ವೈರಲ್ ವಿಡಿಯೋ : ಊಟದ ಬಿಲ್ ಕೇಳಿದ್ದಕ್ಕೆ ಡಾಬಾಗೆ ಬೆಂಕಿ ಇಟ್ಟ ಕಿರಾತರು!
ಬೆಂಗಳೂರು, ಡಿ. 27: ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರುವ ಕಿರಾತಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ. ಬೆಂಗಳೂರಿನ ಕಸ್ತೂರಿಬಾ ನಗರದ ಹೋಟೆಲ್ ನಲ್ಲಿ ಬೆಂಕಿ ಅವಘಡ, ಯಾವುದೇ ಪ್ರಾಣಾಪಾಯವಿಲ್ಲ. ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು. ಬೆಂಗಳೂರು ಅಪರಾಧ ಲೋಕದ ಚಿತ್ರಣವಿದು.
ಡಾಬಾಗೆ ಬೆಂಕಿ ಇಟ್ಟ ಪುಂಡರು:
ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್ ಹಾಕಿ ಸುಟ್ಟು ಪುಂಡುತನ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇದರಲ್ಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಬೆಂಕಿ ಹೊತ್ತಿಕೊಂಡು ಯುವಕ ಮನೋಜ್ ನರಳಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಲಕೆರೆ ಸಮೀಪದ ಯು ಟರ್ನ್ ಡಾಬಾದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ಬರು ಅಪರಿಚಿತರು ಯು ಟರ್ನ್ ಡಾಬಾಗೆ ಹೋಗಿ ಊಟ ಮಾಡಿದ್ದಾರೆ. ಭಾನುವಾರ ರಾತ್ರಿ ಹತ್ತು ಗಂಟೆಗೆ ಡಾಬಾ ಕ್ಲೋಸ್ ಹಿನ್ನೆಲೆಯಲ್ಲಿ ಬಿಲ್ ಪಾವತಿ ಮಾಡು ಎಂದು ಸಪ್ಲೇಯರ್ ಕೇಳಿದ್ದಾರೆ. ಬಿಲ್ ಕೇಳಿದಕ್ಕೆ ಇಬ್ಬರು ಅಪರಿಚಿತರು ಅವಾಜ್ ಬಿಟ್ಟಿದ್ದಾರೆ. ಬಿಲ್ ಕೊಡದೇ ತೆರಳಿದ್ದ ಆರೋಪಿಗಳಿಬ್ಬರು ಮಧ್ಯರಾತ್ರಿ 12.30 ರ ಸುಮಾರಿಗೆ ವಾಪಸು ಬಂದಿದ್ದಾರೆ. ಡಾಬಾ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಡಾಬಾದಲ್ಲಿ ಊಟ ಮಾಡುತ್ತಿದ್ದ ಮನೋಜ್ ಎಂಬಾತ ಶಾರ್ಟ್ ಸರ್ಕೂಟ್ ಆಗಿರುವ ಬಗ್ಗೆ ಶಂಕಿಸಿ ಬಾಗಿಲು ತೆಗೆಯುವಂತೆ ಕಿರಿಚಾಡಿದ್ದಾರೆ. ಇದೇ ವೇಳೆ ಆರೋಪಿಗಳು ಹೆಚ್ಚುವರಿ ಪೆಟ್ರೋಲ್ ಸುರಿದಿದ್ದು, ಜೀವ ರಕ್ಷಿಸಿಕೊಳ್ಳುವ ಸಲುವಾಗಿ ಮನೋಜ್ ಹೊರ ಬರಲು ಯತ್ನಿಸಿದ್ದು, ಸುಟ್ಟ ಗಾಯಗಳಿಂದಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಸಂಬಂಧ ಕೇಸು ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ವ್ಯಕ್ತಿ ಸಾವು:
ಕಾರು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ಸಾವನ್ನಪ್ಪಿರುವ ಘಟನೆ ನಾಗರಬಾವಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ 10.50 ರ ಸುಮಾರಿಗೆ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಬೇನಂ ಬರ್ಮನ್ ಮೃತಪಟ್ಟವ. ನಾಯಂಡಹಳ್ಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬೇನಂ, ಕಾಮಾಕಷಿಪಾಳ್ಯದ ಸಂಬಂಧಿಕರ ಮನೆಗೆ ಹೋಗಿದ್ದ. ಲ್ಲಿಂದ ವಾಪಸು ಬರುವಾಗ ಈ ಅವಘಡ ಸಂಭವಿಸಿದ್ದು, ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬ್ಯಾಟರಾಯನಪುರ ಸಂಚಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಹಲಸೂರು ಸಮೀಪದ ಕಸ್ತೂರಿ ಬಾ ನಗರದಲ್ಲಿರುವ ಗ್ರಾಂಡ್ ಸೀಸನ್ ಹೋಟೆಲ್ ನಲ್ಲಿ ಈ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಬೈಯಪ್ಪನಹಳ್ಳಿ ಪೊಲೀಸರು ದಾವಿಸಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಬೈಯಪ್ಪನಹಳ್ಳಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.












Click it and Unblock the Notifications