CV Raman Nagar: ಕನ್ನಡ-ತಮಿಳು ಸೌಹಾರ್ದತೆಗೆ ಧಕ್ಕೆ ತರುವಂತೆ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ:ಎಎಪಿ
ಬೆಂಗಳೂರು, ಮೇ 06: ಬೆಂಗಳೂರಿನ ಸರ್ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯು ಪ್ರಚಾರದ ವೇಳೆ ಕ್ಷುಲ್ಲಕ ಭಾಷಾ ರಾಜಕಾರಣ ಮಾಡುತ್ತಿರುವುದು ಕನ್ನಡ - ತಮಿಳು ಸೌಹಾರ್ದತೆಗೆ ಧಕ್ಕೆ ತರುತ್ತಿದೆ ಎಂದು ಆಮ್ ಆದ್ಮಿ ಪಕ್ಷವು ಆರೋಪಿಸಿದೆ.
ಈ ಸಂಬಂಧ ಆಮ್ ಆದ್ಮಿ ಪಕ್ಷದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಪಕ್ಷದ ಕಾರ್ಯಾಧ್ಯಕ್ಷರು ಹಾಗೂ ಸರ್ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಎಪಿ ಅಭ್ಯರ್ಥಿ ಮೋಹನ್ ದಾಸರಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕುಮಾರ್ ತಮಿಳು ಭಾಷೆಗಳು ಹೆಚ್ಚಾಗಿ ಇರುವ ಪ್ರದೇಶಗಳ ಹೋದ ಕಡೆಯಲ್ಲೆಲ್ಲ ಭಾಷಾ ರಾಜಕಾರಣ ಮಾಡುತ್ತಿದ್ದಾರೆ.

ಆನಂದ್ ಕುಮಾರ್ ಕ್ಷೇತ್ರದಲ್ಲಿ, 'ನಾನು ತಮಿಳಿಗ ನನಗೆ ವೋಟನ್ನು ನೀಡಿ, ತಮಿಳಿಗರು ಯಾರು ವಿಧಾನಸಭೆಯನ್ನು ಪ್ರವೇಶಿಸಿಲ್ಲ, ನನ್ನನ್ನು ಗೆಲ್ಲಿಸಿ ಎಂದು ಮತಯಾಚನೆ ಮಾಡುತ್ತಿದ್ದಾರೆ. ಹೀಗೆ ಭಾಷೆ ಆಧಾರದಲ್ಲಿ ಮತದಾರರಿಂದ ಮತ ಕೇಳುತ್ತಿರುವುದು ಅಸಾಂವಿಧಾನಿಕವಾಗಿದೆ. ಅಲ್ಲದೇ ಭಾಷಾ ಭಾತೃತ್ವಕ್ಕೆ ಧಕ್ಕೆ ಉಂಟು ಮಾಡುವಂತಹ ಕಾರ್ಯ ಇದಾಗಿದೆ ಎಂದು ಅವರು ಆಪಾದಿಸಿದರು.
ಆನಂದ್ ಕುಮಾರ್ ಅವರಿಗೆ ತಾಕತ್ತಿದ್ದರೆ ತಾವು ಇದುವರೆಗೂ ಮರ್ಫಿ ಟೌನ್ ವಾರ್ಡ್‌ನಲ್ಲಿ ಮಾಡಿರುವಂತಹ ಸ್ಕೂಲು, ಆಸ್ಪತ್ರೆಗಳು, ರಸ್ತೆಗಳು ಒಳಚರಂಡಿಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಮಾತನಾಡಿ ಮತ ಕೇಳಲಿ. ಅದನ್ನು ಬಿಟ್ಟು ಈ ರೀತಿಯ ಕ್ಷುಲ್ಲಕ ಭಾಷಾ ರಾಜಕಾರಣಕ್ಕೆ ಇಳಿದಿರುವುದು ಅವರು ಖಂಡಿತ ಸೋಲುತ್ತಾರೆಂಬ ಭೀತಿಯನ್ನು ತೋರಿಸುತ್ತದೆ ಹೊರತು ಮತ್ತೇನಲ್ಲ ಎಂದು ಮೋಹನ್ ದಾಸರಿ ವಾಗ್ದಾಳಿ ನಡೆಸಿದರು.
ಸರ್ ಸಿ ವಿ ರಾಮನ್ ನಗರ ಕ್ಷೇತ್ರ ಸರ್ವ ಭಾಷೆಗರ ಸರ್ವಧರ್ಮೀಯರ ಶಾಂತಿಯ ಪ್ರದೇಶ. ಕಾವೇರಿ ಗಲಾಟೆಯನ್ನು ಸೇರಿಸಿದಂತೆ ಯಾವುದೇ ರೀತಿಯ ತಮಿಳು ಮತ್ತು ಕನ್ನಡಿಗರ ಭಾತೃತ್ವಕ್ಕೆ ಧಕ್ಕೆಯಾಗದಂತೆ ಯಾವುದೇ ರೀತಿಯ ಸಣ್ಣ ಗಲಭೆಗಳು ಸಹ ಈ ಕ್ಷೇತ್ರದಲ್ಲಿ ಆಗಿಲ್ಲ.

ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕುಮಾರ್ ಅವರ ತಮಿಳು ಭಾಷಾ ಪ್ರಚಾರ ವೈಖರಿ ನಿಜಕ್ಕೂ ಅಸಹ್ಯ ತರಿಸುವಂತಿದೆ ಎಂದು ಆಕ್ರೋಶ ಹೊರಹಾಕಿದರು.
ಎಎಪಿ ಪ್ರಣಾಳಿಕೆ ಬಿಡುಗಡೆ
ಬೆಂಗಳೂರಿನಲ್ಲಿ ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ 2023ರ ಪ್ರಣಾಳಿಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಪ್ರಣಾಳಿಕಾ ಸಮಿತಿಯ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಪೃಥ್ವಿ ರೆಡ್ಡಿ, ಈ ಹಿಂದೆ ನಾವು ನೀಡಿದಂತಹ ಅನೇಕ ಭರವಸೆಗಳನ್ನು ಅನೇಕ ಪಕ್ಷಗಳು ಗೇಲಿ ಮಾಡುತ್ತಿದ್ದವು. ಈಗ ಅದೇ ಪಕ್ಷಗಳು ಕ್ಯೂನಲ್ಲಿ ನಿಂತು ನಾವು ನೀಡಿದ ಭರವಸೆಗಳನ್ನೇ ನಕಲು ಮಾಡುತ್ತಾ ಜನರಲ್ಲಿ ಗ್ಯಾರೆಂಟಿ ನೀಡುತ್ತಿದ್ದಾರೆ. ಇದರಿಂದಾಗಿ ನಮಗೇನು ಬೇಸರವಿಲ್ಲ. ಕೊನೆಗಾದರೂ ಎಲ್ಲ ಪಕ್ಷಗಳು ನಮ್ಮ ಹಾದಿಯಲ್ಲೇ ಬರುತ್ತಿದ್ದಾರೆ ಎಂಬ ಸಂತೋಷ ವಿದೆ ಎಂದು ವಿಪಕ್ಷಗಳಿಗೆ ಅವರು ಟಾಂಗ್ ನೀಡಿದರು.
ರಾಜ್ಯದಾದ್ಯಂತ ಸಾವಿರಾರು ಜನರ ಭೇಟಿ ಮಾಡಿ, ಅಭಿಪ್ರಾಯವನ್ನು ಪಡೆದುಕೊಂಡು ಈ ಪ್ರಣಾಳಿಕೆಯನ್ನು ರಚಿಸಲಾಗಿದೆ. ಈ ಕುರಿತು ಶ್ರಮಿಸಿದ ಸಮಿತಿ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್ ಮತ್ತವರ ತಂಡಕ್ಕೆ ಧನ್ಯವಾದ ತಿಳಿಸಿದರು.












Click it and Unblock the Notifications