ಬೆಂಗಳೂರಲ್ಲಿ 5 ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಪಾರ್ಕಿಂಗ್ ಸ್ಥಳ, ಹೊಸ ಮೇಲ್ಸೇತುವೆ ನಿರ್ಮಾಣ ಅಪ್ಡೇಟ್ಸ್
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ನಂತರ ಪ್ರಮುಖ ಸಮಸ್ಯೆ ಆಗಿರುವುದು ವಾಹನಗಳ ನಿಲುಗಡೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಪಟ್ಟಿ ನೀಡಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿದರೆ ಅದರಿಂದ ಆದಾಯ ಸಿಗಲಿದೆ. ಈ ನಿಟ್ಟಿನಲ್ಲಿ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಅದರ ಪಟ್ಟಿ ನೀಡಿ ಅದನ್ನು ಅನುಷ್ಠಾನಗೊಳಿಸಲು ನಗರ ಪಾಲಿಕೆಗಳಿಗೆ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಹೊಸ ಮೇಲ್ಸೇತುವೆ: ಇನ್ನು ಬೆಂಗಳೂರಿನಲ್ಲಿ ಹೊಸ ಮೇಲ್ಸೇತುವೆಗಳ ನಿರ್ಮಾಣದ ವಿಚಾರವಾಗಿಯೂ ಚರ್ಚೆ ನಡೆದಿದೆ. ನಗರ ಪಾಲಿಕೆಗಳ ವಾರು ಪಾದಚಾರಿ ಮೇಲ್ಸೇತುವೆಗಳ ಮಾಹಿತಿ ನೀಡಿ ಅವುಗಳನ್ನು ಮೇಲ್ವಿಚಾರಣೆ ಮಾಡಿ ಸರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಹೊಸದಾಗಿ ನಿರ್ಮಾಣ ಮಾಡುವ ಸಲುವಾಗಿ ಸಂಚಾರಿ ಪೊಲೀಸ್ ವಿಭಾಗವು ಪಟ್ಟಿ ನೀಡಿದ್ದು, ಅದರನ್ವಯ ಪರಿಶೀಲನೆ ನಡೆಸಿ ಅಗತ್ಯ ಇರುವ ಕಡೆ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಲು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಎಲ್ಲಾ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಎಲ್ಲೆಲ್ಲಿ ಬೀದಿ ದೀಪಗಳು ಕಟ್ಟಿವೆ, ಅವುಗಳನ್ನು ಕೂಡಲೆ ಬದಲಿಸಬೇಕು. ಜೊತೆಗೆ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಲು ಸೂಕ್ತ ಕ್ರಮಗಳನ್ನು ತಿಳಿಸಲಾಗಿದೆ.
ಅಲ್ಲದೇ ಜಿಬಿಎ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬಾಕಿಯಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ವಾರ್ಡ್ ರಸ್ತೆಗಳಲ್ಲಿಯೂ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಜಲಮಂಡಳಿ ಕಾಮಗಾರಿ ಪೂರ್ಣಗೊಳಿಸಿರುವ ಕಡೆ ರಸ್ತೆ ಕತ್ತರಿಸಿದ ಭಾಗವನ್ನು ಕೂಡಲೆ ದುರಸ್ತಿಪಡಿಸಿ ಎಂದು ನಿರ್ದೇಶನ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರದಿಂದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಿಗೆ ಅನುದಾನ ಒದಗಿಸಿದ್ದು, ಎಲ್ಲಾ ಕಾಮಗಾರಿಗಳಿಗೆ ಕೂಡಲೆ ಟೆಂಡರ್ ಕರೆದು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ, ಕಾಲಮಿತಿಯೊಳಗಾಗಿ ಪೂರ್ಣಗೊಳಿಸಿ ಎಂದಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ಯಾವ್ಯಾವ ಕಾರ್ಯಕ್ರಮಗಳಿವೆ ಅವುಗಳೆಲ್ಲವೂ ಫಲಾನುಭವಿಗಳಿಗೆ ಶೀಘ್ರವೇ ಸಿಗುವಂತೆ ಮಾಡಬೇಕು. ಜೊತೆಗೆ 5 ನಗರ ಪಾಲಿಕೆಗಳವಾರು ಸಮರ್ಪಕ ಮಾಹಿತಿಯನ್ನು ನೀಡಲು ಅಧಿಕಾರಿಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.
ಬಿಸ್ಮೈಲ್ ಕಾಮಗಾರಿಗಳ ಮೇಲ್ವಿಚಾರಣೆ: ಬಿಸ್ಮೈಲ್ ಸಂಸ್ಥೆ ವತಿಯಿಂದ ಸಂಚಾರಯುಕ್ತ ಯೋಜನೆ ಅಡಿ ನೆರೆಹೊರೆಯ ಉತ್ತಮ ಸಂಪರ್ಕಕ್ಕಾಗಿ ಮಳೆ ನೀರು ಗಾಲುವೆಗಳ (ರಾಜಕಾಲುವೆಗಳು) ಪಕ್ಕದಲ್ಲಿ ಲಿಂಕ್ ರಸ್ತೆಗಳ ರಚನೆ ಮತ್ತು ನಿರ್ಮಾಣ, ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ.












Click it and Unblock the Notifications