Bengaluru Blast: ಜೆಪಿ ನಗರದಲ್ಲಿ ಅನುಮಾನಾಸ್ಪದ ವಸ್ತು ಸ್ಪೋಟ, ಇಬ್ಬರಿಗೆ ಗಾಯ: ಎಲ್ಲೆಡೆ ಆತಂಕ
ಬೆಂಗಳೂರು, ಆಗಸ್ಟ್ 14: ರಾಜಧಾನಿ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದ ಘಟನೆ ಮಾಸುವ ಮುನ್ನವೇ ನಗರದ ಜೆಪಿ ನಗರದ ಉಡುಪಿ ಉಪಹಾರ ಬಳಿ ಅನುಮಾನಾಸ್ಪದ ವಸ್ತು ಸ್ಪೋಟಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಪ್ರಮಾಣದ ಗಾಯಗಳು ಆಗಿವೆ. ಈ ಕುರಿತು ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೊಂಡಿದೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಹೊತ್ತಿಗೆ ಈ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಉತ್ತರ ಪ್ರದೇಶದ ಇಬ್ಬರು ಸಮೀರ್ ಮತ್ತು ಮೋಸಿನ್ ಎಂಬ ಯುವಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎನ್‌ಐಎ ಅಧಿಕಾರಿಗಳು ಸ್ಪೋಟವಾಗಿದ್ದೇನು?, ಅದಕ್ಕೆ ಕಾರಣವೇನು? ಇದರ ಹಿಂದೆ ಯಾರಿದ್ದಾರೆ ಎಂದೆಲ್ಲ ಪತ್ತೆಯಲ್ಲಿ ನಿರತರಾಗಿದ್ದಾರೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಹೋಟೆಲ್ ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಗೃಹೋಪಯೋಗಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಪ್ರಾಥಮಿಕವಾಗಿ ಇದು ಗ್ಯಾಸ್ ಕುಕ್ಕರ್‌ನಿಂದ ಸಂಭವಿಸಿದ ಸ್ಫೋಟ ಎಂದು ಊಹಿಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಬಂದ ಎನ್‌ಐಎ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಸುಟ್ಟ ತಂತಿ, ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಮೇಲ್ನೋಟಕ್ಕೆ ಇದು ಕುಕ್ಕರ್ ಬ್ಲಾಸ್ಟ್ ರೀತಿ ಕಂಡು ಬಂದರೂ ಸಹಿತ ಸ್ಪೋಟದ ತೀವ್ರತೆಯು ಹಲವು ಅನುಮಾನ ಹುಟ್ಟುಹಾಕಿದೆ. ಸದ್ಯ ಪ್ರಕರಣವು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಎನ್‌ಐಎ ತನಿಖಾಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ.
ಎನ್‌ಐಎ ಅಧಿಕಾರಿಗಳು ಸ್ಫೋಟದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಕುಕ್ಕರ್ ಸ್ಫೋಟಕ್ಕಿಂತ ಹೆಚ್ಚು ತೀವ್ರತೆ ಹೊಂದಿದಂತೆ ಕಾಣುತ್ತದೆ. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮೊದಲು ಈ ಘಟನೆ ನಡೆದಿದೆ ಎಂದು ಎನ್‌ಐಎ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪೊಲೀಸರ ಸಹಕಾರದಲ್ಲಿ ಎನ್‌ಐಎ ತನಿಖಾಧಿಕಾರಿಗಳ ತಂಡ ಸ್ಪೋಟದ ಪ್ರದೇಶವನ್ನು ಪರಿಶೀಲಿಸುತ್ತಿದೆ.
ಇತ್ತಿಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಹಾಡಹಗಲೇ ಬಾಂಬ್ ಬ್ಲಾಸ್ಟ್ ಮಾಡಲಾಗಿತ್ತು. ಇದರಿಂದ ಇಡಿ ಬೆಂಗಳೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ ದೇಶವ್ಯಾಪಿ ತನಿಖೆ ನಡೆಸಿ ಹಲವರನ್ನು ಬಂಧಿಸಲಾಯಿತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.












Click it and Unblock the Notifications