ಬೆಂಗಳೂರಿನ ಐಒಸಿ ಫ್ಲೈಓವರ್ ಕೆಡವಲು ನಿರ್ಧಾರ; ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸಜ್ಜು
ಬೆಂಗಳೂರು: ನಗರದ ಪೂರ್ವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿರುವ ಐಒಸಿ ಜಂಕ್ಷನ್ ಫ್ಲೈಓವರ್ ಅನ್ನು ಕೆಡವಲು ನಿರ್ಧರಿಸಲಾಗಿದೆ. ಇದರಿಂದ ದೊಡ್ಡ ಬಾಣಸವಾಡಿ ರಸ್ತೆ, ಬೈಯಪ್ಪನಹಳ್ಳಿ ರಸ್ತೆ, ಕಮ್ಮನಹಳ್ಳಿ ರಸ್ತೆ ಸಂಚಾರಕ್ಕೆ ಅಡಚಣೆ, ಈ ಭಾಗದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಹಳೇಯದಾ ಸದರಿ ಮೇಲ್ಸೇತುವೆ ಕೆಡವಿ ಅಲ್ಲಿಯೇ ಬರೋಬ್ಬರಿ 436 ಕೋಟಿ ರೂ. ವೆಚ್ಚದಲ್ಲಿ ಹೊಸ ಎಲಿವೇಟೆಡ್ ರೋಟರಿ ಫ್ಲೈಓವರ್ ನಿರ್ಮಿಸಲು ಮುಂದಾಗಿದೆ. ಈ ಮೂಲಕ ನಗರ ಪ್ರಮುಖ ಮೇಲ್ಸೇತುವೆಯೊಂದು ನೆಲಕ್ಕಪ್ಪಳಿಸಲಿದೆ. ನಗರದ ಜನರು ದಶಕಗಳ ಕಾಲ ಸಂಚಾರ ಒದಗಿಸಿದ್ದ ಪ್ರಮುಖ ಫ್ಲೈಓವರ್ ಅನ್ನು ಕಳೆದುಕೊಳ್ಳಲಿದ್ದಾರೆ. ಈ ಫ್ಲೈಓವರ್ ಅನ್ನು ರೈಲ್ವೆಯು 2001-02 ರಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಈ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ
ಉದ್ದೇಶಿತ ಮೇಲ್ಸೇತುವೆ ಕೆಡವಿದರೆ ದೊಡ್ಡ ಬಾಣಸವಾಡಿ ರಸ್ತೆ, ಬೈಯಪ್ಪನಹಳ್ಳಿ ರಸ್ತೆ, ಕಮ್ಮನಹಳ್ಳಿ ರಸ್ತೆ ಮತ್ತು ಹತ್ತಿರದ ಸಂಪರ್ಕ ಮಾರ್ಗಗಳಲ್ಲಿ ಸಂಚಾರಕ್ಕೆ ಗಮನಾರ್ಹ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಇವೆಲ್ಲವೂ ಈಗಾಗಲೇ ಪೀಕ್ ಸಮಯದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಸಾಕ್ಷಿಯಾಗುತ್ತವೆ.
ರೋಟರಿ ಫ್ಲೈಓವರ್ ಯೋಜನೆಯ ಜೊತೆಗೆ, ಬಿ-ಸ್ಮೈಲ್ ಬೈಯಪ್ಪನಹಳ್ಳಿ ರಸ್ತೆಯಲ್ಲಿ ಓಲ್ಡ್ ಮದ್ರಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೆ ಓವರ್‌ಬ್ರಿಡ್ಜ್ ಸ್ಥಾಪನೆಗೂ ಪ್ಲ್ಯಾನ್ ಮಾಡಲಾಗುತ್ತಿದೆ. ಇದು ಬೆಂಗಳೂರಿನ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ಬೈಯಪ್ಪನಹಳ್ಳಿ, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಕಡೆಗಿನ ಸಂಚಾರ ಸುಧಾರಿಸುವ ನಿರೀಕ್ಷೆಗಳು ಇವೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಪ್ರಕಾರ, ಹೊಸ ಎಲೆವೆಟೆಡ್ ರೋಟರಿ ಫ್ಲೈಓವರ್ ಅನ್ನು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬಹು ದಿಕ್ಕುಗಳಿಂದ ತಡೆರಹಿತ ಸಂಪರ್ಕ ಒದಗಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಈ ಮಾರ್ಗದಲ್ಲಿನ ಸಂಚಾರ ಸಮಸ್ಯೆಗಳನ್ನು ಪರಿಹರಿಸಲಿದೆ.
2023ರಲ್ಲಿ ಪ್ರಸ್ತಾಪಿಸಿದ ಯೋಜನೆ, ವೆಚ್ಚ ಏರಿಕೆ
ಯೋಜನಾ ವಿನ್ಯಾಸದಲ್ಲಿನ ಪರಿಷ್ಕರಣೆಗಳು, ಜಿಎಸ್‌ಟಿ ಸೇರ್ಪಡೆಗಳು ಮತ್ತು ರೈಲ್ವೆ ಟರ್ಮಿನಲ್ ಕಡೆಗೆ ಹೋಗುವ ದೂರದ ಪ್ರಯಾಣಿಕರಿಂದ ಸ್ಥಳೀಯ ಸಂಚಾರ ಪ್ರತ್ಯೇಕಿಸಲು ಮಾರುತಿ ಸೇವಾ ನಗರ ರಸ್ತೆಯಿಂದ 1.5 ಕಿಮೀ ಹೊಸ ಫ್ಲೈಓವರ್ ಸೇರ್ಪಡೆಯಿಂದಾಗಿ ಯೋಜನಾ ವೆಚ್ಚವು 2023 ರಲ್ಲಿ 263 ಕೋಟಿ ರೂ. ಇದ್ದದ್ದು ಇದೀಗ 436 ಕೋಟಿ ರೂ.ಗೆ ಏರಿಕೆ ಕಂಡಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್ ಸಂಸ್ಥೆಯು ಈ ಹೊಸ ಮೇಲ್ಸೇತುವೆ ಯೋಜನೆಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದೆ. ರೈಲು ಮಾರ್ಗಗಳು ಇರುವುದರಿಂದ ನಿರ್ಮಾಣವು ತಾಂತ್ರಿಕವಾಗಿ ಸವಾಲಿನದ್ದಾಗಿದೆ.













Click it and Unblock the Notifications