Bengaluru Infrastructure: ಬೆಂಗಳೂರಿನ ಮೂಲಸೌಕರ್ಯಕ್ಕೇ ಪ್ರತಿ ದಿನ 100 ಕೋಟಿ ರೂ. ವೆಚ್ಚ!
Bengaluru Infrastructure: ಬೆಂಗಳೂರು ನಗರವನ್ನು ಮಾತ್ರ ಹೆಚ್ಚು ಅಭಿವೃದ್ಧಿ ಮಾಡಲಾಗುತ್ತಿದೆ ಅಥವಾ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರಿಗೆ ಸಿಗುತ್ತಿರುವಷ್ಟು ಸೌಲಭ್ಯ ಹಾಗೂ ಆರ್ಥಿಕ ನೆರವು ಇನ್ನುಳಿದ ಕರ್ನಾಟಕದ ಪ್ರದೇಶಗಳಿಗಿ ಸಿಗುತ್ತಿಲ್ಲ ಎನ್ನುವ ಆರೋಪಗಳಿವೆ. ಇದರ ನಡುವೆ ಬೆಂಗಳೂರು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿ ದಿನವೂ ಬರೋಬ್ಬರಿ 100 ಕೋಟಿ ರೂ. ವೆಚ್ಚವಾಗುತ್ತಿರುವುದು ಬಹಿರಂಗವಾಗಿದೆ. ಬೆಂಗಳೂರು ನಗರದಲ್ಲಿ ರಸ್ತೆ, ವಿದ್ಯುತ್ ಹಾಗೂ ನೀರು ಸರಬರಾಜು ಸೇರಿದಂತೆ ನಗರದ ಮೂಲಸೌಕರ್ಯ ನಿರ್ವಹಣೆಗಾಗಿಯೇ ಪ್ರತಿ ದಿನವೂ ಸುಮಾರು 100 ಕೋಟಿ ರೂ.ನಂತೆ ವರ್ಷಕ್ಕೆ 38,455 ಕೋಟಿ ರೂ.ಗೂ ಹೆಚ್ಚು ಹಣ ಖರ್ಚಾಗುತ್ತಿರುವುದು ಬಹಿರಂಗವಾಗಿದೆ.
ಬೆಂಗಳೂರು ನಗರದ ಅಭಿವೃದ್ಧಿಗಾಗಿ ದಿನಕ್ಕೆ 100 ಕೋಟಿ ರೂ.ನಂತೆ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದರೂ ಸಹ ಹಣ ವಿನಿಯೋಗದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಹಣ ಹೇಗೆ ಬಳಕೆ ಹಾಗೂ ಎಷ್ಟು ಬಳಕೆಯಾಗುತ್ತಿದೆ ಎನ್ನುವ ವಿವರವು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂದು ಸರ್ಕಾರೇತರ ಸಂಸ್ಥೆ ಜನಾಗ್ರಹ ಆರೋಪಿಸಿದೆ.

ಬೆಂಗಳೂರಿನಲ್ಲಿ ಹಲವು ಗಂಭೀರ ಸಮಸ್ಯೆಗಳಿವೆ. ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಅತಿಯಾದ ಟ್ರಾಫಿಕ್ ಜಾಮ್ ಸಮಸ್ಯೆ, ಸಣ್ಣ ಮಳೆ ಬಂದರೂ ಕೃತಕ ಪ್ರವಾಹ ಪರಿಸ್ಥಿತಿ, ನೀರಿನ ಸಮಸ್ಯೆ, ರಸ್ತೆಗಳಲ್ಲಿ ಗುಂಡಿಬಿದ್ದಿರುವುದು, ಎಲ್ಲೆಂದರಲ್ಲಿ ಕಸ ಎಸೆಯುವ ಸಮಸ್ಯೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದು ಸೇರಿದಂತೆ ಹಲವು ಸಮಸ್ಯೆಗಳು ಇವೆ. ಆದರೆ ಇಷ್ಟೆಲ್ಲ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರು ನಗರದಲ್ಲಿ ಕೇವಲ ಮೂಲಸೌಕರ್ಯ ಅಭಿವೃದ್ಧಿಯ ಕಾರಣಕ್ಕೆಂದೇ ಕೋಟ್ಯಾಂತರ ರೂಪಾಯಿ ವಿನಿಯೋಗ ಮಾಡಲಾಗುತ್ತಿದೆ. ಆದರೆ ಇದರ ವಿವರ ಜನ ಸಾಮಾನ್ಯರಿಗೆ ಸಿಗುತ್ತಿಲ್ಲ.
2021-22ನೇ ಸಾಲಿನಲ್ಲಿ ಅಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ, ಬೆಸ್ಕಾಂ ಹಾಗೂ ಬಿಎಂಟಿಸಿ ಸೇರಿದಂತೆ 13 ಇಲಾಖೆಗಳಿಂದ ಸುಮಾರು 70ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲನೆ ನಡೆಸಿ ಲೆಕ್ಕ ಹಾಕಲಾಗಿದೆ. ಇದರಲ್ಲಿ ಹಲವು ಅಂಶಗಳು ಬಹಿರಂಗವಾಗಿವೆ ಎಂದು ಜನಾಗ್ರಹ ಸಂಸ್ಥೆಯು ತಿಳಿಸಿದೆ.
ಸ್ಥಳೀಯ ಆಡಳಿತದ್ದೇ ಸಿಂಹಪಾಲು
ಇನ್ನು ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಅನುದಾನ ವಿನಿಯೋಗಿಸುತ್ತಿರುವುದರಲ್ಲಿ ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂಚೂಣಿಯಲ್ಲಿದೆ. ಒಟ್ಟಾರೆ 38,455 ಕೋಟಿ ರೂ. ಖರ್ಚಿನಲ್ಲಿ ಜನಪ್ರತಿನಿಧಿಗಳು ಇಲ್ಲದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶೇ.20ರಷ್ಟು ಹಣವನ್ನು ಖರ್ಚು ಮಾಡಿವೆ. ಇನ್ನುಳಿದ ಶೇ.80ರಷ್ಟು ಹಣ ಜನಪ್ರತಿನಿಧಿಗಳು ಇಲ್ಲದ ಸರ್ಕಾರದ ಬೇರೆ ಬೇರೆ ಇಲಾಖೆಗಳು ಖರ್ಚು ಮಾಡಿವೆ. ಇದು ಒಳ್ಳೆಯ ಬೆಳವಣಿಗೆಯೇ ಅಲ್ಲ ಎಂದು ಜನಾಗ್ರಹ ಸಂಸ್ಥೆ ಹೇಳಿದೆ.
ನಗರ ಸಂಸ್ಥೆಗಳಿಗೆ ಜನರ ಆಗ್ರಹದ ವಿವರ ಇಲ್ಲಿದೆ
1. ಬೆಂಗಳೂರು ನಗರದಲ್ಲಿ ವಲಯವಾರು ಮತ್ತು ವಾರ್ಡ್‌ವಾರು ಖರ್ಚು ಮಾಡಿದ ಹಣದ ದತ್ತಾಂಶವನ್ನು ಆಯಾ ವಲಯಗಳ (ನೀರು, ಸಾರಿಗೆ, ರಸ್ತೆಗಳು, ತ್ಯಾಜ್ಯ) ಆಧಾರದ ಮೇಲೆ ಮತ್ತು ವಾರ್ಡ್‌ವಾರು ಸಿಗುವ ಮಾದರಿಯಲ್ಲಿಯೇ ವಿವರ ಕೊಡಬೇಕು. ಇದರಿಂದ ನಿವಾಸಿಗಳಿಗೆ ತಮ್ಮ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎನ್ನುವ ಸಂಪೂರ್ಣ ವಿವರ ಲಭ್ಯವಾಗಲಿದೆ.
2. ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಹಂತಗಳು, ಟೆಂಡರ್ ವಿವರ, ಅನುಷ್ಠಾನದ ಸ್ಥಿತಿ ಮತ್ತು ಹೆಚ್ಚುವರಿ ವೆಚ್ಚಗಳ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು. ಇದರಿಂದ ಸಾರ್ವಜನಿಕರ ಹಣ ಎಲ್ಲಿ ವೆಚ್ಚವಾಗುತ್ತಿದೆ ಎನ್ನುವ ವಿವರ ಸಿಗಲಿದೆ.
3. ಸಾರ್ವಜನಿಕ ಕೆಲಸಗಳಿಗೆ ಖರ್ಚು ಮಾಡಿದ ಹಣಕ್ಕೆ ಅಥವಾ ವೆಚ್ಚ ಮಾಡಿದ ಅನುದಾನಕ್ಕೆ ಅನುಗುಣವಾಗಿ ಯೋಜನೆಗಳು, ಕೆಲಸಗಳನ್ನು ಮಾಡಲಾಗಿದೆಯೇ ಎಂಬುದರ ಲೆಕ್ಕ ವಿವರ ಇರಬೇಕು .
4. ರಸ್ತೆಯ ಗುಣಮಟ್ಟ, ಪ್ರಯಾಣದ ಸಮಯ ಹಾಗೂ ನೀರು ಸರಬರಾಜು, ಕಸ ಸಂಗ್ರಹಣೆಯಲ್ಲಿ ಪ್ರಕ್ರಿಯೆ ಹೇಗಿದೆ ಎನ್ನುವ ವಿವರ ಲಭ್ಯವಾಗಬೇಕು.
5. ಬೆಂಗಳೂರು ನಗರದ ಎಲ್ಲಾ ಸರ್ಕಾರಿ ಸಂಸ್ಥೆಗಳು ಮೂಲಸೌಕರ್ಯ ಹಾಗೂ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವ ನಿಖರವಾದ ವಿವರವನ್ನು ನೀಡಬೇಕು.












Click it and Unblock the Notifications