Vrishabhavathi: ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಬೆಂಗಳೂರಿನ 'ವೃಷಭಾವತಿ ನದಿ', ವಿಡಿಯೋ
ಬೆಂಗಳೂರು, ಅಕ್ಟೋಬರ್ 21: ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಪ್ರವಾಹ, ನೆರೆಯ ವಾತಾವರಣ ನಿರ್ಮಾಣವಾಗಿದೆ. ಇಂದು ಸಹ ಬೆಂಗಳೂರು ನಗರ ಜಿಲ್ಲೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಈಗಾಗಲೇ ಬಂದ ಮಳೆಗೆ ಬತ್ತಿ ಹೋಗಿದ್ದ 'ವೃಷಭಾವತಿ ನದಿ' (Vrishabhavathi River) ಭರ್ತಿಯಾಗಿದೆ. ಮಳೆಯಿಂದಾಗಿ ಈ ನದಿ ಮೈದುಂಬಿ ಹರಿಯುತ್ತಿದೆ.
ಬೆಂಗಳೂರಿನ ಈ ವೃಷಭಾವತಿ ನದಿಗೆ ತನ್ನದೇ ಆದ ಇತಿಹಾಸ ಇದೆ. ಕುಡಿಯುವುದು ಸೇರಿದಂತೆ ಬಹುಉಪಯೋಗಕ್ಕೆ ಸದ್ಭಳಕೆಯಾಗುತ್ತಿದ್ದ ಈ ನದಿಯಲ್ಲಿ ಇಂದು ತ್ಯಾಜ್ಯ ನೀರು ಹರಿದು ಹೋಗುತ್ತಿದೆ. ನಗರೀಕರಣದ ಪ್ರಭಾವದಿಂದಾಗಿ ನೋಡಲು ಕೆರೆಯಂತೆ ಸಹ ಕಾಣದ ಈ ನದಿಗೆ ಇಂದು ಮತ್ತೆ ಜೀವ ಕಳೆ ಬಂದಿದೆ.

ಬಸಗನಗುಡಿಯ ದೊಡ್ಡ ಗಣಪತಿ ದೇವಸ್ಥಾನ (ಬಸವ ದೇಗುಲ) ಬಳಿಯ ಸಣ್ಣಗುಡ್ಡದಿಂದ ಈ ಚಿಮ್ಮುವ ನೀರು ಅದೇ ಮುಂದೆ ವೃಷಭಾವತಿ ನದಿಯಾಗಿ ಸ್ಯಾಟ್‌ಲೈಟ್ ಕಡೆಗಿನ ಗಾಳಿ ಆಂಜನೇಯ ಸ್ವಾಮಿ ಪಕ್ಕದ ಹರಿದು ಹೋಗುತ್ತದೆ. ದಕ್ಷಿಣಕ್ಕೆ ಹರಿಯುವ ಈ ವೃಷಭಾವತಿ ನದಿಯು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪೈಪ್‌ಲೈನ್ ಸೇರಿ ಮುಂದೆ ಸಾಗುತ್ತದೆ. ಈ ನದಿ ನೀರು ರಾಜಕಾಲುವೆ ಚರಂಡಿ, ಒಳಚರಂಡಿ ನೀರಿನೊಂದಿಗೆ ಬೆರೆತು ಹೋಗಿದೆ. ಹೀಗಾಗಿ ಇಂದಿನ ಸಮೂಹಕ್ಕೆ ಇದನ್ನು ನದಿ ಎಂದರೆ ನಂಬುವುದಿಲ್ಲ.
ಬತ್ತಿ ಹೋಗಿದ್ದ ನದಿಗೆ ಜೀವ ಕಳೆ
ವರ್ಷಗಳಿಂದಲೂ ಈ ನದಿ ಬತ್ತಿ ಹೋಗಿತ್ತು. ತ್ಯಾಜ್ಯ ನೀರು ಬಿಟ್ಟರೆ ಉಕ್ಕಿಹರಿದು ವರ್ಷಗಳೇ ಕಳೆದಿದ್ದವು. ನಗರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಹಿಂಗಾರು ಮಳೆಯಿಂದಾಗಿ, ವೃಷಭಾವತಿ ಉಕ್ಕಿ ಹರಿಯುತ್ತಿದ್ದಾಳೆ. ಎರಡು ಕಡೆಗಿನ ತಡೆಗೋಡೆಗೆ ತುದಿವರೆಗೂ ಭರ್ತಿಯಾಗಿ, ಉಕ್ಕಿ ಹರಿಯುತ್ತಿದೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ @Madhutm1357 ಹಂಚಿಕೊಂಡಿದ್ದಾರೆ.
ಅನೇಕ ವರ್ಷಗಳ ಹಿಂದೆ ಇದೇ ವೃಷಭಾವತಿ ನೀರನ್ನು ಗಾಳಿ ಆಂಜನೇಯ ಸ್ವಾಮೀ ದೇವಸ್ಥಾನದ ಪೂಜೆಗೆ ಒಯ್ಯುತ್ತಿದ್ದರು ಎಂಬ ಮಾತಿದೆ. ಕುಡಿಯಲು ಈ ನೀರನ್ನು ಬಳಕೆ ಮಾಡುತ್ತಿದ್ದರು. ಆಗ ಬೆಂಗಳೂರಿನ ಜನಸಂಖ್ಯೆ ತೀರಾ ಕಡಿಮೆ ಇತ್ತು. ನದಿಗೆ ತ್ಯಾಜ್ಯ ನೀರು ಸೇರುತ್ತಿರಲಿಲ್ಲ.
ವೃಷಭಾವತಿ ನದಿ ಒಟ್ಟು 148 ಚದರ ಮೈಲಿ ಜಲಾನಯನ ಪ್ರದೇಶ ಹೊಂದಿದೆ. ನಗರದ 198 ವಾರ್ಡ್‌ಗಳ ಮೂಲಕ ಹರಿದು ಹೋಗುತ್ತದೆ. ಸದ್ಯ ವ್ಯಾಪಕ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರವೆಲ್ಲ ಸ್ವಚ್ಚವಾಗಿದೆ. ಇದು ಮೈಸೂರು ರಸ್ತೆಯ ಬಳಿ ಮುಖ್ಯ ನದಿಗೆ ಸೇರುತ್ತದೆ.
Mighty vrishubhavathi, in her full flow.#Bengalururains #bangalorerains #INDvNZ @ravikeerthi22 @NammaBengaluroo @Bnglrweatherman @namma_vjy pic.twitter.com/pnOhkkxR5G
— Madhu (@Madhutm1357) October 20, 2024
ವೃಷಭಾವತಿ ಸೇರಿ ಕೆಲ ನದಿ ನಾಶ
ಕಾಲ ಕಳೆದಂತೆಲ್ಲ ನದಿಯ ಅಕ್ಕ ಪಕ್ಕ ತ್ಯಾಜ್ಯ ಹಾಕಲು ಆರಂಭಿಸಿದರು. ಇಂದು ಅದನ್ನು ರಾಜಕಾಲುವೆಯಾಗಿ ಮಾಡಿ ಬಿಟ್ಟಿದ್ದಾರೆ. ನಗರದ ಹೃದಯಭಾಗದಲ್ಲಿರುವ ವೃಷಭಾವತಿ ಕೆರೆ ಮಾತ್ರವಲ್ಲದೇ, ಇನ್ನೂ ಅನೇಕ ಕೆರೆಗಳು ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ಮಂಗಮಾಯವಾಗಿವೆ.
ಆದರೆ ಮಳೆ ಬಂದಾಗ ಮಳೆ ನೀರು ಮತ್ತೆ ತನ್ನ ಮೂಲ ಸ್ಥಳಕ್ಕೆ ಹರಿದು ಬರುತ್ತಿದೆ. ಈ ಕಾರಣದಿಂದಲೇ ಮಹದೇವಪುರ, ವಿವಿಧ ಪ್ರಮುಖ ವಸತಿ ಸಮುಚ್ಚಯಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಕಾರಣ ಅಲ್ಲಿ ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಕೆರೆಗಳು ಇದ್ದವು. ಆದರೆ ಅವುಗಳನ್ನು ಮುಚ್ಚಿ ಅಲ್ಲಿ ಜನವಸತಿಗೆ ಅಪಾರ್ಟ್ಮೆಂಟ್ ಕಟ್ಟಲಾಯಿತು. ವಾಣಿಜ್ಯ ಚುಟುವಟಿಕೆ ಶುರು ಮಾಡಲಾಯಿತು. ಹೀಗಾಗಿ ಬೆಂಗಳೂರಿಗೆ ಸ್ವಲ್ಪ ಮಳೆ ಬಂದರೂ ನೀರು ಸರಾಗವಾಗಿ ಹರಿದು ಹೋಗದೇ ಪ್ರವಾಹ ಸೃಷ್ಟಿಸುತ್ತಿದೆ.












Click it and Unblock the Notifications