂಬರ್ ಬಳಕೆಯಾಗಿದೆ ಎಂದು ಹೇಳಲಾಗಿದೆ.
ಸ್ಟಂಟ್ ಅಲ್ಲ, ಕೇವಲ ಬ್ರೇಕ್ ಸ್ಕಿಡ್ ಎಂದ ವಕೀಲರು
ಕಳೆದ ವಾರ ತಡರಾತ್ರಿ 2 ರಿಂದ 3 ಗಂಟೆಯ ಸುಮಾರಿಗೆ ಅನಿಲ್ ಕುಂಬ್ಳೆ ವೃತ್ತ ಮತ್ತು ಕ್ವೀನ್ಸ್ ವೃತ್ತದ ಬಳಿ ಕಾರು ಡ್ರಿಫ್ಟಿಂಗ್ ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆದ ನಂತರ ಕಾರು ತೀವ್ರ ತಪಾಸಣೆಗೆ ಒಳಪಟ್ಟಿತ್ತು. ಆದರೆ, ಈ ಪ್ರಕರಣದ ಬಗ್ಗೆ ರಿಕ್ಕಿ ರೈ ಪರ ವಕೀಲರು ಬೇರೆಯದೇ ವಾದ ಮಂಡಿಸಿದ್ದಾರೆ. "ಇದು ಉದ್ದೇಶಪೂರ್ವಕವಾಗಿ ಮಾಡಿದ ಸ್ಟಂಟ್ ಅಲ್ಲ, ಬದಲಾಗಿ ಬ್ರೇಕ್ ಹಾಕಿದಾಗ ಕಾರು ಸ್ಕಿಡ್ ಆಗಿದೆ," ಎಂದು ಅವರು ವಾದಿಸಿದ್ದಾರೆ.
ನಿರೀಕ್ಷಣಾ ಜಾಮೀನು ಪಡೆದ ಬಳಿಕ ಸೋಮವಾರ ಸಂಜೆ ಕಬ್ಬನ್ ಪಾರ್ಕ್ ಸಂಚಾರಿ ಠಾಣೆ ಪೊಲೀಸರ ಮುಂದೆ ಹಾಜರಾದ ರಿಕ್ಕಿ ರೈ, ಎಂ.ಜಿ.ರಸ್ತೆಯಲ್ಲಿ ಘಟನೆ ನಡೆದಾಗ ನಾನು ಕಾರು ಚಲಾಯಿಸುತ್ತಿರಲಿಲ್ಲ ಎಂದು ಹೇಳಿಕೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಪರ ವಕೀಲ ಜಿ. ನಾರಾಯಣಸ್ವಾಮಿ, "ಈ ಘಟನೆಯನ್ನು ಡ್ರಿಫ್ಟಿಂಗ್ ಸ್ಟಂಟ್ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಘಟನೆ ನಡೆದಾಗ ರಿಕ್ಕಿ ರೈ ಕಾರು ಓಡಿಸುತ್ತಿರಲಿಲ್ಲ, ಅವರ ಚಾಲಕ ಕಾರಿನ ಸ್ಟೀರಿಂಗ್ ಹಿಡಿದಿದ್ದ. ಆ ಸಮಯದಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಇರಲಿಲ್ಲ, ಹೀಗಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ," ಎಂದು ಸಮರ್ಥಿಸಿಕೊಂಡಿದ್ದಾರೆ.
"ಇತ್ತೀಚೆಗಷ್ಟೇ ದುರಸ್ತಿ ಕಂಡಿದ್ದ ರಸ್ತೆಯಲ್ಲಿ ಮಣ್ಣು ಬಿದ್ದಿತ್ತು. ಆ ಜಾಗದಲ್ಲಿ ಚಾಲಕ ಅಚಾನಕ್ ಆಗಿ ಬ್ರೇಕ್ ಹಾಕಿದಾಗ ಕಾರು ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ. ಆದರೂ ಚಾಲಕ ತಕ್ಷಣವೇ ಕಾರನ್ನು ನಿಯಂತ್ರಿಸಿ ಮುಂದೆ ಸಾಗಿದ್ದಾನೆ. ಆತನ ಚಾಲನಾ ಕೌಶಲ್ಯವನ್ನು ಮೆಚ್ಚಬೇಕು, ಸುಮ್ಮನೆ ಆರೋಪ ಮಾಡಬಾರದು" ಎಂದು ಡಿಫೆನ್ಸ್ ವಕೀಲರು ತಿಳಿಸಿದ್ದಾರೆ. ಜೊತೆಗೆ ಪೊಲೀಸರ ಕ್ರಮವನ್ನು ಕಟುವಾಗಿ ಪ್ರಶ್ನಿಸಿರುವ ನಾರಾಯಣಸ್ವಾಮಿ ಅವರು, "ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಸಣ್ಣಪುಟ್ಟ ದಂಡ ವಿಧಿಸಲಾಗುತ್ತದೆ ಮತ್ತು ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಆದರೆ ಇಲ್ಲಿ ಉದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಿ ರಿಕ್ಕಿ ರೈ ಅವರನ್ನು ಗುರಿಯಾಗಿಸಲಾಗುತ್ತಿದೆ," ಎಂದು ಆರೋಪಿಸಿದ್ದಾರೆ.
ಇದರ ನಡುವೆ, ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಕಾರಿನ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಬಗ್ಗೆ ಚಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದು, ನಕಲಿ ನಂಬರ್ ಪ್ಲೇಟ್ ಹಾಗೂ ಅಪಾಯಕಾರಿ ಚಾಲನೆ ಕುರಿತಂತೆ ಪ್ರಕರಣದ ಮುಂದಿನ ತನಿಖೆ ತೀವ್ರಗೊಂಡಿದೆ. ಭವಿಷ್ಯದಲ್ಲಿ ನಗರದ ರಸ್ತೆಗಳಲ್ಲಿ ಇಂತಹ ದುಸ್ಸಾಹಸಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.












Click it and Unblock the Notifications