Bengaluru H1N1: ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ 215 ವಿದ್ಯಾರ್ಥಿಗಳಲ್ಲಿ ಫ್ಲೂ ಲಕ್ಷಣ: ಹೊಸ ಎಚ್1ಎನ್1 ಪ್ರಕರಣ ಇಲ್ಲ!
Bengaluru H1N1: ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ H1N1 ಪ್ರಕರಣ ದೃಢಪಟ್ಟಿದೆ ಎನ್ನುವ ವಿಚಾರವು ಬೆಂಗಳೂರಿಗರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಿಖರವಾದ ಮಾಹಿತಿ ನೀಡಿದೆ. ಬೆಂಗಳೂರಿನ ಪಾಟರಿ ರಸ್ತೆ, ರಿಚರ್ಡ್ಸ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಫ್ಲೂ ಸೋಂಕಿನ ಕುರಿತು ಇತ್ತೀಚೆಗೆ ವರದಿಯಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಸಾರ್ವಜನಿಕ ಆರೋಗ್ಯ ಇಲಾಖೆಯ ವತಿಯಿಂದ ಶಾಲೆಯಲ್ಲಿ ಸಕ್ರಿಯ ಆರೋಗ್ಯ ನಿಗಾವಹಣೆ ಮುಂದುವರಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನಿಲ್ ಕುಮಾರ್ ಅವರ ನಿರ್ದೇಶನದಂತೆ ನ್ಯೂ ಬಾಗಲೂರು ಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ತಂಡವು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಶೀಲನೆ ನಡೆಸಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲೆಯ ಹಾಜರಾತಿ ವಿವರ - ಶಾಲೆಯಿಂದ ಲಭ್ಯವಾದ ಮಾಹಿತಿಯ ಪ್ರಕಾರ
* ಒಟ್ಟು ವಿದ್ಯಾರ್ಥಿಗಳು - 1,729
* ಒಟ್ಟು ಶಾಲಾ ಸಿಬ್ಬಂದಿ - 139
* ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು - 1,868
* ಇಂದು ಗೈರುಹಾಜರಾದ ವಿದ್ಯಾರ್ಥಿಗಳು - 269
* ಇಂದು ಹಾಜರಿದ್ದ ವಿದ್ಯಾರ್ಥಿಗಳು - 1,599
ಸಕ್ರಿಯ ಆರೋಗ್ಯ ನಿಗಾವಹಣೆಯ ಭಾಗವಾಗಿ ತರಗತಿವಾರು ಹಾಜರಾತಿ ಮಾಹಿತಿಯನ್ನು ಪರಿಶೀಲಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
215 ವಿದ್ಯಾರ್ಥಿಗಳಲ್ಲಿ ಲಕ್ಷಣಗಳು
ಶಾಲಾ ಆಡಳಿತದಿಂದ ಲಭ್ಯವಾದ ಮಾಹಿತಿಯಂತೆ, ವಿವಿಧ ತರಗತಿಗಳ 215 ವಿದ್ಯಾರ್ಥಿಗಳಲ್ಲಿ ಫ್ಲೂ ಸಂಬಂಧಿಸಿದ ಸೌಮ್ಯ ರೋಗಲಕ್ಷಣಗಳು ಕಂಡುಬಂದಿವೆ. ಆರೋಗ್ಯ ಇಲಾಖೆಯ ತಂಡವು ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಇಂದು ಯಾವುದೇ ಹೊಸ H1N1 ಪ್ರಕರಣ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು, ಶೀತ, ಉಸಿರಾಟಕ್ಕೆ ಸಂಬಂಧಿಸಿದ ಲಕ್ಷಣಗಳು ಸೇರಿದಂತೆ ಇತರ ಅನಾರೋಗ್ಯದ ಲಕ್ಷಣಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
ಮುನ್ನೆಚ್ಚರಿಕಾ ಕ್ರಮಗಳಿಗೆ ಸೂಚನೆ
ವಿದ್ಯಾರ್ಥಿಗಳಲ್ಲಿ ಜ್ವರ, ಉಸಿರಾಟದ ತೊಂದರೆ ಅಥವಾ ಇತರ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ, ಅಂತಹ ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಗೆ ವರದಿ ಮಾಡುವಂತೆ ಶಾಲಾ ಆಡಳಿತಕ್ಕೆ ಸೂಚಿಸಲಾಗಿದೆ. ಯಾವುದೇ ಅಸಾಮಾನ್ಯ ಪ್ರಮಾಣದ ಪ್ರಕರಣಗಳು ಅಥವಾ ರೋಗಲಕ್ಷಣಗಳ ಗುಂಪುಗೂಡುವಿಕೆ ಕಂಡುಬಂದಲ್ಲಿ ತಕ್ಷಣ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮೇಲ್ವಿಚಾರಣೆ ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಕೈತೊಳೆಯುವ ವಿಧಾನ ಕುರಿತು ಶಿಕ್ಷಕರ ಮೂಲಕ ತರಬೇತಿ ನೀಡಲಾಗಿದೆ. ಕೈತೊಳೆಯುವ ವಿಧಾನಕ್ಕೆ ಸಂಬಂಧಿಸಿದ ಜಾಗೃತಿ ಪೋಸ್ಟರ್‌ಗಳನ್ನು ಶಾಲೆಯ ಕೈತೊಳೆಯುವ ಸ್ಥಳಗಳ ಸಮೀಪ ಪ್ರದರ್ಶಿಸಲಾಗಿದೆ.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಕೆಮ್ಮುವಾಗ ಮತ್ತು ಸೀನುವಾಗ ಉಸಿರಾಟದ ಶಿಷ್ಟಾಚಾರ ಪಾಲಿಸುವುದು ಹಾಗೂ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯಕೀಯ ಸಲಹೆ ಪಡೆಯುವಂತೆ ಆರೋಗ್ಯ ಇಲಾಖೆಯ ವತಿಯಿಂದ ಸೂಚಿಸಲಾಗಿದೆ. ಶಾಲೆಯಲ್ಲಿ ಆಗಸ್ಟ್ 18, 2026ರಿಂದ ಆರಂಭಿಸಿರುವ 15 ದಿನಗಳ ಸಕ್ರಿಯ ಆರೋಗ್ಯ ನಿಗಾವಹಣೆ ಮುಂದುವರಿಯಲಿದೆ. ಫ್ಲೂ ಸೋಂಕಿನ ತಡೆ ಹಾಗೂ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (SOPs) ಅನ್ವಯ ಅಗತ್ಯ ಮುನ್ನೆಚ್ಚರಿಕಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಶಾಲಾ ಆಡಳಿತಕ್ಕೆ ಸೂಚಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಇತರ ಶಾಲೆಗಳಲ್ಲಿಯೂ ಫ್ಲೂ ಸೋಂಕಿನ ಕುರಿತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಸೋಂಕು ತಡೆಗಟ್ಟುವ ಕ್ರಮಗಳು, Dos and Don'ts ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.
ಮುಂದುವರಿದು ಬೆಂಗಳೂರಿಗರು ಯಾವುದೇ ಪರಿಶೀಲಿಸದ ಸುದ್ದಿ, ವದಂತಿ ಅಥವಾ ದೃಢೀಕರಿಸದ ಮಾಹಿತಿಗೆ ಕಿವಿಗೊಡದೆ, ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ನೀಡಲಾಗುವ ಮಾಹಿತಿಯನ್ನು ಮಾತ್ರ ಪರಿಗಣಿಸುವಂತೆ ಹಾಗೂ ಫ್ಲೂ ಸೋಂಕಿನ ಕುರಿತು ಸಾರ್ವಜನಿಕರು ಅನಗತ್ಯವಾಗಿ ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ನಗರ ಪಾಲಿಕೆಯ ಆರೋಗ್ಯ ವಿಭಾಗದೊಂದಿಗೆ ಸಹಕರಿಸುವಂತೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
