Freedom park: ಬೆಂಗಳೂರಿನ ಹೃದಯಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನ ನವೀಕರಣಕ್ಕೆ ನಿರ್ಧಾರ, ವೆಚ್ಚ ಎಷ್ಟು ಕೋಟಿ?
ಬೆಂಗಳೂರಿನ ಮಧ್ಯಭಾಗ ಅಂದರೆ ಹೃದಯಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನ (Freedom park) ಪ್ರತಿಭಟನೆಗಳಿಗೆಂದೇ ಸೀಮಿತವಾಗಿದೆ. ಇದೀಗ ಇದನ್ನು ನವೀಕರಿಸಿ ಪ್ರೇಕ್ಷಣೀಯ ಸ್ಥಳ ಹಾಗೂ ಹೆರಿಟೇಜ್ ಹಬ್ ಮಾಡಲು ಬಿಬಿಎಂಪಿ ಮುಂದಾಗಿದೆ. ಜೊತೆಗೆ ಇದರಿಂದ ಆದಾಯ ಬರುವಂತೆ ಯೋಜನೆ ರೂಪಿಸಿದೆ. ಹಾಗಾದರೆ ಇದರ ನವೀಕರಣಕ್ಕೆ ಎಷ್ಟು ಕೋಟಿ ವೆಚ್ಚ ಮಾಡಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸ್ವಾತಂತ್ರ್ಯ ಉದ್ಯಾನವನ ಪ್ರಸ್ತುತ ಪ್ರತಿಭಟನೆಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ. ಇನ್ನು ಇದೀಗ 21 ಹೆಕ್ಟೇರ್‌ನಲ್ಲಿರುವ ಇದನ್ನು ನವೀಕರಣ ಮಾಡಲು ಬಿಬಿಎಂಪಿ ₹5 ಕೋಟಿ ಮೀಸಲಿಟ್ಟಿದ್ದು, ನವೀಕರಣ ಮಾಡಿ ಪ್ರೇಕ್ಷಣೀಯ ಸ್ಥಳದ ಜೊತೆ ಹೆರಿಟೇಜ್ ಹಬ್ ಮಾಡಲು ಬಿಬಿಎಂಪಿ ಯೋಜನೆ ಹಾಕಿಕೊಂಡಿದೆ.

ಇನ್ನು ಫ್ರೀಡಂ ಪಾರ್ಕ್‌ನಲ್ಲಿ ಅಸ್ತಿತ್ವದಲ್ಲಿರುವ ಕಟ್ಟಡಗಳ ನವೀಕರಣ, ಹಳೆಯ ಸೆಂಟ್ರಲ್ ಜೈಲ್ ರಚನೆಗಳು, ವಿದ್ಯುತೀಕರಣ ಹಾಗೂ ದುರಸ್ತಿಗಾಗಿ ಬಿಬಿಎಂಪಿ ಯೋಜನೆ ರೂಪಿಸಿದೆ. ಜೊತೆಗೆ ಕಟ್ಟಡಗಳಿಗೆ ಹಾನಿ ಸೇರಿದಂತೆ ವಿವಿಧ ಕಾಮಗಾರಿಯೊಂದಿಗೆ ರಾಮಚಂದ್ರ ರಸ್ತೆಯಿಂದ ಫ್ರೀಡಂ ಪಾರ್ಕ್‌ಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣಕ್ಕೆ ಯೋಜನೆ ನಡೆದಿದೆ.
ಫ್ರೀಡಂ ಪಾರ್ಕ್ ಅನ್ನು 2008ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಈ ಹಿಂದಿನ ಕೇಂದ್ರ ಕಾರಾಗೃಹವನ್ನು ಒಳಗೊಂಡಿದೆ. ಆದರೆ ಇದೀಗ ಫ್ರೀಡಂ ಪಾರ್ಕ್ ಸಂಪೂರ್ಣ ಅಯೋಮಯವಾಗಿದೆ. ವಿಶೇಷವಾಗಿ ಕೇಂದ್ರ ಕಾರಾಗೃಹ ಭಾಗ ಸಂಪೂರ್ಣವಾಗಿ ಹದಗೆಟ್ಟಿದೆ. ಸದ್ಯ ಒಳಗಡೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಮುಂದಿನ ದಿನಗಳಲ್ಲಿ ಪಾರ್ಕ್ ನವೀಕರಣ ಮಾಡಿ ವಾಣಿಜ್ಯ ಆದಾಯ ಬರುವಂತೆ ಮಾಡಲು ಪಾಲಿಕೆ ಯೋಜನೆ ರೂಪಿಸಿದೆ.
ಬಿಬಿಎಂಪಿಯು ಫ್ರೀಡಂ ಪಾರ್ಕ್‌ನ ಅಸ್ತಿತ್ವದಲ್ಲಿರುವ ರಚನೆಗಳ ನವೀಕರಣ, ಅಕೌಸ್ಟಿಕ್ಸ್ ಮತ್ತು ವಿದ್ಯುದ್ದೀಕರಣಕ್ಕಾಗಿ ಟೆಂಡರ್ ಕರೆದಿದೆ. ಸಂಪೂರ್ಣ ಕಾಮಗಾರಿಗೆ 5 ಕೋಟಿ ರೂಪಾಯಿ ವೆಚ್ಚ ಆಗಬಹುದು ಎಂದು ಬಜೆಟ್ ನೀಡಿದೆ. ಕೋವಿಡ್ ಕಾಲದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಿದೆ.
ಈ ಸಮಯದಲ್ಲಿ ಖಾಲಿ ಇದ್ದ ಸ್ಥಳದಲ್ಲಿ ಆಂಫಿ ಥಿಯೇಟರ್, ಹೊರ ಸಭಾಂಗಣ ಹಾಗೂ ಗಾರ್ಡನ್ ಅನ್ನು ಹೊಸದಾಗಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಕಳಪೆ ಕಾಮಗಾರಿಯಿಂದ ಎಲ್ಲವೂ ಸಂಪೂರ್ಣವಾಗಿ ಹಾಳಾಗಿದೆ. ಜೊತೆಗೆ ಪಾರ್ಕ್ ಒಳಗಿರುವ ಹಳೆಯ ಜೈಲು ಕುಸಿಯುವ ಹಂತದಲ್ಲಿದೆ ಎನ್ನುವ ಮಾಹಿತಿ ಇದೆ.
ಉದ್ಯಾನವನ ನವೀಕರಿಸಲು ಬಿಬಿಎಂಪಿ 8 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಅಂದಾಜಿಸಿತ್ತು. ಆದರೆ ಇದೀಗ ನವೀಕರಣಕ್ಕೆ 5 ಕೋಟಿ ರೂಪಾಯಿ ಬಜೆಟ್ ಇದೆ. ಆದ್ದರಿಂದ ಆಂಫಿಥಿಯೇಟರ್‌ವೊಳಗೆ ಹವಾನಿಯಂತ್ರಣ ಮತ್ತು ಅಕೌಸ್ಟಿಕ್ಸ್ ಯೋಜನೆಗಳನ್ನು ಬಿಬಿಎಂಪಿ ಕೈಬಿಟ್ಟಿದೆ ಎನ್ನುವ ಮಾಹಿತಿ ಇದೆ. 60 ಆಸನಗಳ ಆಂಫಿಥಿಯೇಟರ್ ಅನ್ನು ನವೀಕರಿಸುವ ಯೋಜನೆಯನ್ನು ಪಾಲಿಕೆ ಕೈಬಿಟ್ಟಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಪ್ರಸ್ತುತ, ಬಿಬಿಎಂಪಿಯು ಪ್ರವೇಶ ಶುಲ್ಕವಿಲ್ಲದೆ ಫ್ರೀಡಂ ಪಾರ್ಕ್ ಒಳಗೆ ಪ್ರವಾಸಿಗರಿಗೆ ಅವಕಾಶ ನೀಡುತ್ತಿದೆ.












Click it and Unblock the Notifications