Bengaluru Airport: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ನೀರು ಸೋರಿಕೆ!
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವ ಮಟ್ಟದಲ್ಲಿ ಖ್ಯಾತಿ ಹಾಗೂ ಮನ್ನಣೆಯನ್ನು ಗಳಿಸಿದೆ. ಈ ರೀತಿ ಇರುವಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ ವಿಚಾರದಲ್ಲಿ ನಡೆದಿರುವ ಘಟನೆ ನಗೆಪಾಟಲಿಗೆ ಗುರಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಮುಂದಿನ ದಿನಗಳಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಚರ್ಚೆಯಾಗುತ್ತಿದೆ. ಈ ರೀತಿ ಇರುವಾಗಲೇ ಬೆಂಗಳೂರಿನ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ ನೋಡಿ.
ದೇಶದ ವಿಮಾನ ನಿಲ್ದಾಣಗಳಲ್ಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಒಳ್ಳೆಯ ಮೆಚ್ಚುಗೆ ಇದೆ. ಆದರೆ, ಹೊಸ ವರ್ಷದ ಪ್ರಾರಂಭದಲ್ಲೇ ಈ ವಿಮಾನ ನಿಲ್ದಾಣದಲ್ಲಿ ಎಡವಟ್ಟು ಆಗಿದೆ. ಜನವರಿ 1ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಮಸ್ಯೆ ಆಗಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ಟರ್ಮಿನಲ್ 2ರಲ್ಲಿರುವ ನೀರಿನ ಪೈಪ್ ಒಡೆದು, ಮೊದಲ ಮಹಡಿಗೆ ನೀರು ನುಗ್ಗಿದೆ. ಇದರಿಂದ ಇಲ್ಲಿನ ವಿಮಾನಯಾನ ಕಚೇರಿಗಳು ಪರದಾಡಿವೆ ಎಂದು ವರದಿಯಾಗಿದೆ. ಟರ್ಮಿನಲ್ 2ರ ಮೊದಲ ಹಂತದ ನಿರ್ಮಾಣಕ್ಕೆಂದೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಇದಕ್ಕಾಗಿ ಬರೋಬ್ಬರಿ 13,000 ಕೋಟಿ ಖರ್ಚು ಮಾಡಿರುವುದು ವರದಿಯಾಗಿತ್ತು.

ಪೈಪ್ ಒಡೆದು ಭಾರೀ ಅವಾಂತರ: ಪೈಪ್ ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಪೈಪ್ ಒಡೆದಿರುವುದರಿಂದ ವಿಮಾನ ನಿಲ್ದಾಣದಲ್ಲಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಸೌದಿ ಹಾಗೂ ಜಪಾನ್ ಏರ್‌ಲೈನ್ಸ್ ಸೇರಿ ಕೆಲವು ಪ್ರಮುಖ ಕಚೇರಿಗಳಿಗೆ ನೀರು ನುಗ್ಗಿದೆ ಎಂದು ಹೇಳಲಾಗಿದೆ. ಈ ರೀತಿ ಏಕಾಏಕಿ ನೀರು ನುಗ್ಗಿರುವುದರಿಂದ ವಿಮಾನ ಸಂಸ್ಥೆಗಳ ಕಚೇರಿಯಲ್ಲಿ ಇದ್ದ ವಸ್ತುಗಳಿಗೆ ಹಾನಿಯಾಗಿವೆ.
ವಿಮಾನದಲ್ಲಿ ಪ್ರಯಾಣಿಸಲು ಅವಶ್ಯವಿರುವ ಬೋರ್ಡಿಂಗ್ ಪಾಸ್‌ಗಳು, ಬ್ಯಾಗೇಜ್ ಟ್ಯಾಗ್‌ಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳು ಹಾನಿಯಾಗಿವೆ. ಇವುಗಳನ್ನು ಸ್ಥಳಾಂತರಿಸಲು ಸಿಬ್ಬಂದಿ ಪರದಾಡಿದ್ದಾರೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಕುಡಿಯುವ ನೀರಿನ ಪೈಪ್ ಸೋರಿಕೆಯಿಂದ ಸಮಸ್ಯೆ ಆಗಿರುವುದಾಗಿಯೂ ಅದನ್ನು ಸರಿಪಡಿಸುತ್ತಿರುವುದಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಮಾಡುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿ(ಬಿಐಎಎಲ್) ಹೇಳಿದೆ.

ಇದರಿಂದ ಪ್ರಯಾಣಿಕರ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈ ಸಮಸ್ಯೆಯನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುತ್ತಿದೆ. ಟರ್ಮಿನಲ್ 2 ರಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಸಮಸ್ಯೆ ಆಗಿತ್ತು. ಅದನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದೆ.
ಬೆಂಗಳೂರು ವಿಮಾನ ನಿಲ್ದಾಣದ ಈ ಘಟನೆ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಪ್ರತಿಷ್ಠಿತ ಹಾಗೂ ಬೆಂಗಳೂರಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಈ ರೀತಿ ಆಗಿರುವುದಕ್ಕೆ ನೆಟ್ಟಿಗರು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ತನ್ನ ಅತ್ಯುತ್ತಮ ಸೇವೆಯಿಂದಲೇ ಜನರ ಮೆಚ್ಚುಗೆ ಗಳಿಸಿದೆ. ಅಲ್ಲದೆ ಪ್ರಶಸ್ತಿಗಳಿಗೂ ಪಾತ್ರವಾಗಿದೆ.












Click it and Unblock the Notifications