ಬಾಷ್ ನಿಂದ ಲಾಲ್ ಬಾಗ್ ನಲ್ಲಿ 'ಕ್ಲೀನ್ ಅಂಡ್ ಗ್ರೀನ್’ ಅಭಿಯಾನ
ಬೆಂಗಳೂರು, ಅಕ್ಟೋಬರ್ 08: ತಂತ್ರಜ್ಞಾನ ಮತ್ತು ಸೇವಾ ಪೂರೈಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ದಾಪುಗಾಲು ಹಾಕಿದೆ.
ಬಾಷ್ ಸಂಸ್ಥೆಯು 2017 ರಿಂದ ಲಾಲ್‍ಬಾಗ್ ಜತೆ ತನ್ನ ಸಾಮಾಜಿಕ ಹೊಣೆಗಾರಿಕೆ ಉಪಕ್ರಮವನ್ನು ಕೈಗೊಳ್ಳುತ್ತಿದೆ. ಸ್ಮಾರ್ಟ್ ಪಾರ್ಕಿಂಗ್, ಕೆರೆಗಳ ಸುತ್ತಮುತ್ತ ವಾಯುವಿಹಾರ ಮಾರ್ಗ ನಿರ್ಮಾಣ, ತ್ಯಾಜ್ಯ ನಿರ್ವಹಣೆ ಸುಧಾರಣೆ ಮತ್ತು ಲಾಲ್‍ಬಾಗ್‍ನಲ್ಲಿ ಸೋಲಾರ್ ಪ್ಯಾನೆಲ್‍ಗಳನ್ನು ಅಳವಡಿಸುವುದು ಸೇರಿದಂತೆ ಮತ್ತಿತರೆ ಕ್ರಮಗಳನ್ನು ಕೈಗೊಂಡಿದೆ.
ಕಳೆದ 60 ವರ್ಷಗಳಿಂದ ಬಾಷ್ ಭಾರತದಲ್ಲಿ ಕೇವಲ ತಂತ್ರಜ್ಞಾನ ಮತ್ತು ಆವಿಷ್ಕಾರಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದಷ್ಟೇ ಅಲ್ಲ, ಸಾಮಾಜಿಕ ಹೊಣೆಗಾರಿಕೆಯಲ್ಲೂ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಾಷ್ ಲಾಲ್‍ಬಾಗ್‍ನ ಸುಸ್ಥಿರತೆಗಾಗಿ 'ಕ್ಲೀನ್ ಅಂಡ್ ಗ್ರೀನ್' ಎಂಬ ಅಭಿಯಾನವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮಕ್ಕೆ ಹಲವಾರು ಸಿಬ್ಬಂದಿ, ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿದ್ದವು. ಸುಮಾರು 240 ಎಕರೆ ಪ್ರದೇಶದಲ್ಲಿರುವ ಲಾಲ್‍ಬಾಗ್‍ನಲ್ಲಿ ಹತ್ತು ಹಲವು ಬಗೆಯ ಅತ್ಯುತ್ತಮವಾದ ಮರಗಳು, ಗಾಜಿನ ಮನೆ ಮತ್ತು ಅತ್ಯಾಕರ್ಷಕವಾದ ಹೂದೋಟವಿದೆ.
ಈ ಸೌಂದರ್ಯದ ಸೊಬಗನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಬಾಷ್ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಜತೆ ಕೈಜೋಡಿಸಿದ್ದು, ಈ ಐತಿಹಾಸಿಕ ಉದ್ಯಾನವನದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಇಂಡಿಯಾ ಗ್ರೂಪ್‍ನ ಅಧ್ಯಕ್ಷರಾಗಿರುವ ಸೌಮಿತ್ರಾ ಭಟ್ಟಾಚಾರ್ಯ ಅವರು ಮಾತನಾಡಿ, "ನಮ್ಮ ವ್ಯವಹಾರದಲ್ಲಿ ಸಮಾಜ ಪ್ರಮುಖ ಪಾಲುದಾರನಾಗಿದೆ ಮತ್ತು ಸಮುದಾಯ ಮತ್ತು ಪರಿಸರ ಸಂರಕ್ಷಣೆ, ಸುಧಾರಣೆ ಮಾಡುವ ನಿಟ್ಟಿನಲ್ಲಿ ಬಾಷ್ ತನ್ನ ಬದ್ಧತೆಯನ್ನು ತೋರಿಸುತ್ತಾ ಬರುತ್ತಿದೆ. ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಬಂದಿದೆ.
"ಬಾಷ್ ಇಂಡಿಯಾ ಸೋಶಿಯಲ್ ಎಂಗೇಜ್‍ಮೆಂಟ್' ಅಡಿ ಸಮುದಾಯದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಬಾಷ್ ಹೆಜ್ಜೆ ಇಟ್ಟಿದೆ'' ಎಂದು ತಿಳಿಸಿದರು.
ಈ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದಡಿ ಬಾಷ್ ಲಾಲ್‍ಬಾಗ್‍ನಲ್ಲಿ ಸ್ಮಾರ್ಟ್ ಪಾರ್ಕಿಂಗ್, ಕೆರೆಯಲ್ಲಿ ವಾಯುವಿಹಾರ ತಾಣ, ಸೋಲಾರ್ ಪೆನಲ್‍ಗಳು ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಲಾಲ್‍ಬಾಗ್ ಉದ್ಯಾನವನದಲ್ಲಿ 2018 ರ ಅಕ್ಟೋಬರ್ 6 ರಂದು ನಡೆದ ಸಮಾರಂಭದಲ್ಲಿ ಹಸ್ತಾಂತರ ಮಾಡಲಾಯಿತು.
ಸಮಗ್ರ ಸಮುದಾಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಾಷ್ ತನ್ನ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ಬಾಷ್ ಬ್ರಿಡ್ಜ್ ಕಾರ್ಯಕ್ರಮವು ಭಾರತದ 16,000 ಕ್ಕೂ ಹೆಚ್ಚು ಜನರ ಜೀವನವನ್ನು ಬದಲಾಯಿಸಿದೆ.
ಕಂಪನಿಯ ಸಾಮಾಜಿಕ ಹೊಣೆಗಾರಿಕೆ ವಿಭಾಗ ಮಕ್ಕಳ ಆರೋಗ್ಯ ಅಭಿವೃದ್ಧಿ, ಶಿಕ್ಷಣ ಮತ್ತು ಕ್ಷೇಮದ ಕಡೆಗೆ ಹೆಚ್ಚಿನ ಗಮನಹರಿಸಿ ದೇಶದ ಭವಿಷ್ಯಕ್ಕೆ ಒಂದು ರೂಪುರೇಷೆ ತರುತ್ತಿದೆ. ಇದಲ್ಲದೇ ಬಾಷ್ 300 ಸರ್ಕಾರಿ ಶಾಲೆಗಳಲ್ಲಿ ಸಮಗ್ರ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ವರ್ಷದಲ್ಲಿ 70,000 ಕ್ಕೂ ಅಧಿಕ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದೆ.
ಭಾರತದ ಅತಿದೊಡ್ಡ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡುತ್ತಿರುವ ಸಂಸ್ಥೆಯಾಗಿರುವ ಅಕ್ಷಯ ಪಾತ್ರ ಫೌಂಡೇಷನ್ ಸಹಯೋಗದಲ್ಲಿ ಬಾಷ್ ಪ್ರತಿದಿನ ಸರ್ಕಾರಿ ಶಾಲೆಗಳ 15,000 ಕ್ಕೂ ಹೆಚ್ಚು ಮಕ್ಕಳಿಗೆ ಬಿಸಿಯೂಟ ಪೂರೈಕೆ ಮಾಡುತ್ತಿದೆ.












Click it and Unblock the Notifications