ಬೆಂಗಳೂರು : ಒವೈಸಿ ಸಮಾವೇಶಕ್ಕೆ ಪೊಲೀಸರು ಒಪ್ಪಿಗೆ ನೀಡಿಲ್ಲ
ಬೆಂಗಳೂರು, ಫೆ.2 : ಅಸಾವುದ್ದೀನ್ ಒವೈಸಿ ನೇತೃತ್ವದ ಎಂಐಎಂ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶಕ್ಕೆ ಅನುಮತಿ ನೀಡಲು ಬೆಂಗಳೂರು ಪೊಲೀಸರು ನಿರಾಕರಿಸಿದ್ದಾರೆ. ಸಿಬ್ಬಂದಿ ಕೊರತೆ ಇದೆ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಮಾವೇಶದ ದಿನಾಂಕವನ್ನು ಮುಂದೂಡುವಂತೆ ನಿರ್ದೇಶನ ನೀಡಿದ್ದಾರೆ.
ಮಜ್ಲಿಸ್-ಎ-ಇತ್ತ್ ಹಾದುಲ್ ಮುಸ್ಲಿಮೀನ್ (ಎಂಐಎಂ) ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಅವರು ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಫೆಬ್ರವರಿ 8ರಂದು ಶಿವಾಜಿನಗರದಲ್ಲಿರುವ ಚೋಟಾ ಮೈದಾನದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದರು.[ಫೆ.8ರಂದು ಬೆಂಗಳೂರಿನಲ್ಲಿ ಹಿಂದೂ ಸಮಾಜೋತ್ಸವ]

ಸಮಾವೇಶ ನಡೆಸಲು ಅನುಮತಿ ನೀಡುವಂತೆ ಕೋರಿ ಜನವರಿ 9ರಂದು ಬೆಂಗಳೂರು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಜನವರಿ 16ರಂದು ಅನುಮತಿ ನೀಡಲಾಗಿತ್ತು. ಆದರೆ, ನಂತರ ಅನುಮತಿಯನ್ನು ಪೊಲೀಸರು ಹಿಂಪಡೆದಿದ್ದಾರೆ. ['ತಾಕತ್ತಿದ್ರೆ ಮೋದಿ ನನ್ನ ವಿರುದ್ಧ ನಿಂತು ಗೆಲ್ಲಲಿ']
ಸಿಬ್ಬಂದಿ ಕೊರತೆ ಇದೆ ಎಂಬ ಕಾರಣವನ್ನು ನೀಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಸಾವುದ್ದೀನ್ ಒವೈಸಿ ಅವರ ಸಮಾವೇಶದ ದಿನವೇ ನಗರದಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದೆ. ಆದ್ದರಿಂದ ಪೊಲೀಸರು ಸಮಾವೇಶ ನಡೆಲು ಅನುಮತಿ ನಿರಾಕರಿಸಿದ್ದಾರೆ.
ಪೂರ್ವ ವಿಭಾಗ ಡಿಸಿಪಿ ಎನ್.ಸತೀಶ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಫೆ.8ರಂದು ನಗರದಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದೆ. ಅಂದೇ ಸಮಾವೇಶ ಆಯೋಜನೆಗೆ ಎಂಐಎಂ ಮುಖಂಡರು ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.
ಹಿಂದೂ ಸಮಾವೇಶ ಮೊದಲೇ ನಿಗದಿಯಾಗಿತ್ತು ಆದ್ದರಿಂದ ಮುನ್ನಚ್ಚರಿಕೆ ಕ್ರಮವಾಗಿ ಬೇರೆ ದಿನ ಸಮಾವೇಶ ಆಯೋಜಿಸುವಂತೆ ಎಂಐಎಂಗೆ ಸೂಚಿಸಿದ್ದೇವೆ. ಈ ಮಾತಿಗೆ ಸ್ಥಳೀಯ ಮುಖಂಡರು ಒಪ್ಪಿದ್ದಾರೆ. ಫೆ. 8ರ ನಂತರ ಸಮಾವೇಶ ನಡೆಸಿದರೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications