1923ರ ಬ್ರಿಟಿಷ್ ನಕ್ಷೆ ಬಳಸಿ ಬೆಂಗಳೂರಿನಲ್ಲಿ ಪ್ರವಾಹ ತಡೆದ ಮಾಜಿ ಯೋಧ, 14 ಪ್ರಾಚೀನ ಕೆರೆಗಳಿಗೆ ಮರುಜೀವ
ಬೆಂಗಳೂರು, ಜುಲೈ 30: ಬೆಂಗಳೂರಿನಲ್ಲಿ ಮುಂಗಾರಿನ ವೇಳೆ ಪ್ರವಾಹದಂತಹ ವಾತಾವರಣ ಸೃಷ್ಟಿಯಾಗಿ ರಸ್ತೆಗಳು ಜಲಾವೃತ ಆಗಿಬಿಡುತ್ತವೆ. ಮತ್ತೊಂದೆಡೆ ಇದೇ ವೇಳೆ ಇಲ್ಲಿನ ಕೆರೆಗಳು ಮಾತ್ರ ನೀರಿಲ್ಲದೆ ಒಣಗಿರುತ್ತವೆ. ಇದೀಗ ಮಾಜಿ ಯೋಧರೊಬ್ಬರು 1923ರ ನಕ್ಷೆ ಬಳಸಿ ಪರಿಹಾರ ಕಂಡುಹಿಡಿದು ಮನೆ ಮಾತಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನಲ್ಲಿ ಪ್ರತಿ ಮುಂಗಾರಿನ ಸಮಯದಲ್ಲೂ ರಸ್ತೆಗಳು ಜಲಾವೃತಗೊಂಡು ಪ್ರವಾಹದ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಅದೇ ಸಮಯದಲ್ಲಿ ನಗರದ ಪ್ರಮುಖ ಕೆರೆಗಳು ಮಾತ್ರ ನೀರಿಲ್ಲದೆ ಒಣಗಿರುತ್ತವೆ. ಇದನ್ನು ಗಮನಿಸಿದ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಸಂತೋಷ್ ಕುಮಾರ್ ಅವರು ಬೆಂಗಳೂರಿನ ಪ್ರವಾಹ ಸಮಸ್ಯೆಗೆ ನೈಸರ್ಗಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೆರೆಗಳು ಭರ್ತಿಯಾಗದಿರಲು ಪ್ರಮುಖ ಕಾರಣ ಏನು?
2008ರಲ್ಲಿ ಸೇನೆಯಿಂದ ನಿವೃತ್ತರಾಗಿ ಆನೇಕಲ್ ತಾಲೂಕಿನ ಮುತ್ತನಲ್ಲೂರಿಗೆ ಹಿಂತಿರುಗಿದ ಸಂತೋಷ್ ಕುಮಾರ್ ಅವರಿಗೆ, ಭಾರಿ ಮಳೆಯಾದಾಗಲೂ ಕೆರೆಗಳು ಭರ್ತಿಯಾಗದೆ ರಸ್ತೆಗಳ ಮೇಲೆ ನೀರು ಹರಿಯುವುದು ಅಚ್ಚರಿ ಮೂಡಿಸಿತ್ತು. 2017ರಿಂದ 2019ರ ನಡುವೆ ಅವರು ರಾಜಕಾಲುವೆಗಳು ಮತ್ತು ಕೆರೆಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿದರು. ಮಳೆ ಕಡಿಮೆ ಆಗಿದ್ದರಿಂದ ಕೆರೆಗಳು ಭರ್ತಿ ಆಗುತ್ತಿರಲಿಲ್ಲ. ರಾಜಕಾಲುವೆಗಳು ಅತಿಕ್ರಮಣಕ್ಕೆ ಒಳಗಾಗಿ ಕಾಂಕ್ರೀಟ್ ಕಟ್ಟಡಗಳ ಅಡಿಯಲ್ಲಿ ಮುಚ್ಚಿಹೋಗಿರುವುದೇ ಇದಕ್ಕೆ ಕಾರಣ ಎಂದು ತಿಳಿದುಕೊಂಡರು.
ಮೂಲ ರಾಜಕಾಲುವೆಗಳ ಮಾರ್ಗವನ್ನು ಪತ್ತೆಹಚ್ಚಲು ಅವರು 1923ರಲ್ಲಿ ಬ್ರಿಟಿಷರು ಸಿದ್ಧಪಡಿಸಿದ್ದ ನಕ್ಷೆಗಳನ್ನು ಪಡೆದರು. ಈ ಶತಮಾನದಷ್ಟು ಹಳೆಯ ನಕ್ಷೆಗಳನ್ನು ಹಿಡಿದುಕೊಂಡು ಗ್ರಾಮಗಳು ಮತ್ತು ಲೇಔಟ್‌ಗಳಲ್ಲಿ ಸರ್ವೇ ನಡೆಸಿದರು. ಮುತ್ತನಲ್ಲೂರು ಕೆರೆಯಿಂದ ಬಿದರಗುಪ್ಪೆ ಕೆರೆಯವರೆಗಿನ ನೈಸರ್ಗಿಕ ನೀರಿನ ಮಾರ್ಗಗಳನ್ನು ಪರಿಶೀಲಿಸಿದಾಗ ನಾಲ್ಕು ಪ್ರಮುಖ ರಾಜಕಾಲುವೆಗಳು ಸಂಪೂರ್ಣವಾಗಿ ಅತಿಕ್ರಮಣಗೊಂಡಿದ್ದು, ಒಂದಂತೂ ಕಣ್ಣಿಗೆ ಕಾಣಿಸದಂತೆ ಕಣ್ಮರೆಯಾಗಿತ್ತು.
4 ಕಿ.ಮೀ. ಉದ್ದದ ರಾಜಕಾಲುವೆಯ ಅತಿಕ್ರಮಣ
ಸಾರ್ವಜನಿಕರ ಬೆಂಬಲ, ಸ್ಥಳೀಯರ ನೆರವು, ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕಣ್ಮರೆ ಆಗಿದ್ದ 4 ಕಿಲೋ ಮೀಟರ್ ಉದ್ದದ ರಾಜಕಾಲುವೆಯ ಅತಿಕ್ರಮಣ ತೆರವುಗೊಳಿಸಿ ಪುನಶ್ಚೇತನಗೊಳಿಸಿದರು. ಈ ಕಾಲುವೆಯನ್ನು ಬಟ್ಟಲಕೆರೆಗೆ ಸಂಪರ್ಕಿಸಲಾಯಿತು.
ಬಳಿಕ ಮುಂದಿನ ಮಳೆಗಾಲದಲ್ಲಿ ಇದರ ಫಲಿತಾಂಶ ಪ್ರತ್ಯಕ್ಷವಾಗಿ ಕಂಡಿತು. ಸುತ್ತಮುತ್ತಲಿನ ಪ್ರದೇಶಗಳು ನೀರಿನಿಂದ ಮುಳುಗಡೆ ಆಗಿದ್ದರೆ, ಮುತ್ತನಲ್ಲೂರು ಮತ್ತು ಆನೇಕಲ್ ಪ್ರದೇಶಗಳು ಪ್ರವಾಹದಿಂದ ಪಾರಾದವು. ಮಳೆನೀರು ರಸ್ತೆಗಳ ಮೇಲೆ ಹರಿಯುವ ಬದಲು ರಾಜಕಾಲುವೆಯ ಮೂಲಕ ಕೆರೆಗಳನ್ನು ತಲುಪಿ ಭರ್ತಿಯಾದವು.
ಕ್ಯಾಪ್ಟನ್ ಸಂತೋಷ್ ಅವರ ಈ ಪ್ರಯತ್ನದ ಫಲವಾಗಿ ಆನೇಕಲ್ ತಾಲೂಕಿನಾದ್ಯಂತ ರಾಜಕಾಲುವೆಗಳ ಅಡೆತಡೆಗಳನ್ನು ತೆರವುಗೊಳಿಸಿದರು. ಈ ಮೂಲಕ ಸುಮಾರು 1,000 ವರ್ಷಗಳಷ್ಟು ಹಳೆಯದಾದ 14 ಪ್ರಾಚೀನ ಕೆರೆಗಳಿಗೆ ನೀರು ಹರಿಯುವಂತೆ ಮಾಡಲಾಗಿದೆ. ಇನ್ನೂ ಈ ಕುರಿತು ಮಾತನಾಡಿರುವ ಕ್ಯಾಪ್ಟನ್ ಸಂತೋಷ್ ಕುಮಾರ್ ಅವರು, 'ನಾವು ರಾಜಕಾಲುವೆಗಳನ್ನು ಮುಚ್ಚಿದರೆ ಮಳೆ ಬಂದಾಗ ನೀರು ತನ್ನ ಹಳೆಯ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ,' ಎಂದು ಹೇಳಿದ್ದಾರೆ.
ಪ್ರವಾಹ ತಡೆಯಲು ಹೊಸದಾಗಿ ದೊಡ್ಡ ಮೂಲಸೌಕರ್ಯ ನಿರ್ಮಿಸುವ ಅಗತ್ಯವಿಲ್ಲ. ನಮ್ಮ ಹಿರಿಯರು ರೂಪಿಸಿದ್ದ ನೈಸರ್ಗಿಕ ರಾಜಕಾಲುವೆಗಳನ್ನು ರಕ್ಷಿಸಿ ಅತಿಕ್ರಮಣ ತೆರವುಗೊಳಿಸಿದರೆ ಸಾಕು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಮಳೆಗಾಲದ ವೇಳೆ ಪ್ರವಾಹದಂತಹ ವಾತಾವರಣ ನಿರ್ಮಾಣ ಆಗುವುದೇ ರಾಜಕಾಲುವೆಗಳ ಮೇಲೆಯೇ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳನ್ನು ಕಟ್ಟಿರುವುದರಿಂದ.
ನಗರದ ಬಹುತೇಕ ಭಾಗಗಳಲ್ಲಿ ಈಗಲೂ ಸಹ ಒಂದು ಗಂಟೆ ಮಳೆ ಸುರಿದರೆ ಸಾಕು ರಸ್ತೆಗಳು ಜವಾಲೃತವಾಗಿ ವಾಹನ ಸವಾರರು ಪರದಾಡುತ್ತಾರೆ. ಇದರಿಂದ ಮುಕ್ತಿ ಪಡೆಯಬೇಕಂದ್ರೆ ಹಿರಿಯರು ಹಾಕಿಕೊಟ್ಟ ನಿಯಮಗಳನ್ನ ಪಾಲಿಸಬೇಕಿದೆ ಎಂಬುದು ಅವರ ಮಾತಿನ ಅರ್ಥವಾಗಿದೆ.


Click it and Unblock the Notifications
