Bengaluru Footpath Update: ನವೆಂಬರ್ 1ರೊಳಗೆ 100 ಕಿ.ಮೀ. ಫುಟ್‌ಪಾತ್ ಅತಿಕ್ರಮಣ ತೆರವಿಗೆ ಜಿಬಿಎ ಗುರಿ
Bengaluru Footpath Update: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೊಡಿಗೇಹಳ್ಳಿ ಮುಖ್ಯ ರಸ್ತೆಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಕೊಡಿಗೇಹಳ್ಳಿ ಮುಖ್ಯ ರಸ್ತೆಯ ಫುಟ್‌ಪಾತ್ ಪರಿಶೀಲನೆ: ಪಾದಚಾರಿ ಸುಗಮ ಸಂಚಾರಕ್ಕೆ ಅಡೆತಡೆಗಳ ಗುರುತಿಸುವಿಕೆ ಪಾಲಿಕೆ ಮುಂದಾಗಿದೆ. ನವೆಂಬರ್ 1ರೊಳಗೆ 100 ಕಿ.ಮೀ. ಫುಟ್‌ಪಾತ್‌ಗಳನ್ನು ಅತಿಕ್ರಮಣಮುಕ್ತಗೊಳಿಸಿ, ಪಾದಚಾರಿ ಸ್ನೇಹಿಯಾಗಿಸಲು ಪಾಲಿಕೆ ಗುರಿ ಹಾಕಿಕೊಂಡಿರುವುದಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ, 1,000 ಕಿ.ಮೀ. ಫುಟ್‌ಪಾತ್‌ಗಳನ್ನು ಪಾದಚಾರಿ ಸ್ನೇಹಿಯಾಗಿಸುವ ಕಾರ್ಯದ ಭಾಗವಾಗಿ, ವಲಯ-1ರ ಮುಖ್ಯ ಎಂಜಿನಿಯರರು, ಕಾರ್ಯನಿರ್ವಾಹಕ ಎಂಜಿನಿಯರರು ಹಾಗೂ ಅಗ್ಲಿ ಇಂಡಿಯನ್ ಪ್ರತಿನಿಧಿ ಅರುಣ್ ಪೈ ಅವರೊಂದಿಗೆ ಕೊಡಿಗೇಹಳ್ಳಿ ಮುಖ್ಯ ರಸ್ತೆಯಲ್ಲಿ ಫುಟ್‌ಪಾತ್ ವಾಕ್‌ಬಿಲಿಟಿ ಪರಿಶೀಲನೆ ನಡೆಸಿದ್ದಾರೆ.

ಕೊಡಿಗೇಹಳ್ಳಿ ಗೇಟ್‌ನಿಂದ ಕೊಡಿಗೇಹಳ್ಳಿ ಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 4 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಪರಿಶೀಲಿಸಿ, ಸುಗಮ ಸಂಚಾರಕ್ಕೆ ಇರುವ ಅಡಚಣೆಗಳು ಹಾಗೂ ಫುಟ್‌ಪಾತ್‌ಗಳ ಸ್ಥಿತಿಗತಿಗಳನ್ನು ಮೌಲ್ಯಮಾಪನ ಮಾಡಲಾಯಿತು. ಪರಿಶೀಲನೆಯ ವೇಳೆ ಫುಟ್‌ಪಾತ್‌ಗಳಲ್ಲಿ ಅನುಪಯುಕ್ತ ಬೀದಿ ದೀಪಗಳ ಕಂಬಗಳು ಪಾದಚಾರಿ ಸಂಚಾರಕ್ಕೆ ಅಡ್ಡಿಯಾಗಿರುವುದು, ಜಲಮಂಡಳಿಯ ಮ್ಯಾನ್‌ಹೋಲ್ ಮತ್ತು ಇತರ ಯುಟಿಲಿಟಿ ಚೇಂಬರ್‌ಗಳ ಮುಚ್ಚಳಗಳು ಫುಟ್‌ಪಾತ್‌ನ ಮೇಲ್ಮೈ ಮಟ್ಟಕ್ಕಿಂತ ಎತ್ತರದಲ್ಲಿರುವುದು ಹಾಗೂ ಅಂಗಡಿಕಾರರು ಮತ್ತು ಬೀದಿ ವ್ಯಾಪಾರಿಗಳಿಂದ ಫುಟ್‌ಪಾತ್ ಜಾಗ ಅತಿಕ್ರಮಣವಾಗಿರುವುದು ಕಂಡುಬಂದಿದೆ.
ಇದಲ್ಲದೆ, ಬಳಕೆಯಲ್ಲಿಲ್ಲದ ಬೆಸ್ಕಾಂ ಕಂಬಗಳನ್ನು ತೆರವುಗೊಳಿಸುವ ಅಗತ್ಯ, ಫುಟ್‌ಪಾತ್ ಮೇಲ್ಮೈಗೆ ಸಮರ್ಪಕವಾಗಿ ಹೊಂದಿಕೆಯಾಗದ OFC ಚೇಂಬರ್‌ಗಳು, ರಸ್ತೆಯಲ್ಲಿ ತೆರೆದ ಸ್ಥಿತಿಯಲ್ಲಿದ್ದ OFC ಕೇಬಲ್‌ಗಳು, ಕೆಲವು ಸ್ಥಳಗಳಲ್ಲಿ ಘನತ್ಯಾಜ್ಯ ಸುರಿದಿರುವುದು ಹಾಗೂ ಕೆಲವು ಕಡೆ ಫುಟ್‌ಪಾತ್ ಸ್ಲಾಬ್‌ಗಳು ಕುಸಿದು ಅಸಮತಟ್ಟಾದ ಮೇಲ್ಮೈ ನಿರ್ಮಾಣವಾಗಿರುವುದನ್ನೂ ಗುರುತಿಸಿದ್ದಾರೆ.
ಗುರುತಿಸಲಾದ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಫುಟ್‌ಪಾತ್‌ಗಳು ಸುರಕ್ಷಿತವಾಗಿದ್ದು, ಪಾದಚಾರಿಗಳಿಗೆ ಯಾವುದೇ ಅಡಚಣೆಯಿಲ್ಲದೆ ಸಂಚರಿಸಲು ಅನುಕೂಲವಾಗುವಂತೆ, ನ್ಯೂನ್ಯತೆಗಳನ್ನು ಸರಿಪಡಿಸಲು ನಿರ್ದೇಶನ ನೀಡಲಾಗಿದೆ.
ನವೆಂಬರ್ 1ರೊಳಗೆ 100 ಕಿ.ಮೀ. ಫುಟ್‌ಪಾತ್‌ಗಳನ್ನು ಪಾದಚಾರಿ ಸಂಚಾರಕ್ಕೆ ಅನುಕೂಲಕರ ಹಾಗೂ ಅಡಚಣೆಮುಕ್ತವಾಗಿಸುವ ಗುರಿಯನ್ನು ಬೆಂಗಳೂರು ಉತ್ತರ ನಗರ ಪಾಲಿಕೆ ಹೊಂದಿದೆ. ನಗರದ ಫುಟ್‌ಪಾತ್‌ಗಳನ್ನು ಸುಗಮ, ಸುರಕ್ಷಿತ ಮತ್ತು ಪಾದಚಾರಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications
