ಆಫೀಸ್ ಕ್ರೆಡಿಟ್ ಕಾರ್ಡ್ ಬಳಸಿ 27 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರು ಟೆಕ್ಕಿ: ಹಣ ಕೇಳಿದ್ದಕ್ಕೆ ಮ್ಯಾನೇಜರ್‌ಗೇ ಬ್ಲ್ಯಾಕ್‌ಮೇಲ್
ಬೆಂಗಳೂರು: ಐಟಿ ಕಂಪನಿಯೊಂದರ ಉದ್ಯೋಗಿಯೊಬ್ಬ ಕಚೇರಿಯ ಕೆಲಸಕ್ಕಾಗಿ ನೀಡಲಾಗಿದ್ದ ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಬರೋಬ್ಬರಿ 27 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ತಾನು ಮಾಡಿದ ವಂಚನೆಯನ್ನು ಮುಚ್ಚಿಹಾಕಲು ಆತ ಹಣದ ಬಗ್ಗೆ ಪ್ರಶ್ನಿಸಿದ ಹಿರಿಯ ಅಧಿಕಾರಿಗಳಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಿರುವ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಪನಿಯು ಈ ಉದ್ಯೋಗಿಗೆ ಕಚೇರಿಯ ಖರ್ಚು-ವೆಚ್ಚಗಳಿಗಾಗಿ ಮಾತ್ರ ಬಳಸಲು ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ನೀಡಿತ್ತು. ಕಂಪನಿಯ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ ಆತ ಕೇವಲ 2 ಲಕ್ಷ ರೂಪಾಯಿಗಳನ್ನು ಮಾತ್ರ ಬಳಸಲು ಅನುಮತಿ ನೀಡಲಾಗಿತ್ತು. ಆದರೆ, ಈತ 2023ರ ಅಕ್ಟೋಬರ್‌ನಿಂದ 2024ರ ಜನವರಿವರೆಗಿನ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಬರೋಬ್ಬರಿ 27,01,139 ರೂಪಾಯಿಗಳನ್ನು ಅಕ್ರಮವಾಗಿ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದ. ಈ ಭಾರೀ ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಕಂಪನಿಯ ಆಡಿಟ್ ವೇಳೆ ಹಣಕಾಸಿನ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಕಂಡುಬಂದಾಗ ಅಧಿಕಾರಿಗಳಿಗೆ ಅನುಮಾನ ಶುರುವಾಗಿದೆ.

ಹಣಕಾಸಿನ ಲೆಕ್ಕದಲ್ಲಿನ ಈ ಅಗಾಧ ವ್ಯತ್ಯಾಸವನ್ನು ಗಮನಿಸಿದ ಕಂಪನಿಯ ಆಡಳಿತ ಮಂಡಳಿಯು, 2024ರ ಜನವರಿ 12 ರಂದು ಉದ್ಯೋಗಿಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸಿ ಸ್ಪಷ್ಟನೆ ಕೇಳಿತ್ತು. ಇದಕ್ಕೆ ಜನವರಿ 15 ರಂದು ಮರುಪತ್ರ ಕಳುಹಿಸಿದ ಉದ್ಯೋಗಿ, ತಾನು ಹಣ ದುರ್ಬಳಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಆದರೆ, ತನ್ನ ಈ ತಪ್ಪಿಗೆ ವಿಚಿತ್ರ ಕಾರಣವೊಂದನ್ನು ನೀಡಿದ್ದ. "ಚೀನಾ ಮತ್ತು ಪಾಕಿಸ್ತಾನದ ಕೆಲವು ಅಪರಿಚಿತ ವ್ಯಕ್ತಿಗಳು ನನಗೆ ಆನ್‌ಲೈನ್ ಮೂಲಕ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಗೆ ಹೆದರಿ ನಾನು ಈ ರೀತಿ ಕಾರ್ಡ್ ಬಳಸಿ ಅವರಿಗೆ ಹಣ ಪಾವತಿಸಬೇಕಾಯಿತು" ಎಂದು ಆತ ಇಮೇಲ್‌ನಲ್ಲಿ ಉಲ್ಲೇಖಿಸಿದ್ದ. ಜೊತೆಗೆ, ತಾನು ದುರ್ಬಳಕೆ ಮಾಡಿಕೊಂಡಿರುವ ಸಂಪೂರ್ಣ ಮೊತ್ತವನ್ನು ಮೂರು ಕಂತುಗಳಲ್ಲಿ ಮರುಪಾವತಿಸುವುದಾಗಿ ಕಂಪನಿಗೆ ಭರವಸೆ ನೀಡಿದ್ದ.
ತದನಂತರ ಜನವರಿ 29 ರಂದು ಕಂಪನಿಗೆ ಮತ್ತೊಂದು ಇಮೇಲ್ ಕಳುಹಿಸಿದ ಆತ, ಫೆಬ್ರವರಿ ಎರಡನೇ ವಾರದೊಳಗೆ 10 ಲಕ್ಷ ರೂಪಾಯಿಗಳನ್ನು ಪಾವತಿಸುವುದಾಗಿ ಮತ್ತು ಉಳಿದ ಹಣವನ್ನು ನಂತರದ ದಿನಗಳಲ್ಲಿ ಕಂತುಗಳ ರೂಪದಲ್ಲಿ ತೀರಿಸುವುದಾಗಿ ತಿಳಿಸಿದ್ದ. ಉದ್ಯೋಗಿಯ ಈ ಮಾತನ್ನು ನಂಬಿದ ಕಂಪನಿಯು ಆತನಿಗೆ ಹಣ ಮರುಪಾವತಿಸಲು ಸಾಕಷ್ಟು ಸಮಯ ಮತ್ತು ಹಲವು ಅವಕಾಶಗಳನ್ನು ನೀಡಿತ್ತು. ಆದರೆ, ಆತ ತಾನು ನೀಡಿದ್ದ ಯಾವುದೇ ಮಾತನ್ನು ಉಳಿಸಿಕೊಳ್ಳಲಿಲ್ಲ ಮತ್ತು ಒಂದು ರೂಪಾಯಿಯನ್ನೂ ಮರುಪಾವತಿಸಲಿಲ್ಲ. ದಿನ ಕಳೆದಂತೆ ಆತನ ವರ್ತನೆಯೂ ಬದಲಾಗತೊಡಗಿತು.
ಹಣವನ್ನು ವಾಪಸ್ ನೀಡುವ ಬದಲು ಆತನ ದುರ್ವರ್ತನೆ ಮಿತಿಮೀರಿತು. 2024ರ ಫೆಬ್ರವರಿ 9 ರಂದು, ಹಣದ ಬಗ್ಗೆ ಕೇಳಿದ ತನ್ನ ಮ್ಯಾನೇಜರ್‌ಗೆ ಉದ್ಯೋಗಿ ಅಶ್ಲೀಲ ಚಿತ್ರಗಳನ್ನು ಕಳುಹಿಸಲು ಆರಂಭಿಸಿದ. ಅಷ್ಟೇ ಅಲ್ಲದೆ, ತನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಅಥವಾ ಹಣಕ್ಕಾಗಿ ಮತ್ತೆ ಒತ್ತಾಯಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಲಾರಂಭಿಸಿದ. ಆತನ ಈ ಬ್ಲ್ಯಾಕ್‌ಮೇಲ್ ತಂತ್ರಗಳಿಂದ ಬೇಸತ್ತ ಕಂಪನಿಯು ಅಂತಿಮವಾಗಿ ಕಾನೂನಿನ ಮೊರೆ ಹೋಗಲು ನಿರ್ಧರಿಸಿತು.
Bengaluru: ಬೆಂಗಳೂರು: ಹೆಣ್ಣೂರು - ಬಾಗಲೂರು ವೈಟ್ ಟಾಪಿಂಗ್ ಕಾಮಗಾರಿಗೆ ಡೆಡ್‌ಲೈನ್ ನಿಗದಿ
ಉದ್ಯೋಗಿಯ ವಿರುದ್ಧ ಕಂಪನಿಯ ಪರವಾಗಿ ವರ್ತೂರು ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆ ಮತ್ತು ಹಣದ ವಸೂಲಾತಿಗಾಗಿ ತೀವ್ರ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications