ಬೆಂಗಳೂರಿನ ಹೊಸಕೆರೆಹಳ್ಳಿ ಆಡೆನ್ ಶಾಲೆಯ 2024ನೇ ಸಾಲಿನ ಕ್ರೀಡಾಕೂಟ: ವಿಜೇತರಿಗೆ ಎವಿ ಶ್ರೀನಿವಾಸ್ ಗೌಡರಿಂದ ಪ್ರಶಸ್ತಿ ಪ್ರದಾನ
ಬೆಂಗಳೂರು ಡಿಸೆಂಬರ್ 6: ಬೆಂಗಳೂರು ನಗರದ ಪ್ರತಿಷ್ಠಿತ ಹೊಸಕೆರೆಹಳ್ಳಿಯಲ್ಲಿರುವ ಆಡೆನ್ ಶಾಲೆ ಕಳೆದ 40 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಗಳನ್ನು ನೀಡುತ್ತಾ ಬಂದಿದೆ. ಶಾಲೆಯ ಸಂಸ್ಥಾಪಕರಾದ ರಾಮಣ್ಣನವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲಾಗುತ್ತಿದೆ. ಇದಕ್ಕೆ ಸಹಕಾರಿ ಎಂಬಂತೆ ಶಾಲೆಯ ನಿರ್ದೇಶಕರಾದ ಶ್ರೀ ಹರಿಕುಮಾರ್ ರವರ ದೂರದೃಷ್ಟಿ ಹಾಗು ಆಧುನಿಕ ಶಿಕ್ಷಣ ವ್ಯವಸ್ಥೆಯ ಅಳವಡಿಕೆಯಿಂದ ಸಂಸ್ಥೆಯು ತನ್ನದೇ ಆದ ಹೆಜ್ಜೆ ಗುರುತನ್ನು ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಶಾಲೆಯ 2024ನೇ ಸಾಲಿನ ಕ್ರೀಡಾಕೂಟಗಳನ್ನು ಜಯನಗರದ ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಅಲ್ಲಿ ವಾಲಿ ಬಾಲ್, ಥ್ರೋ ಬಾಲ್, ಕೋ ಕೋ, ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು. ಈ ಸಂಬಂಧ ಈ ಕ್ರೀಡಾಕೂಟದಲ್ಲಿ ಗೆದ್ದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭವನ್ನು ಗಿರಿನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಹಲವು ಗಣ್ಯರಿಗೆ ಸನ್ಮಾನ ಸಹ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಡು ಎ.ವಿ. ಶ್ರೀನಿವಾಸ್ ಗೌಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ರಾಮಣ್ಣನವರು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ ಶ್ರೀನಿವಾಸ್ ಗೌಡ ರವರು ವಿದ್ಯಾರ್ಥಿಗಳಿಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಹಾಗು ಮಾನಸಿಕ ಮತ್ತು ದೈಹಿಕವಾಗಿ ಹೇಗೆ ಧೃಡವಾಗಿರುವುದರ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ಶ್ರೀ ರಾಮಣ್ಣನವರು ಮಾತನಾಡಿ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅವರ ಮಾನಸಿಕ ಧೃಡತೆ ಹೆಚ್ಚಾಗುತ್ತದೆ. ಇದಕ್ಕೆ ಮಕ್ಕಳ ಪೋಷಕರು ಪ್ರೋತ್ಸಾಹ ನೀಡುವುದರ ಜೊತೆಗೆ ಅವರು ಸಹ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು. ಇದು ಕ್ರೀಡೆಯ ಜೊತೆಗೆ ಓದಿಗೂ ಸಹ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸಂಸ್ಥೆಯ ನಿರ್ದೇಶಕ ಶ್ರೀ ಹರಿಕುಮಾರ್ ಮಾತನಾಡಿ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಪೋಷಕರ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜೊತೆ ಸೇರಿ ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಜ್ವಲಗೊಳ್ಳುವಂತೆ ಮಾಡುವುದು ಅವಶ್ಯವಾಗಿದೆ ಎಂದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಲ್ಪನಾ ಸಂತೋಷ್ ಕ್ರೀಡಾ ಕೂಟಕ್ಕೆ ಶ್ರಮಿಸಿದ ಎಲ್ಲ ಸಹೋದ್ಯೋಗಿಗಳಿಗೆ ನಮನ ಸಲ್ಲಿಸಿದರು. ಸಮಾರೋಪ ಸಮಾರಂಭದಲ್ಲಿ ಮಕ್ಕಳ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಶಾಲಾ ಶಿಕ್ಷಕರು ಸಂಗೀತ ವಾದ್ಯಗಳನ್ನು ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.












Click it and Unblock the Notifications