ಭಾರೀ ಮಳೆ... ಬೆಂಗಳೂರಲ್ಲಿ ಸೋಮವಾರ ಧಾರಾಕಾರ ಮಳೆ, ರಸ್ತೆಗಳು ಜಲಾವೃತ, 'ಯೆಲ್ಲೋ ಅಲರ್ಟ್'
ಬೆಂಗಳೂರು, ಜೂನ್ 02: ಕರ್ನಾಟಕ ರಾಜ್ಯಕ್ಕೆ ಇಂದಿನಿಂದ ಮುಂಗಾರು ಮಳೆ ಆರ್ಭಟಿಸುತ್ತಿದೆ. ರಾಜಧಾನಿ ಬೆಂಗಳೂರಿನಲ್ಲೇ ಮುಂಗಾರು ಆರಂಭದಲ್ಲೇ ಜೋರ ಅಬ್ಬರ ಶುರುವಿಟ್ಟುಕೊಂಡಿದೆ. ಭಾನುವಾರ ಸಂಜೆ ವಿವಿಧ ಬಡಾವಣೆಗಳಲ್ಲಿ ವ್ಯಾಪಕ ಮಳೆ ಸಿಂಚನವಾಗಿದೆ. ಇಂದು ಸುಮಾರು 40 ಕಡೆಗಳಲ್ಲಿ ಮರಗಳು ಮತ್ತು ಮರದ ಕೊಂಬೆಗಳು ಧರೆಗುರುಳಿವೆ.
ನಗರದಲ್ಲಿ ಕೆಲವು ದಿನಗಳಿಂದ ಮಳೆ ಕಡಿಮೆಯಾಗಿ ಮತ್ತೆ ಬಿಸಿಲಿನ ವಾತಾವರಣ ಮುಂದುವರಿದಿತ್ತು. ಅಷ್ಟರಲ್ಲಿ ನೆನ್ನೆ ಶನಿವಾರದಿಂದ ಉತ್ತಮ ಮಳೆ ಆಗುತ್ತಿದೆ. ನಗರದೆಲ್ಲಡೆ ತಂಪು ವಾತಾವರಣ ಕಂಡು ಬಂದಿದೆ. ಭಾನುವಾರ ಸಹ ಧಾರಾಕಾರ ಮಳೆ ಸುರಿಯಲು ಆರಂಭಿಸಿದೆ.

ಸಂಜೆ 4 ಗಂಟೆಗೆ ಹೊತ್ತಿಗೆ ಜೋರು ಮಳೆ ಆರಂಭವಾಗಿದ್ದರಿಂದ ರಜಾದಿನದ ಮಜಾ ಕಸಿದಿದೆ. ವಾಹನ ಸವಾರರಿಗೆ ತೊಂದರೆ ಆಗಿದೆ. ಸಂಜೆ 5 ಗಂಟೆ ಹೊತ್ತಿಗೆ ಕುಮಾರಸ್ವಾಮಿ ಬಡಾವಣೆ, ಪದ್ಮನಾಭನಗರ ಮತ್ತು ಉತ್ತರಹಳ್ಳಿ ಪ್ರದೇಶಗಳಲ್ಲಿ ಹೆಚ್ಚು ಮಳೆ ಆಗಿದೆ.
ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆ
ದೊಮ್ಮಲೂರು, ಕೋರಮಂಗಲ, ಮಡಿವಾಳ, ಡೈರಿ ವೃತ್ತ, ಲಾಲ್ ಬಾಗ್, ಜಯನಗರ, ಎಚ್‌ಎಎಲ್ ರಸ್ತೆ, ನಾಗವಾರ, ಬೊಮ್ಮಸಂದ್ರ, ಬೊಮ್ಮನಹಳ್ಳಿ, ಮಾರತ್ತಹಳ್ಳಿ, ಚಾಮರಾಜಪೇಟೆ, ಶಂಕರಮಠ, ಬಸವನಗುಡಿ ಸೇರಿದಂತೆ ಬಹುತೇಕ ಬೆಂಗಳೂರಿನಾದ್ಯಮತ ವಿವಿಧ ಕಡೆಗಳಲ್ಲಿ ಇಂದು ರಾತ್ರಿ ವ್ಯಾಪಕ ಮಳೆ ದಾಖಲಾಗಿದೆ.
ಇದರಿಂದಾಗಿ ರಸ್ತೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಹೊಳೆಯಂತೆ ಹರಿದಿದೆ. ಸಂಜೆ ನಂತರ ಜನ ಸಾಮಾನ್ಯರ ವಾಹನ ಸಂಚಾರಕ್ಕೆ ತೊಂದರೆ ಆಯಿತು. ಬೈಯಪ್ಪನಹಳ್ಳಿ, ಕೆ.ಆರ್.ಪುರಂ, ರಾಜಾಜಿನಗರ, ಜಯನಗರ, ಬಸವನಗುಡಿ, ಗಾಂಧಿ ಬಜಾರ್, ಕೆಆರ್ ವೃತ್ತ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರಮುಖ ರಸ್ತೆಗಳು ಮಳೆ ನೀರಿನಿಂದ ರಾತ್ರಿಯಿಡಿ ಜಲವೃತಗೊಂಡವು. ಕೆಲವೆಡೆ ಮರಗಳು, ಮರದ ಕೊಂಬೆಗಳು ಮುರಿದು ಬಿದ್ದವು.
ಕಾರು, ಮೆಟ್ರೋ ಹಳಿ ಮೇಲೆ ಮರದ ಕೊಂಬೆ: ಪರದಾಟ
ಒಂದು ಕಡೆ ಕಾರ್ ಮೇಲೆ ಮರ ಬಿದ್ದು ಯುವತಿ ಕಾರ್ ನಿಂದ ಹೊರಬರಲು ಪರದಾಡಿದ ಘಟನೆ ನಡೆಯಿತು. ಇದೇ ದಾರಿಯಲ್ಲಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಯಿತು. ಇದೇ ರೀತಿ ಸುಮಾರು ಕಡೆಗಳಲ್ಲಿ ಮರದ ಕೊಂಬೆ ಬಿದ್ದು ಸಮಸ್ಯೆ ಆಗಿದೆ. ನಮ್ಮ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಇಂದಿರಾನಗರ ಮತ್ತು ಎಂಜಿ ರಸ್ತೆ ವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು BMRCL ಮಾಹಿತಿ ನೀಡಿದೆ.
ವಾಹನ ಸವಾರರಿಗೆ ತೊಂದರೆ
ಇನ್ನೂ ಬನಶಂಕರಿ, ಬಸವನಗುಡಿ, ಅಂಜನಾಪುರ, ಕೆಂಗೇರಿ, ರಾಜರಾಜೇಶ್ವರಿ ನಗರ ತುಂತುರು ಮಳೆ ಬೀಳುವ ಪ್ರದೇಶಗಳಲ್ಲಿ ತುಂತುರು ಮಳೆ ದಾಖಲಾಗಿದೆ. ಕೆಲವು ರಸ್ತೆ ಸಿಗ್ನಲ್‌ಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು. ರಾಜಕಾಲುವೆ ಸೇರಿದಂತೆ ಒಳಚರಂಡಿಗಳು ಉಕ್ಕಿ ಹರಿದವು.
ಜೋರು ಗಾಳಿ ಸಹಿತ ಬಂದ ಮಳೆಗೆ ಜಯನಗರ, ಹೆಬ್ಬಾಳ, ವಿಜಯನಗರ, ಎಲೆಕ್ಟ್ರಾನಿಕ್ ಸೇರಿದಂತೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದವು. ಕೆಲವೆಡೆ ಸಂಚಾರ ದಟ್ಟಣೆಗೆ ಇವು ತೊಂದರೆ ಆಯಿತು.

ಬೆಂಗಳೂರಿಗೆ ಭಾರೀ ಮಳೆ: ಯೆಲ್ಲೋ ಅಲರ್ಟ್
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ ಒಂದು ವಾರ ಬೆಂಗಳೂರಿನಲ್ಲಿ ಮುಂಗಾರು ಮಳೆ ಆರ್ಭಟಿಸಲಿದೆ. ನಾಳೆ ಸೋಮವಾರ ಬೆಂಗಳೂರಿನಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ನಂತರ ಗುರುವಾರದಿಂದ ಎರಡು ದಿನ ಮತ್ತೆ ಮುಂಗಾರು ಚುರುಕುಗೊಳ್ಳಲಿದೆ.
ಕರ್ನಾಟಕದಾದ್ಯಂತ ಸದ್ಯ ಮುಂಗಾರು ಮಳೆ ಆವರಿಸುತ್ತಿದೆ. ಇನ್ನೂ ಹಲವು ದಿನಗಳ ಕಾಲ ದಕ್ಷಿಣ ಒಳನಾಡಿಗೆ ಮಳೆ ಸುರಿಯಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನ ಮಳೆಗೆ ಕಾಯುತ್ತಿದ್ದು, ಈ ವಾರ ಆ ಜಿಲ್ಲೆಗಲ್ಲೂ ಉತ್ತಮ ಮಳೆ ನಿರೀಕ್ಷೆ ಇದೆ.












Click it and Unblock the Notifications