Watch Video: ಬೆಳೆದು ದೊಡ್ಡ ವೈದ್ಯನಾದ್ರೂ ಮರೆಯಲಿಲ್ಲ ಬಾಲ್ಯದ ಮಮತೆ: 29 ವರ್ಷಗಳ ಬಳಿಕ ಸಿಕ್ಕಿದ ಜಾನಕಿ ಆಂಟಿ
ಬಾಲ್ಯದ ನೆನಪುಗಳು ಸದಾ ಹಸಿರಾಗಿರುತ್ತವೆ. ಚಿಕ್ಕವರಿರುವಾಗ ನಮಗೆ ಯಾರು ಪ್ರೀತಿ,ಕಾಳಜಿ ತೋರುತ್ತಾರೆಯೋ ಅವರನ್ನೇ ಮಕ್ಕಳು ನಮ್ಮವರು ಅಂದುಕೊಳ್ಳುತ್ತಾರೆ. ಅದು ತಂದೆ ತಾಯಿಯೇ ಆಗಬೇಕೆಂದಿಲ್ಲ. ಅದೆಷ್ಟೋ ಮಕ್ಕಳು ದಾದಿಯರ ಆರೈಕೆಯಲ್ಲಿ ಬೆಳೆಯುತ್ತಾರೆ. ಹಾಗಾಗಿ ಆ ದಾದಿಯರ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುತ್ತಾರೆ. ತಂದೆ, ತಾಯಿ ಕೆಲಸ ಎಂದು ಮನೆಯಿಂದ ಹೊರ ಹೋಗುವಾಗ ಆ ಮಗುವಿನ ಲಾಲನೆ, ಪಾಲನೆ ಎಲ್ಲವೂ ದಾದಿಯದ್ದೇ ಆಗಿರುತ್ತದೆ. ಹಾಗಾಗಿ ಮಗುವಿಗೂ ದಾದಿ ಅಂದರೆ ತನ್ನ ಸ್ವಂತದವರೇ ಎನ್ನುವ ಭಾವನೆ ಮೂಡುತ್ತದೆ. ದೊಡ್ಡವರಾಗುತ್ತಿದ್ದ ಹಾಗೆ ದಾದಿ ಬೇರೆ ಹೋದರೂ ಮಗಿವಿನ ಮನದ ಒಂದು ಮೂಲೆಯಲ್ಲಿ ಅವರಿಗಾಗಿ ಒಂದು ಜಾಗ ಇದ್ದೇ ಇರುತ್ತದೆ. ಮುಂದೆ ಯಾವತ್ತೋ ಒಂದು ದಿನ ಇಬ್ಬರೂ ಭೇಟಿಯಾಗುವ ಸ್ಥಿತಿ ಎದುರಾದರೆ ಆ ನಿಷ್ಕಲ್ಮಷ ಪ್ರೀತಿ ಎದ್ದು ಕಾಣಿಸದೇ ಇರದು.
ಮೂರು ದಶಕಗಳ ಬಳಿಕ ದಾದಿಯ ಭೇಟಿ
ಇದೀಗ ಇಂಥದ್ದೇ ಒಂದು ಘಟನೆ ನಡೆದಿದೆ. ಬೆಂಗಳೂರಿನ ವೈದ್ಯರೊಬ್ಬರು ತಮ್ಮ ಬಾಲ್ಯದ ದಾದಿಯನ್ನು ನೆನೆಸಿಕೊಂಡಿದ್ದಾರೆ. ಈ ವೈದ್ಯರ ಹೆಸರು ಡಾ.ರೆನಾಯ್ ಫಿಲಿಪ್. ಇವರು ತಮ್ಮ ಬಾಲ್ಯವನ್ನು ಕಳೆದದ್ದು ಬಹ್ರೇನ್‌ನಲ್ಲಿ. ಅಲ್ಲಿ ಇವರನ್ನು ದಾದಿಯೊಬ್ಬರು ಆರೈಕೆ ಮಾಡ್ತಾ ಇದ್ದರು. ಸುಮಾರು ಹದಿನೈದು ವರ್ಷಗಳ ಕಾಲ ಫಿಲಿಪ್ ಅವರನ್ನು ನೋಡಿಕೊಂಡಿದ್ದಾರೆ.

ಫಿಲಿಪ್ ದೊಡ್ಡವರಾಗುತ್ತಿದ ಹಾಗೆ ದಾದಿ ತನ್ನೂರಿಗೆ ವಾಪಾಸಾಗಿದ್ದಾರೆ. ಇದೀಗ ಸುಮಾರು ಮೂವತ್ತು ವರ್ಷಗಳ ಬಳಿಕ ಫಿಲಿಪ್ ಮತ್ತೆ ತನ್ನ ಬಾಲ್ಯದ ದಾದಿಯನ್ನು ಭೇಟಿಯಾಗಿದ್ದಾರೆ. ಇಬ್ಬರು ಮತ್ತೆ ಒಂದಾದ ಭಾವನಾತ್ಮಕ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸುಮಾರು ಮೂರು ದಶಕಗಳ ನಂತರ ನಡೆದ ಈ ಭೇಟಿ ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು. ಈಗ ಆ ದಾದಿಗೆ 93 ವರ್ಷ. ದಾದಿಯನ್ನು ನೋಡುತ್ತಿದ್ದ ಹಾಗೆ ಈ ಡಾಕ್ಟರ್ ಅವರನ್ನು ಬಿಗಿದು ಅಪ್ಪಿಕೊಂಡಿದ್ದಾರೆ.
ಜಾನಕಿ ಆಂಟಿಯೊಂದಿಗಿನ ವಿಡಿಯೋ
ಇವರು ತನ್ನ ಬಾಲ್ಯದ ನೆನಪುಗಳನ್ನು ಮತ್ತು ತನ್ನ ದಾದಿ ಜಾನಕಿ ಆಂಟಿಯೊಂದಿಗಿನ ನಿಕಟ ಬಾಂಧವ್ಯವನ್ನು ನೆನಪಿಸಿಕೊಂಡು ವಿಡಿಯೋವೊಂದ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊದ ಆರಂಭದಲ್ಲಿ, ಫಿಲಿಪ್ ಬಹ್ರೇನ್‌ನಲ್ಲಿನ ತನ್ನ ಬಾಲ್ಯದ ಹಳೆಯ ಫೋಟೋಗಳನ್ನು ವೀಕ್ಷಕರಿಗೆ ತೋರಿಸುತ್ತಾನೆ. ಅವುಗಳಲ್ಲಿ ಒಂದು ಫೋಟೋವನ್ನು ತೋರಿಸುತ್ತಾ, ಇಲ್ಲಿರುವ ವ್ಯಕ್ತಿ ಬಹ್ರೇನ್‌ನಲ್ಲಿ ನಮ್ಮ ಜೊತೆಗಿದ್ದ ದಾದಿ ಎಂದು ಹೇಳುತ್ತಾನೆ. ದಾದಿ ಜಾನಕಿ ತೋರಿಸುತ್ತಿದ್ದ ಪ್ರೀತಿ ಕಾಳಜಿ ಬಗ್ಗೆ ಮಾತನಾಡಿದ್ದಾರೆ. ಸುಮಾರು ಹದಿನೈದು ವರ್ಷಗಳ ಕಾಲ ಜೊತೆಗಿದ್ದು ಸಲಹಿದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಸುಮಾರು ಇಪ್ಪತ್ತೊಂಭತ್ತು ವರ್ಷಗಳ ನಂತರ ಮತ್ತೆ ಜಾನಕಿ ಆಂಟಿಯನ್ನು ನೋಡಲು ಹೊರಟಿರುವುದು ಅವರಿಗೆ ಖುಷಿ ತಂದಿದೆ. ಜಾನಕಿ ಆಂಟಿ ಮನೆ ತಲುಪುತ್ತಿದ್ದ ಹಾಗೆಯೇ ಓಯ್ ಜಾನಕಿ ಆಂಟಿ ಎಂದು ಕರೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ತಕ್ಷಣವೇ ಜಾನಕಿ ಅವರು ತನ್ನೆಲ್ಲಾ ಕೆಲಸ ಬಿಟ್ಟು ಹೊರಗೆ ಓಡಿ ಬರುತ್ತಾರೆ.
ಹೃದಯಸ್ಪರ್ಶಿ ಪುನರ್ಮಿಲನಕ್ಕೆ ಭಾರೀ ಪ್ರತಿಕ್ರಿಯೆ
ಈ ಭಾವನಾತ್ಮಕ ವಿಡಿಯೋ ನೋಡಿದ ಅನೇಕ ಮಂದಿ ಬೇರೆ ಬೇರೆ ರೀತಿಯಲ್ಕಿ ಪ್ರತಿಕ್ರಿಯಿಸಿದ್ದಾರೆ. ದಶಕಗಳ ನಂತೆ ಇಬ್ಬರು ಮತ್ತೆ ಭೇಟಿಯಾಗಿರುವುದರ ಬಗ್ಗೆ ಸಂತೋ ವ್ಯಕ್ತಪಡಿಸಿದ್ದಾರೆ. ಆ ಅಪ್ಪುಗೆ ಎಲ್ಲವನ್ನೂ ಹೇಳುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.ಮತ್ತೊಬ್ಬರು ಜಾನಕಿ ಆಂಟಿ ಇನ್ನೂ ತನ್ನ ಪುಟ್ಟ ಮಗುವನ್ನೇ ನೆನಪಿಸಿಕೊಳ್ಳುತ್ತಿದ್ದಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಈ ವಿಡಿಯೋ ನಿಜವಾಗಿಯೂ ನನ್ನನ್ನು ಭಾವುಕನನ್ನಾಗಿ ಮಾಡಿತು ಎಂದು ಹೇಳಿದ್ದಾರೆ.


Click it and Unblock the Notifications
