ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ವೇಗ: ಬ್ಲಾಕ್ ಸ್ಪಾಟ್ ತೆರವು, ಫುಟ್‌ಪಾತ್ ಸಮೀಕ್ಷೆ

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಮತ್ತಷ್ಟು ಸುಧಾರಿಸುವುದು, ರಸ್ತೆ, ಪಾದಚಾರಿ ಮಾರ್ಗ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿರುವ ಕಸ, ಮಣ್ಣು ಮತ್ತು ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ತೆರವುಗೊಳಿಸಬೇಕು. ಬ್ಲಾಕ್ ಸ್ಪಾಟ್ ತಾಣಗಳನ್ನು ಶಾಶ್ವತವಾಗಿ ತೆರವು ಸೇರಿದಂತೆ ಮಹತ್ವದ ಕ್ರಮ ಜರುಗಿಸಲು ಆಯುಕ್ತ ಡಿ.ಎಸ್‌ ರಮೇಶ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳ ಉತ್ತಮ ನಿರ್ವಹಣೆ ಬಲಪಡಿಸುವ ನಿಟ್ಟಿನಲ್ಲಿ ವಿಭಾಗಗಳು, ಉಪವಿಭಾಗಗಳು ಮತ್ತು ವಾರ್ಡ್‌ಗಳ ಮಟ್ಟದಲ್ಲಿ ತೀವ್ರ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಸಲುವಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್‌ ರಮೇಶ್‌ ಅಧಿಕಾರಿಗಳೊಂದಿಗೆ ಸಭೆ ಶನಿವಾರ ನಡೆಸಿದರು.

Bengaluru East City Corporation

ವಿಭಾಗವಾರು ತೀವ್ರ ಸ್ವಚ್ಛತಾ ಅಭಿಯಾನ

ನಗರ ಪಾಲಿಕೆಯ ಎಲ್ಲಾ ವಿಭಾಗಗಳು, ಉಪವಿಭಾಗಗಳು ಮತ್ತು ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ವಾರ್ಡ್ ಇಂಜಿನಿಯರ್‌ಗಳು, ಆರೋಗ್ಯಾಧಿಕಾರಿಗಳು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳು, ಪಾದಚಾರಿ ಮಾರ್ಗ, ಮಾರುಕಟ್ಟೆ, ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳು, ಉದ್ಯಾನವನಗಳು, ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಇತರೆ ಜನಸಂದಣಿ ಇರುವ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೈಗೊಳ್ಳಬೇಕು.

ಪ್ರತಿ ವಿಭಾಗದಲ್ಲಿ ಒಂದು ವಾರ್ಡ್‌ ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶನಿವಾರದಂದು ಕಡ್ಡಾಯವಾಗಿ ತೀವ್ರ ಸ್ವಚ್ಚತಾ ಅಭಿಯಾನ ಕೈಗೊಳ್ಳುವಂತೆ ಹಾಗೂ ಸ್ವಚ್ಛತಾ ಕಾರ್ಯಗಳು ಕೇವಲ ತಾತ್ಕಾಲಿಕವಾಗಿ ನಡೆಯದೆ, ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು ಸೂಕ್ತ ನಿರ್ವಹಣಾ ವ್ಯವಸ್ಥೆ ರೂಪಿಸಬೇಕೆಂದು ಹೇಳಿದರು.

ಸಾರ್ವಜನಿಕ ಸ್ಥಳಗಳು, ರಸ್ತೆ ಫುಟ್‌ಪಾತ್ ಸಮೀಕ್ಷೆ

ಪ್ರತಿ ವಾರ್ಡ್‌ನಲ್ಲಿ ಸ್ವಚ್ಛತೆ, ದುರಸ್ತಿ ಮತ್ತು ನಿರ್ವಹಣೆ ಅಗತ್ಯವಿರುವ ಸಾರ್ವಜನಿಕ ಸ್ಥಳ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ಥಳ ಪರಿಶೀಲನೆಯ ಮೂಲಕ ನಿಖರವಾಗಿ ಗುರುತಿಸಬೇಕು. ಬಳಿಕ ಪ್ರತಿಯೊಂದು ಸಾರ್ವಜನಿಕ ಸ್ಥಳ, ರಸ್ತೆ , ಪಾದಚಾರಿ ಮಾರ್ಗದ ಹೆಸರು, ನಿಖರ ಸ್ಥಳ, ಪ್ರಾರಂಭಿಕ ಮತ್ತು ಅಂತಿಮ ಸ್ಥಳದ ವಿವರ, ಒಟ್ಟು ಉದ್ದ, ಕೈಗೊಳ್ಳಬೇಕಾದ ಕೆಲಸದ ಸ್ವರೂಪ, ನಿಯೋಜಿಸಲ್ಪಟ್ಟ ಅಧಿಕಾರಿ ಹಾಗೂ ಅನುಷ್ಠಾನ ತಂಡದ ವಿವರಗಳನ್ನು ದಾಖಲಿಸಬೇಕು. ಪ್ರತಿ ಕಾಮಗಾರಿಯ ಪ್ರಾರಂಭದ ದಿನಾಂಕ ಮತ್ತು ಪೂರ್ಣಗೊಳಿಸುವ ಗುರಿ ದಿನಾಂಕ ನಿಗದಿಪಡಿಸಿ, ಸ್ಥಳವಾರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಈ ಕ್ರಿಯಾ ಯೋಜನೆಯನ್ನು ಸಂಬಂಧಪಟ್ಟ ವಿಭಾಗದ ಮೇಲಾಧಿಕಾರಿಗಳಿಗೆ ಸಲ್ಲಿಸಿ, ಅದರ ಅನುಷ್ಠಾನದ ಪ್ರಗತಿ ನಿಯಮಿತವಾಗಿ ಪರಿಶೀಲಿಸಬೇಕು.

ಚರಂಡಿಗಳ, ಕಾಲುವೆಗಳಲ್ಲಿನ ಹೂಳು, ತ್ಯಾಜ್ಯ ವಿಲೇವಾರಿ ಮಾಡಿ

ರಸ್ತೆ ಬದಿಯ ಚರಂಡಿಗಳು, ಮಳೆನೀರು ಕಾಲುವೆಗಳು ಹಾಗೂ ಸಂಪರ್ಕ ಚರಂಡಿಗಳಲ್ಲಿ ಸಂಗ್ರಹವಾಗಿರುವ ಹೂಳು, ಕಸ, ಕಳೆ ಮತ್ತು ತ್ಯಾಜ್ಯವನ್ನು ಗುರುತಿಸಿ ತೆರವುಗೊಳಿಸಬೇಕು. ತೆರವುಗೊಳಿಸಿದ ಹೂಳು ಮತ್ತು ತ್ಯಾಜ್ಯವನ್ನು ರಸ್ತೆ ಅಥವಾ ಪಾದಚಾರಿ ಮಾರ್ಗದ ಮೇಲೆ ಬಿಡದಂತೆ ಕೂಡಲೇ ಸೂಕ್ತ ವಾಹನಗಳ ಮೂಲಕ ಸಾಗಿಸಿ, ನಿಯಮಾನುಸಾರ ವಿಲೇವಾರಿ ಮಾಡಬೇಕು. ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಸಾಮಾನ್ಯ ಕಸದೊಂದಿಗೆ ಮಿಶ್ರಣ ಮಾಡದೆ, ಅನ್ವಯಿಸುವ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು.

ಪುನರಾವರ್ತಿತ ಕಸದ ಬ್ಲಾಕ್ ಸ್ಪಾಟ್ ನಿರ್ಮೂಲನೆ

ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರಸ್ತುತ ಕಸದ ಕಪ್ಪುಚುಕ್ಕೆಗಳು ಹಾಗೂ ಪದೇಪದೇ ತ್ಯಾಜ್ಯ ಸಂಗ್ರಹವಾಗುವ ಸ್ಥಳಗಳನ್ನು ವಾರ್ಡ್‌ವಾರು ಗುರುತಿಸಿ ಪಟ್ಟಿ ಸಿದ್ಧಪಡಿಸಬೇಕು.ಈ ಹಿಂದೆ ಹಲವು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರೂ ಮತ್ತೆ ಕಸ ಸಂಗ್ರಹವಾಗುತ್ತಿರುವ ಸ್ಥಳಗಳಿಗೆ ವಿಶೇಷ ಆದ್ಯತೆ ನೀಡಿ, ಪ್ರತಿಯೊಂದು ಕಪ್ಪುಚುಕ್ಕೆ ತ್ಯಾಜ್ಯ ಸಂಗ್ರಹಣೆ ಸ್ಥಳದ ಹೆಸರು, ವಾರ್ಡ್ ವಿವರ, ತ್ಯಾಜ್ಯದ ಸ್ವರೂಪ ಮತ್ತು ಅಂದಾಜು ಪ್ರಮಾಣ, ಸ್ವಚ್ಛತಾ ಕಾರ್ಯಕ್ಕೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದರು.

ಸ್ವಚ್ಛತಾ ಕಾರ್ಯ ಪೂರ್ಣಗೊಂಡ ದಿನಾಂಕದೊಂದಿಗೆ, ಕಾರ್ಯಕ್ಕೂ ಮುನ್ನ ಮತ್ತು ನಂತರದ ಛಾಯಾಚಿತ್ರಗಳನ್ನು ಸಂಗ್ರಹಿಸಬೇಕು. ಕಸದ ಕಪ್ಪು ಚುಕ್ಕೆಗಳು ಮತ್ತೆ ಮರುಕಳಿಸದಂತೆ ಕೈಗೊಂಡ ಕ್ರಮಗಳನ್ನೂ ದಾಖಲಿಸಬೇಕು. ಕಪ್ಪುಚುಕ್ಕೆ ನಿರ್ಮೂಲನೆಗೊಂಡ ನಂತರವೂ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ನಿಯಮಿತ ಮೇಲ್ವಿಚಾರಣೆ ನಡೆಸಬೇಕು. ಅಗತ್ಯವಿರುವ ಕಡೆಗಳಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧ ಅನ್ವಯಿಸುವ ನಿಯಮಗಳಂತೆ ಕ್ರಮವಹಿಸಬೇಕು.

ಬೀದಿ ದೀಪಗಳ ದುರಸ್ತಿ ಕೂಡಲೇ ಕೈಗೊಳ್ಳಿ

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸದ ಬೀದಿ ದೀಪಗಳು, ಹಾನಿಗೊಳಗಾದ ದೀಪಗಳು ಹಾಗೂ ದುರಸ್ತಿ ಅಗತ್ಯವಿರುವುದನ್ನು ಗುರುತಿಸಿ ವಾರ್ಡ್‌ವಾರು ಪಟ್ಟಿ ಸಿದ್ಧಪಡಿಸಬೇಕು. ಸಂಬಂಧಪಟ್ಟ ಇಂಜಿನಿಯರಿಂಗ್ ಮತ್ತು ವಿದ್ಯುತ್ ವಿಭಾಗದ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ, ಬೀದಿ ದೀಪಗಳ ದುರಸ್ತಿ ಅಥವಾ ಬದಲಾವಣೆ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಬಾಕಿ ಇರುವ ದೂರುಗಳು, ದುರಸ್ತಿ ಕಾರ್ಯಗಳ ಸ್ಥಿತಿ ಹಾಗೂ ಇತರೆ ಇಲಾಖೆಗಳ ಸಹಕಾರ ಅಗತ್ಯವಿರುವ ಪ್ರಕರಣಗಳ ಕುರಿತು ಪ್ರತ್ಯೇಕ ಪ್ರಗತಿ ದಾಖಲೆಯನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ, ಸೌಂದರ್ಯೀಕರಣ

ನಗರ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳು, ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳು, ಆಟದ ಮೈದಾನಗಳು, ಮಾರುಕಟ್ಟೆಗಳು, ಸಾರ್ವಜನಿಕ ಶೌಚಾಲಯಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳ ಸ್ಥಿತಿಯನ್ನು ಪರಿಶೀಲಿಸಬೇಕು. ಸ್ವಚ್ಛತೆ, ದುರಸ್ತಿ, ಮೂಲಸೌಕರ್ಯ ಸುಧಾರಣೆ ಮತ್ತು ಸೌಂದರ್ಯೀಕರಣದ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ, ಸೂಕ್ತ ಪ್ರಸ್ತಾವನೆಗಳನ್ನು ಸಿದ್ಧಪಡಿಸಬೇಕು.

ಪ್ರಸ್ತಾವನೆಗಳನ್ನು ರೂಪಿಸುವಾಗ ತಾಂತ್ರಿಕ ಅಗತ್ಯತೆ, ಅಂದಾಜು ವೆಚ್ಚ, ಲಭ್ಯವಿರುವ ಅನುದಾನ ಹಾಗೂ ಸಂಬಂಧಪಟ್ಟ ಯೋಜನೆಗಳ ಮಾರ್ಗಸೂಚಿಗಳನ್ನು ಪರಿಗಣಿಸಬೇಕು. ಕಾಮಗಾರಿಗಳನ್ನು ಪ್ರಸ್ತಾಪಿಸುವಾಗಲೂ ತಾಂತ್ರಿಕವಾಗಿ ಸೂಕ್ತವಾದ ಮತ್ತು ಸಾರ್ವಜನಿಕರಿಗೆ ದೀರ್ಘಕಾಲಿಕ ಪ್ರಯೋಜನ ನೀಡುವ ಕಾಮಗಾರಿಗಳಿಗೆ ಆದ್ಯತೆ ನೀಡುವುದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯವಿರುವ ಮೂಲಸೌಕರ್ಯಗಳನ್ನು ಸುಧಾರಿಸುವ ಮೂಲಕ ಜನರಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಗುತ್ತಿಗೆದಾರರು, ಸಂಬಂಧಪಟ್ಟ ಇಲಾಖೆಗಳ ಜತೆ ಸಮನ್ವಯ ಸಾಧಿಸಿ

ಸ್ವಚ್ಛತೆ, ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಗೆ ಗುತ್ತಿಗೆದಾರರು ಅಥವಾ ಸೇವಾ ಪೂರೈಕೆದಾರರನ್ನು ನಿಯೋಜಿಸಿರುವ ಸ್ಥಳಗಳಲ್ಲಿ ಅವರ ಕಾರ್ಯಕ್ಷಮತೆ ಹಾಗೂ ಬಾಕಿ ಉಳಿದಿರುವ ಕೆಲಸಗಳ ಸ್ಥಿತಿಯನ್ನು ಪರಿಶೀಲಿಸಬೇಕು. ಈಗಾಗಲೇ ಕಾರ್ಯಾದೇಶ ನೀಡಿರುವ ಕಾಮಗಾರಿಗಳನ್ನು ಅನುಮೋದಿತ ಷರತ್ತುಗಳು ಮತ್ತು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಎಂದು ತಿಳಿಸಿದರು.

ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಕಂಡು ಬಂದಲ್ಲಿ ಅದರ ಕಾರಣಗಳನ್ನು ಪರಿಶೀಲಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇತರೆ ಇಲಾಖೆಗಳ ವ್ಯಾಪ್ತಿಗೆ ಬರುವ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಅಗತ್ಯ ಸಮನ್ವಯ ಸಾಧಿಸುವ ಮೂಲಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಛಾಯಾಚಿತ್ರ ದಾಖಲೆ, ಪ್ರಗತಿ ವರದಿ ಕಡ್ಡಾಯ

ಎಲ್ಲಾ ಸ್ವಚ್ಛತಾ, ದುರಸ್ತಿ ಹಾಗೂ ಸುಧಾರಣಾ ಕಾರ್ಯಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಆರಂಭಕ್ಕೂ ಮುನ್ನ ಮತ್ತು ಪೂರ್ಣಗೊಂಡ ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಸಾಧ್ಯವಾದಷ್ಟು ಒಂದೇ ಸ್ಥಳದಿಂದ ಮತ್ತು ಒಂದೇ ದೃಷ್ಟಿಕೋನದಲ್ಲಿ ಛಾಯಾಚಿತ್ರಗಳನ್ನು ತೆಗೆದು, ಕಾಮಗಾರಿಯ ನೈಜ ಪ್ರಗತಿಯನ್ನು ಹೋಲಿಕೆ ಮಾಡಲು ಅನುಕೂಲ ಕಲ್ಪಿಸಬೇಕು. ಪ್ರತಿ ವಿಭಾಗವು ಸ್ಥಳವಾರು ವಿವರಗಳನ್ನು ಒಳಗೊಂಡ ಸಮಗ್ರ ಸ್ಪ್ರೆಡ್‌ಶೀಟ್ ನಿರ್ವಹಿಸಬೇಕು.

ಅದರಲ್ಲಿ ಪೂರ್ಣಗೊಂಡ ಕಾಮಗಾರಿಗಳು, ಪ್ರಗತಿಯಲ್ಲಿರುವ ಕಾಮಗಾರಿಗಳು ಮತ್ತು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ಕಾಮಗಾರಿಯ ಪ್ರಮಾಣ, ಜವಾಬ್ದಾರಿಯುತ ಅಧಿಕಾರಿ, ಗುರಿ ದಿನಾಂಕ ಹಾಗೂ ಪ್ರಸ್ತುತ ಸ್ಥಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+