ಬೆಂಗಳೂರು: ಕುಂಟುತ್ತಾ ಭಿಕ್ಷೆ ಬೇಡಿ ದಿನಕ್ಕೆ 5 ಸಾವಿರ ಗಳಿಕೆ, ಜೊತೆಗೆ ಮೊಬೈಲ್ ಕಳ್ಳತನ! ನಕಲಿ ದಿವ್ಯಾಂಗನ ಹೈಡ್ರಾಮಾ ಬಯಲು
ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹೋದರೆ ಯಾವ ರೀತಿ ಮೋಸ ಹೋಗುತ್ತೇವೆ ಎಂಬುದಕ್ಕೆ ಇಂದು ಬೆಂಗಳೂರಿನ ಬೈಯತರಾಯನಪುರ ಸಮೀಪದ ಐಟಿಐ ಲೇಔಟ್‌ನಲ್ಲಿ ನಡೆದ ಈ ಘಟನೆಯೇ ಒಂದು ಒಳ್ಳೆಯ ಉದಾಹರಣೆ. ಕೈ-ಕಾಲುಗಳು ಗಟ್ಟಿಮುಟ್ಟಾಗಿದ್ದರೂ, ದಿವ್ಯಾಂಗನಂತೆ ನಟಿಸಿ ಸಾರ್ವಜನಿಕರಿಂದ ಅನುಕಂಪ ಗಿಟ್ಟಿಸಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದ ಉತ್ತರ ಪ್ರದೇಶ ಮೂಲದ ಮುಕೇಶ್ ಎಂಬ ವ್ಯಕ್ತಿಯ ಬಣ್ಣ ಬಯಲಾಗಿದೆ.
ಭಿಕ್ಷೆ ಬೇಡುವ ಸಲುವಾಗಿ ಈತ ಮಾಡುವ ನಾಟಕಗಳನ್ನ ಕಣ್ಣಾರೆ ನೋಡಿದ ಸ್ಥಳೀಯರು ನಿಜಕ್ಕೂ ಬೆಚ್ಚಿಬಿದ್ದಿದ್ದಾರೆ. ಪಾಪ ಎಂದು ಕರುಣೆ ತೋರಿಸಿದ ಜನರನ್ನೇ ವಂಚಿಸುತ್ತಿದ್ದ ಈ ನಕಲಿ ಭಿಕ್ಷುಕನ ಹೈಡ್ರಾಮಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ನೆಟ್ಟಗೆ ನಡೆಯಲು ಸಾಧ್ಯವಾಗದವನಂತೆ ಕುಂಟುತ್ತಾ, ದಾರಿಹೋಕರ ಮುಂದೆ ಭಿಕ್ಷೆಗೆ ಕೈಯೊಡ್ಡುವ ಮುಕೇಶ್, ಜನರ ಸಹಾನುಭೂತಿ ಗಳಿಸುವಲ್ಲಿ ಎತ್ತಿದ ಕೈಯಂತೆ ನೋಡಿ. ಆದರೆ, ಈತನ ಅಸಲಿ ಉದ್ದೇಶ ಕೇವಲ ಭಿಕ್ಷೆ ಬೇಡುವುದಷ್ಟೇ ಆಲ್ಲ. ಜನದಟ್ಟಣೆಯ ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ಸಾರ್ವಜನಿಕರ ಹತ್ತಿರಕ್ಕೆ ಬಂದು, ಅವರ ಗಮನ ಬೇರೆಡೆ ಸೆಳೆದು ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನ ಸಹ ಎಗರಿಸುತ್ತಿದ್ದ ಎಂಬ ಗಂಭೀರ ಆರೋಪ ಈತನ ಮೇಲಿದೆ.
ಸ್ಥಳೀಯರ ಸಮಯಪ್ರಜ್ಞೆಯಿಂದ ಭಿಕ್ಷುಕನ ಕಳ್ಳಾಟ ಬಯಲು
ಈತನ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿದ ಐಟಿಐ ಲೇಔಟ್ ಸುತ್ತಮುತ್ತಲಿನ ಸ್ಥಳೀಯ ಯುವಕರು, ಈತನನ್ನ ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನಗೆ ನಡೆಯಲು ಬರುವುದಿಲ್ಲ ಎಂದು ತನ್ನ ಹೈಡ್ರಾಮಾ ಮುಂದುವರಿಸಿದ್ದಾನೆ. ಆದರೆ, ಸ್ಥಳೀಯರು ಗಟ್ಟಿಯಾದ ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದಂತೆ, ಕ್ಷಣಾರ್ಧದಲ್ಲಿ ಕುಂಟುವುದನ್ನು ಬಿಟ್ಟು ನೆಟ್ಟಗೆ ನಿಂತಿದ್ದಾನೆ. ಈತನ ಕೈಕಾಲುಗಳು ಸಂಪೂರ್ಣವಾಗಿ ಆರೋಗ್ಯವಾಗಿ ಸರಿಯಾಗಿಯೇ ಇದೆ ಎಂಬುದು ಆಗ ಜನರಿಗೆ ಗೊತ್ತಾಗಿದೆ.
ಶೋಕಿ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಸಂಪಾದಿಸಲು ಈತ ದಿವ್ಯಾಂಗನಂತೆ ನಟಿಸುತ್ತಿದ್ದ ಎಂಬ ಸತ್ಯ ಹೊರಬಂದಿದೆ. ಸಿಕ್ಕಿಬೀಳುತ್ತದ್ದಂತೆ ಹೆದರಿದ ಮುಕೇಶ್, ಸ್ಥಳೀಯರ ಎದುರು ಕೈಮುಗಿದು ತನ್ನನ್ನು ಬಿಟ್ಟುಬಿಡುವಂತೆ ಕ್ಷಮೆಯಾಚಿಸಿದ್ದಾನೆ. ಆದರೆ, ಇಂತಹ ವಂಚಕರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿದ ಅಲ್ಲಿ ನೆರೆದ ಜನರು, ಆತನನ್ನ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸದ್ಯ ಈತನ ಕಳ್ಳಾಟದ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದಿನಕ್ಕೆ ₹5,000 ವರೆಗೆ ಭರ್ಜರಿ ಗಳಿಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಮುಕೇಶ್ ಕೇವಲ ಐಟಿಐ ಲೇಔಟ್ ಅಷ್ಟೇ ಅಲ್ಲದೆ, ನಗರದ ಪ್ರಮುಖ ಜಾಗಗಳನ್ನು ತನ್ನ ಟಾರ್ಗೆಟ್ ಮಾಡಿಕೊಂಡಿದ್ದ. ವಿಜಯನಗರ, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಬ್ರಿಗೇಡ್ ರೋಡ್ ಹಾಗೂ ರಿಚ್ಮಂಡ್ ಸರ್ಕಲ್‌ನಂತಹ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಈತ ನಿತ್ಯ ಕಾಣಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಬೆಚ್ಚಿಬೀಳಿಸುವ ಸಂಗತಿ ಏನೆಂದರೆ, ಈತ ಕೇವಲ ಭಿಕ್ಷಾಟನೆಯಿಂದಲೇ ಪ್ರತಿದಿನ ಬರೋಬ್ಬರಿ 4,000 ದಿಂದ 5,000 ರೂಪಾಯಿವರೆಗೆ ಹಣ ಸಂಪಾದಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ. ಇದರ ಜೊತೆಗೆ ಕದ್ದ ಮೊಬೈಲ್ ಫೋನ್‌ಗಳನ್ನ ಮಾರಾಟ ಮಾಡಿ ಹೆಚ್ಚುವರಿ ಹಣ ಗಳಿಸುತ್ತಿದ್ದನೆಂದು ಹೇಳಲಾಗುತ್ತಿದೆ.
ನಗರದಲ್ಲಿ ಇತ್ತೀಚೆಗೆ ಇಂತಹ ಭಿಕ್ಷಾಟನೆ ಮತ್ತು ವಂಚನೆ ಜಾಲಗಳು ಹೆಚ್ಚುತ್ತಿದ್ದು, ಅಮಾಯಕ ಜನರು ತಮ್ಮ ಕಷ್ಟದ ಹಣವನ್ನ ಇಂತಹ ವಂಚಕರಿಗೆ ನೀಡಿ ಮೋಸ ಹೋಗುತ್ತಿದ್ದಾರೆ. ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಗಮನಹರಿಸಿ, ಈ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದು ಇದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದ ಈತನ ಬಗ್ಗೆ ಸಮಗ್ರ ತನಿಖೆಯಾಗಬೇಕು. ಜೊತೆಗೆ, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.


Click it and Unblock the Notifications
