KR Pura-Bengaluru Airport Metro Line: ಕಾಮಗಾರಿ ಚುರುಕು, ಯು-ಗರ್ಡರ್ಸ್ ನಿರ್ಮಾಣ ಪೂರ್ಣ
ಬೆಂಗಳೂರು, ಏಪ್ರಿಲ್ 18: ಬೆಂಗಳೂರು ನಮ್ಮ ಮೆಟ್ರೋದ ಬಹುನಿರೀಕ್ಷೆಯ ಕೆ.ಆರ್.ಪುರಂ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ (KIA) ಇವರು ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ಈ ಲೈನ್‌ನಲ್ಲಿ ಎರಡು ಸೆಟ್‌ನಲ್ಲಿ ಆರಂಭಿಸಿದ್ದ ಗರ್ಡರ್ ನಿರ್ಮಾಣ ಪೂರ್ಣಗೊಂಡಿದೆ.
ಪ್ರಗತಿಯಲ್ಲಿರುವ ಕಾಮಗಾರಿ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು, ಕೆಆರ್ ಪುರಂನಿಂದ ಬೆಂಗಳೂರು ಏರ್‌ಪೋರ್ಟ್ ವರೆಗಿನ ಮೆಟ್ರೋ ಮಾರ್ಗದಲ್ಲಿ ಚಿಕ್ಕಜಾಲ ಬಳಿ ಮೊದಲ ಎರಡು ಸೆಟ್ ಯು-ಗರ್ಡರ್ ನಿರ್ಮಾಣ ಕಾರ್ಯದಲ್ಲಿ ಮೈಲುಗಲ್ಲು ಸಾಧಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತೀಯ ವಾಯು ನೆಲೆ (ಐಎಎಫ್) ಯಲಹಂಕದಿಂದ ವಿಮಾನ ನಿಲ್ದಾಣವರೆಗಿನ ಟರ್ಮಿನಲ್‌ವರೆಗೆ 15.01 ಕಿಲೋ ಮೀಟರ್ ದೂರವಿದೆ. ಇಷ್ಟು ದೂರದ ಮಾರ್ಗದಲ್ಲಿ ಪ್ಯಾಕೇಜ್ 3ರಲ್ಲಿ ಒಟ್ಟು 784 ಮೀಟರ್ ವ್ಯಾಪ್ತಿಯ ಗರ್ಡರ್ ಅನ್ನು ಸ್ಥಾಪಿಸಿ ಲೋಕಾರ್ಪಣೆಗೊಳಿಸಲಾಗಿದೆ ಎಂದು ನಮ್ಮ ಮೆಟ್ರೋ ಬಿಎಂಆರ್‌ಸಿಎಲ್ ಮುಖ್ಯ ಎಂಜಿನಿಯರ್ ಡಿಸಿ ನಟರಾಜ್ ಹೇಳಿದರು.
ನಿಗದಿತ ಸಮಯಕ್ಕಿಂತ ಬೇಗನೇ ನಿರ್ಮಾಣ ಪೂರ್ಣ
ಪ್ರತಿ ಯು ಗರ್ಡರ್ ಉದ್ದ 28 ಮೀಟರ್ ಇದೆ. ಒಟ್ಟು ಎರಡು ಸೆಟ್ ಪೈಕಿ ಮೊದಲ ಸೆಟ್‌ನ ಕೆಲಸವು ಏಪ್ರಿಲ್ 14 ರಂದು ಬೆಳಗ್ಗೆ 5 ಗಂಟೆಗೆ ಪೂರ್ಣಗೊಂಡಿತು. ಮೊದಲ ಸೆಟ್‌ನ ಅನುಭವ ಹೊಂದಿದ್ದ ಅಧಿಕಾರಿಗಳು, ತಂತ್ರಜ್ಞರು ಮತ್ತು ಕಾರ್ಮಿಕರು ಎರಡನೇ ಸೆಟ್ ಗರ್ಡರ್ ರಚನೆಗೆ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳಲಿಲ್ಲ. ನಿಗದಿತ ಸಮಯಕ್ಕಿಂತ 90 ನಿಮಿಷಗಳ ಮುಂಚಿತವಾಗಿ ಪೂರ್ಣಗೊಳಿಸಿದರು. ಈ ಎರಡನೇ ಗರ್ಡರ್ ಏಪ್ರಿಲ್ 16 ರಂದು ಬೆಳಗ್ಗೆ 4 ಗಂಟೆಗೆ ಸಿದ್ಧವಾಯಿತು ಎಂದರು.
ಒಟ್ಟು 165 ಟನ್ ತೂಕದ ಗರ್ಡರ್ ಅನ್ನು ಕ್ರೇನ್‌ಗಳ ಮೂಲಕ ಮೇಲಕ್ಕೆ ಎತ್ತಲಾಗಿದೆ. ಪ್ರತಿಯೊಂದು ಗಿರ್ಡರ್ ಅನ್ನು ದೊಡ್ಡಜಾಲದ ಅಂಗಳದಿಂದ ಟ್ರೇಲರ್ ಮೂಲಕ ಸಾಗಿಸಲಾಯಿತು. ಯೋಜನೆಯ ಗಡುವನ್ನು ನಿಗದಿತ ಕಾಲಮಿತಿಯೊಳಗೆ ಪೂರೈಸಲು ಈ ತ್ವರಿತ ಕೆಲಸವು ಹೆಚ್ಚು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.

ಪಿಲ್ಲರ್ ಡ್ರಿಲ್ಲಿಂಗ್ ಕೆಲಸ ಪ್ರಗತಿ
ಇನ್ನು ಇದೇ ಲೈನ್‌ನಲ್ಲಿ 2,172 ಪಿಲ್ಲರ್ ಡ್ರಿಲ್ಲಿಂಗ್ ಕಾಮಗಾರಿಯು ನಡೆದಿದೆ. ಈ ಪೈಕಿ ಒಟ್ಟು 1,619 ಪಿಲ್ಲರ್ ಡ್ರಿಲ್ಲಿಂಗ್ ಕೆಲಸ ಮುಗಿದಿದೆ. 489 ಪಿಲ್ಲರ್ ಡ್ರಿಲ್ಲಿಂಗ್ ಗಳಲ್ಲಿ 244 ಪಿಲ್ಲರ್ಗಳಿಗೆ ಪೈಲ್ ಕ್ಯಾಪ್ ಮಾಡಲಾಗಿದೆ. 489 ಪಿಲ್ಲರ್‌ಗಳಲ್ಲಿ 195 ಪಿಲ್ಲರ್‌ಗಳು ಸಿದ್ಧವಾಗಿವೆ. 308 ಪಿಲ್ಲರ್ಗಳಲ್ಲಿ 87 ಪಿಲ್ಲರ್‌ಗಳು ಸಿದ್ಧವಾಗಿವೆ ಎಂದು ಅವರು ವಿವರಿಸಿದರು.
ಅತ್ಯಧಿಕ ಜನರು ಓಡಾಡುವ ಮಾರ್ಗವಾಗಿರುವ ಈ ಕೆ.ಆರ್.ಪುರಂನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ ಮೆಟ್ರೋ ಮಾರ್ಗವನ್ನು 2026ರ ಜೂನ್ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಗಡುವು ನೀಡಿದೆ. ಈ ಮಾರ್ಗ ಸಿದ್ಧವಾದರೆ ಲಕ್ಷಾಂತರ ಜನರಿಗೆ ಪ್ರಯಾಣಕ್ಕೆ ಅನುಕೂಲವಾಗಲಿದೆ. ಬೆಂಗಳೂರು ನಗರದಿಂದ ಏರ್‌ಪೋರ್ಟ್ ವರೆಗಿನ ಸಂಚಾರ ಸಮಯಯು ಕಡಿಮೆ ಆಗಲಿದೆ.
69 ಕಿ.ಮೀ.ಗೆ ಮೆಟ್ರೋ ಸೇವೇ ವಿಸ್ತರಣೆ
ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಬಹುದಾದ ಕೆ.ಆರ್.ಪುರಂನಿಂದ ವೈಟ್‌ಫಿಲ್ಡ್‌ವರೆಗಿನ ಮೆಟ್ರೋ ಮಾರ್ಗವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿದೆ. ಇದರಿಂದಾಗಿ ಒಟ್ಟು ಮೆಟ್ರೋ ಮಾರ್ಗ ಸೇವೆ 56 ಕಿಲೋ ಮೀಟರ್‌ನಿಂದ 69 ಕಿಲೋ ಮೀಟರ್‌ಗೆ ಮೆಟ್ರೋ ಸೇವೆ ವಿಸ್ತರಣೆ ಆಯಿತು. ಸದ್ಯ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂವರೆಗಿರುವ ಸುಮಾರು 2ಕಿಲೋಸ ಮೀಟರ್ ಉದ್ದದ ಮೆಟ್ರೋ ಮಾರ್ಗ ಶೀಘ್ರವೇ ಪೂರ್ಣಗೊಂಡು ಸೇವೆ ಮುಕ್ತಗೊಳ್ಳಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications