Bengaluru Property: ಖಾಲಿ ಸೈಟ್ ಮಾಲೀಕರೇ ಎಚ್ಚರ: ಆ.15ರೊಳಗೆ ಸ್ವಚ್ಛಗೊಳಿಸದಿದ್ದರೆ ತೆರವು ಹಣ ವಸೂಲಿ!
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಒಂದೊಂದೇ ಮಹತ್ವದ ನಿರ್ಧಾರಗಳು ಪ್ರಕಟವಾಗುತ್ತಿವೆ. ಇಷ್ಟು ದಿನ ಆಸ್ತಿ ತೆರಿಗೆ ಕಟ್ಟದ ಮನೆ ಮಾಲೀಕರಿಗಾಗಿ ಒಂದಷ್ಟು ಕ್ರಮಗಳು ಜಾರಿಗೆ ಬಂದಿದ್ದವು. ಇದೀಗ ಜಿಬಿಎ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡದ ಮಾಲೀಕರ ವಿರುದ್ಧ ಸ್ವಚ್ಛತಾ ವೆಚ್ಚ ವಸೂಲಿ ನಿರ್ಧರಿಸಲಾಗಿದೆ. ನಿವೇಶನ ವಿಸ್ತೀರ್ಣ ಆಧಾರದಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುವ ಕುರಿತು ಜಿಬಿಎ ಅಂಕಿ-ಸಂಖ್ಯೆ ನೀಡಿದೆ.
ಬೆಂಗಳೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿಸುವ ಉದ್ದೇಶದಿಂದ ಆಗಸ್ಟ್-2026ರ ಮಾಹೆಯಲ್ಲಿ "ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನ ಹಮ್ಮಿಕೊಳ್ಳಲಾಗಿದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರು ಉಪಾವಿಧಿ 18(1)(ಬಿ) ರನ್ವಯ, ನಗರದ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವುದು ಸಂಬಂಧಪಟ್ಟ ನಿವೇಶನ ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಆಗಸ್ಟ್ 15ರ ಒಳಗೆ ಸೈಟ್ ಸ್ವಚ್ಛವಾಗಿರಲಿ
ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನದಲ್ಲಿರುವ ತ್ಯಾಜ್ಯ, ಕಸ, ಮಣ್ಣು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಿ, ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ನಗರದ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ಆಗಸ್ಟ್ 15ರೊಳಗಾಗಿ ತಮ್ಮ ನಿವೇಶನವನ್ನು ಸ್ವಚ್ಛಗೊಳಿಸಿ, ನಗರ ಪಾಲಿಕೆಯ ವತಿಯಿಂದ ಗುರುತಿಸಲಾದ ನಿಗದಿತ ಸ್ಥಳ(5 ಸ್ಥಳಗಳು)ದಲ್ಲಿ ವಿಲೇವಾರಿ ಮಾಡಬೇಕು. ಅಗತ್ಯವಿದ್ದಲ್ಲಿ, ಸ್ವಚ್ಛತೆಗಾಗಿ ಆಯಾ ನಗರ ಪಾಲಿಕೆಗಳು ಅಧಿಸೂಚಿಸಿದ ಸೇವಾದಾರರ ಸೇವೆ ಸಹ ಪಡೆಯಬಹುದು. ಇಲ್ಲವೇ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಆಸ್ತಿ ತೆರಿಗೆ ಜೊತೆ ಸ್ವಚ್ಛತೆ ಹಣ ವಸೂಲಿ
ಜಿಬಿಎ ಸೂಚನೆಯಂತೆ ಇದೇ ಆಗಸ್ಟ್ 15ರ ನಂತರವೂ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದರೆ ಆಯಾ ನಗರ ಪಾಲಿಕೆಯ ವತಿಯಿಂದ ತ್ಯಾಜ್ಯ/ಡೆಬ್ರಿಸ್ ಅನ್ನು ತೆರವುಗೊಳಿಸಿ, ಸ್ವಚ್ಛತಾ ವೆಚ್ಚ ಹಾಗೂ ತ್ಯಾಜ್ಯ ಸಾಗಾಣಿಕೆ ವೆಚ್ಚ ಸಂಬಂಧಪಟ್ಟ ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುವುದು. ಈ ಕ್ರಮವು ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ ಉಪವಿಧಿ 18(1)(ಎ)(ii) ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿನಿಯಮ, 2024ರ ಕಲಂ 285(2)ರನ್ವಯ ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುವುದು ಎಂದರು. ಜೊತೆಗೆ ಸೈಟ್ ವಿಸ್ತೀರ್ಣದ ಆಧಾರದಲ್ಲಿ ಪಾಲಿಕೆಯಿಂದ ಸ್ವಚ್ಚತೆ ಆದಲ್ಲಿ ಆಗುವ ವೆಚ್ಚ, ವಸೂಲಿ ಹಣದ ಲೆಕ್ಕ ನೀಡಿದ್ದಾರೆ.
ಖಾಲಿ ನಿವೇಶನಗಳ ಸ್ವಚ್ಚತೆಗೆ ಆಗುವ ವೆಚ್ಚ
1. 20×30 = 600 ಚ.ಅಡಿ / 55.74 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ
* ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 6,700 ರೂ.
* ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 7,700 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ -19,200 ರೂ.
2. 30×40 = 1,200 ಚ.ಅಡಿ / 111.48 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 13,400 ರೂ.
* ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 14,400 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ - 38,400 ರೂ.
3. 30×50 = 1,500 ಚ.ಅಡಿ / 139.35 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 17,750 ರೂಪಾಯಿ.
* ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 14,750 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ - 48,000 ರೂ.
4. 40×60 = 2,400 ಚ.ಅಡಿ / 222.97 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 26,800 ರೂ.
* ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 27,800 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ - 76,800 ರೂ.
5. 50×80 = 4,000 ಚ.ಅಡಿ / 371.61 ಚ.ಮೀ. ನಿವೇಶನಕ್ಕೆ ತಗಲುವ ವೆಚ್ಚ:
* ಖಾಲಿ ನಿವೇಶನ(ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 46,700 ರೂ.
* ಖಾಲಿ ನಿವೇಶನ(ತಡೆಗೋಡೆಯಿರುವ) ಸ್ವಚ್ಛಗೊಳಿಸಲು ತಗಲುವ ವೆಚ್ಚ(0.45 ಮೀ. ಆಳ) - 47,700 ರೂ.
* ತ್ಯಾಜ್ಯ/ಡೆಬ್ರಿಸ್ ಸಾಗಾಣೆಯ ವೆಚ್ಚ - 1,28,000 ರೂಪಾಯಿ ವಸೂಲಿ ಮಾಡಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಒಂದು ವೇಳೆ ಮೇಲೆ ತಿಳಿಸಿದಕ್ಕಿಂತಲೂ ಹೆಚ್ಚಿನ ಅಳತೆ/ವಿಸ್ತೀರ್ಣದ ನಿವೇಶನಗಳಿಗೆ, ವಿಸ್ತೀರ್ಣಕ್ಕೆ ಅನುಗುಣವಾಗಿ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲಾಗುವುದು. ಖಾಲಿ ನಿವೇಶನಗಳ ಮಾಲೀಕರು ಸಾರ್ವಜನಿಕ ಆರೋಗ್ಯ ಮತ್ತು ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ನಿಗದಿತ ದಿನಾಂಕದೊಳಗಾಗಿ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿ, ತ್ಯಾಜ್ಯರಹಿತವಾಗಿಡಲು ಸಹಕರಿಸುವಂತೆ ಜಿಬಿಎ ಕೋರಿದೆ.


Click it and Unblock the Notifications
