Bengaluru Crime News: ಅಜ್ಜಿಗೆ ಬುದ್ಧಿ ಕಲಿಸಲು ಮನೆಯಲ್ಲೇ ಚಿನ್ನ ಕದ್ದ ಮಕ್ಕಳು!
ಬೆಂಗಳೂರು ಜೂನ್ 12: ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಮಕ್ಕಳು ಕಳ್ಳತನ ಮಾಡಿದ ಪ್ರಕರಣವೊಂದು ದಾಖಲಾಗಿದೆ. ಪೋಷಕರಿಗೆ ಬುದ್ದಿ ಕಲಿಸಲು ಹೋಗಿ ಮನೆ ಮಕ್ಕಳೇ ಕಳ್ಳತನ ಮಾಡಿದ್ದಾರೆ.
ಈ ಮಕ್ಕಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮಕ್ಕಳನ್ನು ಬಾಲನ್ಯಾಯ ಮಂಡಳಿ ಎದುರು ಹಾಜರು ಪಡಿಸಲಾಗಿದೆ. ಅಲ್ಲಿ ನ್ಯಾಯಾಧೀಶರು ಮೂವರು ಮಕ್ಕಳನ್ನು ಬಾಲಮಂದಿರಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಮನೊಯೊಂದರಲ್ಲಿ ಕಳ್ಳತನ ನಡೆದ ಆರೋಪ ಕೇಳಿ ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಯ ಸುತ್ತಮುತ್ತಲ ಕಟ್ಟಡಗಳ ಸುಮಾರು 60ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು.
ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಮಕ್ಕಳನ್ನು ಬಂಧಿಸಿದ್ದಾರೆ. ಈ ಮಕ್ಕಳ ಬಳಿ 24.50 ಲಕ್ಷ ರೂಪಾಯಿ ಮೌಲ್ಯದ 380 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಮಕ್ಕಳು ಕಳ್ಳತನ ಮಾಡಲು ಕಾರಣವೇನು?
ಮನೆಯಲ್ಲಿ ಮಕ್ಕಳ ಕಳ್ಳತನ ಮಾಡಲು ಕಾರಣ ಇದೆ. ಅದೇನೆಂದರೆ ಕಳ್ಳತನದಲ್ಲಿ ಭಾಗಿಯಾದ ಮೂವರು ಮಕ್ಕಳ ಪೈಕಿ ಒಬ್ಬ ಹುಡುಗಿ ಕಳ್ಳತನವಾದ ಮನೆ ಮಗಳು. ಕಳ್ಳತನ ಮಾಡಿದ ಮೂವರು ಮಕ್ಕಳು ಸ್ನೇಹಿತರು. ಬಾಲಕಿಗೆ ಮನೆಯಲ್ಲಿ ಸದಾ ತನ್ನ ಅಜ್ಜಿ ಬೈಯ್ಯುತ್ತಿದ್ದರು.
ಯಾಕೆಂದರೆ ಬಾಲಕಿ ಒಮ್ಮೆ ಮನೆಯಲ್ಲಿ ಅಜ್ಜಿಯ ಎಟಿಎಂ ಕಾರ್ಡ್ ಕದ್ದು ಹಣವನ್ನು ಡ್ರಾ ಮಾಡಿಕೊಂಡಿದ್ದಳು. ಇದರಿಂದ ಕೋಪಗೊಂಡ ಅಜ್ಜಿ ಬಾಲಕಿಗೆ ಸದಾ ನಿಂದಿಸುತ್ತಿದ್ದರು. ಇದರಿಂದ ಬೇಸರಗೊಂಡ ಬಾಲಕಿ ಈ ವಿಚಾರವನ್ನು ತನ್ನ ಸ್ನೇಹಿತರ ಮುಂದೆ ಹೇಳಿಕೊಂಡಿದ್ದಾಳೆ.
ಇದರಿಂದ ಇಬ್ಬರು ಬಾಲಕರು ನಿಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಮಾರಾಟ ಮಾಡೋಣ. ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಮಾತನಾಡಿಕೊಂಡಿದ್ದಾರೆ. ಬಳಿಕ ಮೂವರ ಪೈಕಿ ಒಬ್ಬನಿಗೆ ಬುರ್ಖಾ ಹಾಕಿಸಿ ಮನೆಯ ಬೀಗ ಇರಿಸುವ ಜಾಗವನ್ನು ತಿಳಿಸಿದ್ದಾಳೆ. ಬಳಿಕ ಆ ಬಾಲಕ ಬುರ್ಕಾ ಧರಿಸಿ ಮನೆಗೆ ನುಗ್ಗಿ ಬೀಗ ತೆಗೆದುಕೊಂಡು ಬ್ಯೂರೋ ಓಪನ್ ಮಾಡಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ.
ನನ್ನ ತಂದೆ ಕುಡುಕ ಎಂದು ಶಿಕ್ಷಕಿಗೆ ಸುಳ್ಳು ಹೇಳಿದ್ದ ಬಾಲಕ
ಬಾಲಕ ತಾನು ಕದ್ದ ಚಿನ್ನಾಭರಣಗಳನ್ನು ತಾನು ಟ್ಯೂಷನ್‌ಗೆ ಹೋಗುತ್ತಿದ್ದ ಶಿಕ್ಷಕರಿಗೆ ನೀಡಿದ್ದಾನೆ. ಚಿನ್ನಾಭರಣ ನೀಡುವಾಗ ನಮ್ಮ ತಂದೆ ಕುಡುಕ. ಕಾಲೇಜಿನ ಫೀಜು ಕಟ್ಟಲು ಹಣ ಇಲ್ಲ. ಹೀಗಾಗಿ ಈ ಚಿನ್ನಾಭರಣ ಮಾರಾಟ ಮಾಡಿಸಿಕೊಡುವಂತೆ ಕೇಳಿದ್ದಾನೆ. ಆಗ ಶಿಕ್ಷಕರು ಬಾಲಕ ಹೇಳಿದ್ದನ್ನು ನಂಬಿ ಚಿನ್ನಾಭರಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಉಳಿದ ಚಿನ್ನಾಭರಣಗಳನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದಾನೆ. ಮನೆಯಲ್ಲಿ ಕಳುವು ಸಂಬಂಧ ದೂರಿನ ಮೇರೆಗೆ ತನಿಖೆ ಮಾಡಿದಾಗ ಈ ಮೂವರು ಮಕ್ಕಳು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಅನುಮಾನ ಬಂದು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಬಾಲಕ ಶಿಕ್ಷಕರು ಹಾಗೂ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ.












Click it and Unblock the Notifications