ಬೆಂಗಳೂರಿನಲ್ಲಿ ಎರಡು ದಿನದಿಂದ ದಿಢೀರ್ ಏರಿಕೆಯಾದ 2,000 ರೂ ನೋಟುಗಳ ವಹೀವಾಟು
ಬೆಂಗಳೂರು, ಮೇ 21: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ 2,000 ರೂ. ಮುಖಬೆಲೆ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಅದರ ಬೆನ್ನಲ್ಲೆ ಇಷ್ಟು ದಿನ ಮರೆಯಾಗಿದ್ದ ಈ ನೋಟುಗಳು ವಹಿವಾಟಿನಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.
ರೂ.2000 ನೋಟುಗಳ ಹಿಂಪಡೆಯಲಿದ್ದು, ಈ ನೋಟುಗಳ ಚಲಾವಣೆಗೆ ಮುಂದಿನ ಸೆಪ್ಟಂಬರ್ 30ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಆರ್‌ಬಿಐ ಹೀಗೆ ಹೇಳಿದ್ದೇ ತಡ ಬೆಂಗಳೂರಿನ ಬೃಹತ್ ರೆಸ್ಟೋರೆಂಟ್‌ಗಳು, ಮದ್ಯದಂಗಡಿಗಳು, ಮಾಲ್ ಮತ್ತು ಬೇಕರಿಗಳಲ್ಲಿ ಹೆಚ್ಚಾಗಿ ಈ ರೂ.2000 ನೋಟುಗಳು ಹರಿದಾಡುತ್ತಿವೆ. ಆರ್‌ಬಿಐ ನಿರ್ಧಾರದಿಂದ ಇಷ್ಟು ದಿನ ಸಂಗ್ರಹಿಸಿಟ್ಟಿದ್ದ ನೋಟುಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ.

ಕಳೆದ ಕೆಲವು ತಿಂಗಳುಗಳಿಂದ ಮರೆಯಾಗಿದ್ದ ಎರಡು ಸಾವಿರ ರೂ.ನ ನೋಟುಗಳ ವಹಿವಾಟುಗಳಲ್ಲಿ ಹಠಾತ್ ಏರಿಕೆ ಆಗಿದೆ. ಕೋರಮಂಗಲದ ಫೋರಂ ಮಾಲ್ ಸಮೀಪದ ಪ್ರಮುಖ ಮದ್ಯದ ಅಂಗಡಿಯಲ್ಲಿ ಕಳೆದೆರಡು ದಿನದಿಂದ ಗ್ರಾಹಕರು ತಮ್ಮ ವಹೀವಾಟು ಮೂಲಕ ಹೆಚ್ಚಾಗಿ 2,000 ರೂ. ನೋಟುಗಳನ್ನೆ ನೀಡಿದ್ದಾರೆಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಗ್ರಾಹಕರಿಂದ ರೂ 2,000 ನೋಟು ಸ್ವೀಕಾರ
ಜನರು ಇಷ್ಟು ಪ್ರಮಾಣದಲ್ಲಿ ರೂ 2,000 ನೋಟುಗಳನ್ನು ನೀಡಿದನ್ನು ನಾವು ನೋಡಿರಲಿಲ್ಲ. ರೂ 1,500 ಕ್ಕಿಂತ ಹೆಚ್ಚಿನ ಬೆಲೆಯ ಮದ್ಯ ಬಾಟಲಿಗಳನ್ನು ಕೊಳ್ಳುವ ಜನರು ನಮಗೆ ರೂ. 2,000 ನೋಟುಗಳನ್ನು ನೀಡುತ್ತಿದ್ದಾರೆ, ನಾವು ಸ್ವೀಕರಿಸುತ್ತಿದ್ದೇವೆ ಎಂದು ಮದ್ಯದಂಗಡಿ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
ಕೋರಮಂಗಲದ ಪ್ರಮುಖ ರಸ್ತೆಯೊಂದರ ಬೇಕರಿಗಳಲ್ಲಿ ಗ್ರಾಹಕರು 2,000 ರೂಪಾಯಿ ನೋಟುಗಳನ್ನು ಹಸ್ತಾಂತರಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸಾಮಾನ್ಯವಾಗಿ ಪ್ರತಿದಿನ 2,000 ರೂಪಾಯಿಗಳ 10 ರಿಂದ 15 ನೋಟು ಪಡೆಯುತ್ತಿದ್ದೇವು, ಕಳೆದ ಎರಡು ದಿನದಿಂದ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ 25 ಕ್ಕೆ ಏರಿದೆ ಎಂದರು.

ಇದೇ ಭಾಗದಲ್ಲಿರುವ ಬೃಹತ್ ಹೋಟೆಲ್‌ವೊಂದಕ್ಕೆ ಬರುವ ವಿದೇಶಿ ಪ್ರಜೆಗಳು ಸಹ 2000 ರೂ. ಮುಖಬೆಲೆಯ ನೋಟುಗಳನ್ನೇ ನೀಡುತ್ತಿದ್ದಾರೆ. ನೋಟು ಹಿಂಡೆಯುತ್ತೇವೆ ಎಂಬ ಘೊಷಣೆಗೂ ಮುನ್ನ ಬಾರದ ನೋಟುಗಳು ಈಗ ಹೆಚ್ಚಾಗಿ ಬರುತ್ತಿದ್ದು, ಅವಗಳನ್ನು ಸ್ವೀಕರಿಸುವುದೇ ಸವಾಲಾಗಿದೆ. ಕಾರಣ ಗ್ರಾಹಕರಿಂದ ನೋಟು ನಾವು ಸ್ವೀಕರಿಸಿದರೆ ಅವುಗಳ ವಿನಮಯಕ್ಕಾಗಿ ತೊಂದರೆ ಎದುರಿಸುವ ಸಂಭವವಿದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಬೆಂಗಳೂರಿನ ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳಲ್ಲಿ 2,000 ರೂ.ಗಳ ನೋಟುಗಳ ಹರಿವು ಹೆಚ್ಚಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ಹೇಳಿದರು.












Click it and Unblock the Notifications