ಬೆಂಗಳೂರು: ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದಿಂದ ರೈತರಿಗೆ ಉಚಿತ ಕಾಂಪೋಸ್ಟ್ ವಿತರಣೆ
Bengaluru: ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದಿಂದ ರೈತರಿಗೆ ಉಚಿತ ಕಾಂಪೋಸ್ಟ್ ವಿತರಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಕಾಂಪೋಸ್ಟ್ ಖರೀದಿ ಮತ್ತು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ತ್ಯಾಜ್ಯದಿಂದ ಸಂಪನ್ಮೂಲದತ್ತ ಮಹತ್ವದ ಹೆಜ್ಜೆ ಇರಿಸಲಾಗಿದೆ.
ಏಪ್ರಿಲ್ 15ರ ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯ ಕೌನ್ಸಿಲ್ ಕಟ್ಟಡದಲ್ಲಿ ನಡೆದ ಕಾಂಪೋಸ್ಟ್ ಖರೀದಿ ಮತ್ತು ವಿತರಣಾ ಕಾರ್ಯಕ್ರಮಕ್ಕೆ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ (KCDCL)ದ ಅಧ್ಯಕ್ಷರಾದ ಎ.ಎನ್. ನಟರಾಜ್ ಗೌಡ ಅವರು ಚಾಲನೆ ನೀಡಿ ಮಾತನಾಡಿದರು. ನಗರ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ರೂಪಾಂತರಗೊಳಿಸುವ ಉದ್ದೇಶದಿಂದ KCDCL ಸಹಯೋಗದೊಂದಿಗೆ Greater Bengaluru IT Companies & Industries Association (GBITCIA) ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಚಟುವಟಿಕೆಯ ಭಾಗವಾಗಿ ಮೈತ್ರಿ ಸರ್ವ ಸೇವಾ ಸಮಿತಿಯ ಮೂಲಕ, ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿರುವ ಸಾವಯವ ಗೊಬ್ಬರವನ್ನು ಖರೀದಿಸಿ ರೈತರಿಗೆ ಉಚಿತವಾಗಿ ವಿತರಿಸುವ ಮಹತ್ವದ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸಿ, ಅದನ್ನು ಮೌಲ್ಯಯುತ ಸಂಪನ್ಮೂಲವಾಗಿ ಪರಿವರ್ತಿಸುವುದು ಕಾಲದ ಅವಶ್ಯಕತೆ ಎಂದು ಹೇಳಿದರು. ಕಾಂಪೋಸ್ಟ್ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಮೂಲಕ ಪರಿಸರ ಸಂರಕ್ಷಣೆಗೂ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದಕ್ಕೂ ಈ ಉಪಕ್ರಮ ಸಹಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಮಿಷನ್ 2030ರ ಆಶಯದಂತೆ ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಸುಸ್ಥಿರ ಕೃಷಿಯತ್ತ ಇಡುತ್ತಿರುವ ಮಹತ್ವದ ಹೆಜ್ಜೆ ಇದು. ಈ ಯೋಜನೆಯ ಮೂಲಕ ನಗರ ತ್ಯಾಜ್ಯವನ್ನು ಮರುಬಳಕೆ ಮಾಡುವುದರೊಂದಿಗೆ "ಸರ್ಕ್ಯೂಲರ್ ಇಕಾನಮಿ" ಪರಿಕಲ್ಪನೆಯನ್ನು ಉತ್ತೇಜಿಸಲಾಗುತ್ತಿದೆ. GBITCIA ಸಂಸ್ಥೆಯು ಕೈಗೊಂಡಿರುವ ಈ CSR ಉಪಕ್ರಮವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಉತ್ತಮ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತರಿಗೆ ಸಾಂಕೇತಿಕವಾಗಿ ಕಾಂಪೋಸ್ಟ್ ಗೊಬ್ಬರ ವಿತರಣೆ ಮಾಡಲಾಯಿತು. ಈ ಯೋಜನೆಯ ಪ್ರಯೋಜನವನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಬಿಐಟಿಸಿಐಎ ಅಧ್ಯಕ್ಷರಾದ ಗಿರೀಶ್, ಸಿ.ಎಸ್.ಆರ್ ಮುಖ್ಯಸ್ಥರಾದ ವಾಸುದೇವನ್, ಮೈತ್ರಿ ಸರ್ವ ಸೇವಾ ಸಮಿತಿಯ ಪದಾಧಿಕಾರಿಗಳು, ಹರೀಶ್ ಬಾಬು, ವಿಶಾಲ್ ಸೇರಿದಂತೆ ಕೈಗಾರಿಕಾ ವಲಯದ ಪ್ರತಿನಿಧಿಗಳು ಸೇರಿದಂತೆ ಹಲವರು ಹಾಜರಿದ್ದರು.
ಹೆಚ್ಚಿನ ಮಾಹಿತಿಗಾಗಿ: ವಾಸುದೇವನ್
ಸಿ.ಎಸ್.ಆರ್ ಮುಖ್ಯಸ್ಥರು
9845926911












Click it and Unblock the Notifications