Bengaluru Karaga: ಬಿಬಿಎಂಪಿ ಸಿದ್ಧತೆಗಳು ಹೇಗಿವೆ?: ಪ್ರಮುಖ ಅಂಶಗಳು
ಬೆಂಗಳೂರು, ಮಾರ್ಚ್ 26: ಬೆಂಗಳೂರು ಐತಿಹಾಸಿಕ 'ಕರಗ ಮಹೋತ್ಸವ' ಆಚರಣೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಈ ಸಮಯ ಹತ್ತಿರುವ ಬರುತ್ತಿದ್ದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭರದ ಸಿದ್ಧತೆ ಆರಂಭಿಸಿದೆ. ಅಗತ್ಯ ಸುವ್ಯವಸ್ಥೆಗಳಿಗಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಿಶ್ವ ವಿಖ್ಯಾತ ಬೆಂಗಳೂರು "ಕರಗ ಮಹೋತ್ಸವ" ಸಿದ್ಧತೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಪೂರ್ವಭಾವಿ ಸಭೆ ನಡೆಸಿದರು. ಆಚರಣೆ ಪ್ರಮುಖ ಅಂಶಗಳ ಕುರಿತು ಅವರು ಚರ್ಚಿಸಿದರು.

ಕರಗ ಮಹೋತ್ಸವಕ್ಕೆ ದಿನಾಂಕ್ ಫಿಕ್ಸ್ ಆಗಿದ್ದು, ಏಪ್ರಿಲ್ 15ರಿಂದ ಏಪ್ರಿಲ್ 23ರವರೆಗೆ ಕರಗ ಶಕ್ತ್ಯೋತ್ಸವ. ಸಕಲ ಧಾರ್ಮಿಕ ಕೈಂಕರ್ಯಗಳು ಈದಿನಗಳು ಜರುಗಲಿವೆ. ಈ ಭಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದು, ಇದು ಸೇರಿ ಅವರು ಒಟ್ಟು 14 ಬಾರಿ ಕರಗ ಹೊತ್ತಂತಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿತ್ತು.
ಬಿಬಿಎಂಪಿ ಈ ಅದ್ಧೂರಿ ಕರಗ ಮಹೋತ್ಸವ ಆಚರಣೆ ಕುರಿತು ಪೊಲೀಸ್, ಬೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಏನೆಲ್ಲ ಸೂಚನೆ ನೀಡಿದರು. ಅದರ ಸಿದ್ಧತಾ ಕ್ರಮಗಳು/ಹಲವು ಅಂಶಗಳು ಇಲ್ಲಿವೆ.
ಕರಗ ಮಹೋತ್ಸವ: ಸಿದ್ಧತೆಯ ಅಂಶಗಳು
* ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕ್ರಮ ವಹಿಸಬೇಕು.
* ಬಿಬಿಎಂಪಿಯ ಆರೋಗ್ಯ ಇಲಾಖೆ ವತಿಯಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡುವುದು.
* ಕರಗ ಶಕ್ತ್ಯೋತ್ಸವವು ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳುವುದು.

* ಕರಗ ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ ವ್ಯವಸ್ಥೆ ಮಾಡಬೇಕು.
* ಸಂಚಾರ ದಟ್ಟಣೆಯಾಗದಂತೆ ಮಾರ್ಗ ಬದಾಲವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸುವುದು.
* ಸ್ವಚ್ಛತಾ ನಿರ್ವಹಣೆ ದೃಷ್ಟಿಯಿಂದ ಘನತ್ಯಾಜ್ಯ ವಿಭಾಗದ ಅಧಿಕಾರಿ/ಸಿಬ್ಬಂದಿಯನ್ನು ನಿಯೋಜಿಸಬೇಕು.
* ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡುವುದು.
* ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ವಹಿಸುವುದು.
* ಕರಗ ಮಹೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾಗಳ ಅಳವಡಿಕೆ.
* ಕರಗ ಶಕ್ತ್ಯೋತ್ಸವ ಕಾರ್ಯಕ್ರಮಗಳಲ್ಲಿ ಬೆಂಕಿಯಿಂದ ಅವಘಡಗಳು ಸಂಭವಿಸದಂತೆ ಅಗ್ನಿ ಶಾಮಕ ವ್ಯವಸ್ಥೆಯನ್ನು ಕೈಗೊಳ್ಳುವುದು.
* ಭಕ್ತಾದಿಗಳು ಹಾಗೂ ಸಾರ್ವಜನಿಕರ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವುದು.
ಬಿಬಿಎಂಪಿಯ ಇಂದಿನ ಸಭೆಯಲ್ಲಿ ವಲಯ ಆಯುಕ್ತರುಗಳಾದ ಡಾ. ದೀಪಕ್.ಆರ್.ಎಲ್, ವಿನೋತ್ ಪ್ರಿಯಾ, ಸ್ನೇಹಲ್, ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ದಯಾನಂದ್, ಮುಜರಾಯಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications