ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳ ಮೇಲೆ ಫುಡ್ ಸೇಫ್ಟಿ ದಾಳಿ: ಎಲ್ಲ ಕ್ಲಬ್‌ಗಳಿಗೆ ನೋಟಿಸ್ ಜಾರಿ
ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಗುಣಮಟ್ಟ ದಾಳಿ ಮುಂದುವರಿಸಿದ್ದಾರೆ. ಬೆಂಗಳೂರಿನ ವಿವಿಧ ಕ್ಲಬ್‌ಗಳ ಮೇಲೆ ದಾಳಿ ನಡೆದಿದೆ. ಈ ವೇಳೆ ಕ್ಲಬ್‌ಗಳಲ್ಲಿ ಆಹಾರ ಪದಾರ್ಥಗಳಲ್ಲಿ, ಕಿಚನ್ ಪ್ರದೇಶದಲ್ಲಿ ಜಿರಳೆ, ಇನ್ನಿತರ ಕೀಟ ಬಾಧೆ, ಅನೈರ್ಮಲ್ಯ ಹಾಗೂ ನಿಯಮ ಉಲ್ಲಂಘನೆ ಆಗಿರುವುದು ಗೊತ್ತಾಗಿದೆ.
ಬೆಂಗಳೂರು ನಗರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿರುವ ವಿವಿಧ ಕ್ಲಬ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006, ನಿಯಮಗಳು 2011ರ ನಿಯಮಗಳ ಅನುಸರಣೆಯನ್ನು ಪರಿಶೀಲಿಸುವ ಉದ್ದೇಶದಿಂದ ವಿಶೇಷ ತಪಾಸಣೆ ನಡೆಸಲು ಆಹಾರ ಸುರಕ್ಷತಾ ಅಧಿಕಾರಿಗಳ ತಂಡಗಳನ್ನು ರಚಿಸಿ ನಿಯೋಜಿಸಿದೆ.

ಈ ತಂಡದ ಸದಸ್ಯರುಗಳು ನಗರದ 'ಸೆಂಚುರಿ ಕ್ಲಬ್, ಕೆಎಸ್‌ಸಿಎ ಕ್ಲಬ್, ಬೌರಿಂಗ್ ಕ್ಲಬ್, ಕ್ಯಾಥೋಲಿಕ್ ಕ್ಲಬ್, ಟೆನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್, ಮಲ್ಲೇಶ್ವರಂ ಕ್ಲಬ್ ಗಳ ಮೇಲೆ ದಾಳಿ ನಡೆಸಿ ತಪಾಸಣೆ ಕೈಗೊಂಡರು. ಅನೈರ್ಮಲ್ಯದ ಕ್ಲಬ್‌ಗಳಿಗೆ ನೋಟಿಸ್ ಜಾರೊಗಳಿಸಲಾಗಿದೆ. ದಾಳಿ ವೇಳೆ ಪತ್ತೆಯಾಗಿದ್ದೇನು, ಕೈಗೊಂಡ ಕ್ರಮಗಳು ಯಾವುವು?..
ತಪಾಸಣೆ ಪ್ರಮುಖ ಅಂಶಗಳು, ಕ್ರಮಗಳು
ಬೆಂಗಳೂರಿನ ಕೆಎಸ್‌ಸಿಎ ಕ್ಲಬ್ ನಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆ ಕಾಣಿಸಿಕೊಂಡಿತ್ತು. ಪ್ಲಾಸ್ಟಿಕ್ ಕಟಿಂಗ್ ಬೋರ್ಡ್ ಬಳಕೆ, ಡ್ರೈನೇಜ್ ವ್ಯವಸ್ಥೆಯಲ್ಲಿ ತಡೆ, ಆಹಾರ ಲೇಬಲಿಂಗ್‌ಗೆ ಸಂಬಂಧಿಸಿದ ಉಲ್ಲಂಘನೆ ಆಗಿರುವುದು ತಿಳಿದು ಬಂತು. ಸ್ವಚ್ಛತೆಯ ಕೊರತೆ, ಸಸ್ಯಾಹಾರಿ/ಮಾಂಸಾಹಾರಿ ಆಹಾರ ಪದಾರ್ಥಗಳ ಅಸಮರ್ಪಕ ಸಂಗ್ರಹಣೆ ಹಾಗೂ ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿ ನೀರಿನ ವ್ಯವಸ್ಥೆಯ ಕೊರತೆ ಇದ್ದು, ಅಗತ್ಯ ಸೂಚನೆ ಜೊತೆಗೆ ನೋಟಿಸ್ ಜಾರಿಗೊಳಿಸಲಾಗಿದೆ.
* ಬೌರಿಂಗ್ ಕ್ಲಬ್‌ನಲ್ಲಿ ಆಹಾರ ಸಂಗ್ರಹಣಾ ಸ್ಥಳದಲ್ಲಿ ಅಸ್ವಚ್ಛತೆ ಹಾಗೂ ಕೀಟಬಾಧೆ (Cockroach Infestation) ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಬಹುತೇಕ ದಾಳಿ ಮಾಡಿದ ಎಲ್ಲ ಕ್ಲಬ್‌ಗಳಿಗೆ ನೋಟಿಸ್ ಕೊಡಲಾಗಿದೆ.
ಇನ್ನೂ ಸೆಂಚುರಿ ಕ್ಲಬ್‌ನಲ್ಲಿ ತಪಾಸಣೆಯ ಸಂದರ್ಭ ವೇಳೆ ಕೀಟಬಾಧೆ (Cockroach Infestation) ಹಾಗೂ ಅಸ್ವಚ್ಛತೆ ಇರುವುದು ಕಂಡು ಬಂದಿದೆ. ಕ್ಯಾಥೊಲಿಕ್ ಕ್ಲಬ್‌ನಲ್ಲಿ ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಉಲ್ಲಂಘನೆ, ಕೀಟಬಾಧೆ, ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಹಾಗೂ ಅವಧಿ ಮೀರಿದ 10 ಪ್ಯಾಕೆಟ್‌ಗಳ ಅಣಬೆ ಆಹಾರ ಪದಾರ್ಥಗಳು ಕಂಡುಬಂದಿದ್ದು, ನೋಟಿಸ್ ನೀಡಲಾಯಿತು.
ಟೆನ್ನಿಸ್ ಕ್ಲಬ್‌ನಲ್ಲಿ ಆಹಾರ ನಿರ್ವಹಣಾ ಸಿಬ್ಬಂದಿಗೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣಪತ್ರಗಳು ಲಭ್ಯವಿಲ್ಲದಿರುವುದು ಕಂಡು ಬಂತು. ವಿಜಯನಗರ ಕ್ಲಬ್ ಮತ್ತು ಮಹಾಲಕ್ಷ್ಮೀ ಬಡಾವಣೆ ಕ್ಲಬ್‌ನಲ್ಲಿಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಉಲ್ಲಂಘನೆ ಆಗಿದೆ. ಜೊತೆಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಇರುವುದನ್ನು ಅಧಿಕಾರಿಗಳು ಗಮನಿಸಿ ನೋಟಿಸ್ ನೀಡಿದರು.
ಅದೇ ರಿತಿ ಮಲ್ಲೇಶ್ವರಂ ಕ್ಲಬ್‌ನಲ್ಲಿ ಆಹಾರ ಪದಾರ್ಥಗಳ ಲೇಬಲಿಂಗ್ ಉಲ್ಲಂಘನೆ ಆಗಿದ್ದು, ಅಲ್ಲಲ್ಲಿ ಜಿರಳೆಗಳೇ ತುಂಬಿದ್ದವು. ಸ್ವಚ್ಛತೆ ಮತ್ತು ನೈರ್ಮಲ್ಯ ಇರಲಿಲ್ಲ. ಇದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಯಿತು.
ತಪಾಸಣೆಯ ಸಂದರ್ಭದಲ್ಲಿ ಕುಡಿಯುವ ನೀರು ಹಾಗೂ ಬಳಸಿದ ಅಡುಗೆ ಎಣ್ಣೆ (Used Cooking Oil) ಮಾದರಿಗಳನ್ನು ಸಂಗ್ರಹಿಸಿ, ಹೆಚ್ಚಿನ ವಿಶ್ಲೇಷಣೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವಿಶ್ಲೇಷಣಾ ವರದಿಗಳು ಸ್ವೀಕರಿಸಿದ ನಂತರ, ವರದಿಯಲ್ಲಿನ ಫಲಿತಾಂಶಗಳ ಆಧಾರದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮಗಳು 2011 ರನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
