Monsoon Rain: ಮುಂಗಾರು ಮುನ್ನವೇ ಶಿಥಿಲಗೊಂಡ ಗೋಡೆ, ಕಟ್ಟಡಗಳ ತೆರವು: ಪಾಲಿಕೆ
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವಾರದ (ಏ.29) ಸುರಿದ ಮಳೆ, ಅದರಿಂದಾದ ಸಾವು-ನೋವುಗಳಿಂದ ಎಚ್ಚೆತ್ತುಕೊಂಡಿರುವ ನಗರ ಪಾಲಿಕೆಯು ಮುಂಗಾರು ಮಳೆಗಾಲದ ಸಂಭವನೀಯ ಅವಘಡಗಳನ್ನು ತಡೆಯಲು ಮುಂದಾಗಿದ್ದಾರೆ. ಶಿಥಿಲಗೊಂಡ ಗೋಡೆ, ಕಟ್ಟಡಗಳ ತೆರವಿಗೆ ಮುಂದಾಗಿದ್ದು, ಈ ಕ್ರಮ ಎಲ್ಲಾ 112 ವಾರ್ಡ್‌ಗಳಲ್ಲಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ ಎಂದು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಮಳೆಗಾಲ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಡೆದ ಸಭೆ ಅವರು ಮಾತನಾಡಿದರು. ಮಳೆಗಾಲ ಪೂರ್ವ ಪೂರ್ವಸಿದ್ಧತೆ, ಯೋಜನೆ ಮತ್ತು ಸಮನ್ವಯದಲ್ಲಿ ಕೆಲಸ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆಲವೇ ವಾರಗಳಲ್ಲಿ ಮುಂಗಾರು ಮಳೆಗಾಲ ಆರಂಭವಾಗಲಿದೆ. ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 112 ವಾರ್ಡ್‌ಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಎಲ್ಲಾ ತಂಡಗಳು ಸಕ್ರಿಯವಾಗಬೇಕು. ಅವಘಡ ತಪ್ಪಿಸುವಲ್ಲಿ ತಪ್ಪು ಎಸಗಿದರೆ, ನಿರ್ಲಕ್ಷ್ಯ ವಹಿಸಿದರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದುದೆಂದು ಎಚ್ಚರಿಸಿದರು.
ಮಳೆಗಾಲ ಪೂರ್ವ ಏನೆಲ್ಲ ಕೆಲಸಗಳಾಗಲಿವೆ?
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟೀರಿಯಲ್, ಸಬ್-ಆರ್ಟೀರಿಯಲ್ ಹಾಗೂ ಹೈ ಡೆನ್ಸಿಟಿ ಕಾರಿಡಾರ್‌ಗಳ ಬದಿಯ ಚರಂಡಿಗಳು, ಶೋಲ್ಡರ್ ಡ್ರೇನ್‌ಗಳಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ಗ್ರೇಟಿಂಗ್‌ಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛತೆ ಕಾಪಾಡಬೇಕು. ಈ ಕುರಿತು ಸ್ಥಳ ಪರಿಶೀಲನೆ ನಡೆಸಿ, ಸ್ವಚ್ಛತೆ ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶಿಥಿಲಗೊಂಡ ಕಟ್ಟಡ/ಗೋಡೆ ತೆರವು
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು, ಕಾಂಪೌಂಡ್ ಗೋಡೆಗಳು, ಶೆಲ್ಟರ್ ಪಾಯಿಂಟ್‌ಗಳು, ಮ್ಯಾನ್ ಹೋಲ್‌ಗಳು ಹಾಗೂ ಬೀಳುವ ಸಾಧ್ಯತೆಯಿರುವ ಫ್ಲೆಕ್ಸ್/ ಬ್ಯಾನರ್‌ಗಳನ್ನು ಕೂಡಲೇ ತೆರವು ಮಾಡಬೇಕು. ತೆರವು ಕುರಿತು ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ/ಗೋಡೆಗಳನ್ನು ಗುರುತಿಸಿ, ತೆರವಿಗೆ ಸಂಬಂಧಿಸಿದವರಿಗೆ ನೋಟಿಸ್ ಸಹ ಜಾರಿಗೊಳಿಸುವಂತೆ ಹೇಳಿದರು.
ಮಳೆ ಹಾನಿ ಪ್ರದೇಶಗಳ ಗುರುತಿಸಿ
ಮಳೆಗಾಲದ ವೇಳೆ ನೀರು ನಿಲ್ಲುವ ತಗ್ಗು ಪ್ರದೇಶಗಳು ಹಾಗೂ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಪಾಲಿಕೆ, ಅಗ್ನಿಶಾಮಕ ತುರ್ತು ಸೇವೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ಸಮಸ್ಯಾತ್ಮಕ ಪ್ರದೇಶಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ಜರುಗಿಸಬೇಕು.
ರಸ್ತೆ ಸಂಚಾರ ಸುಗಮಗೊಳಿಸಿ
ನಗರದ ರಸ್ತೆಗಳಲ್ಲಿ ಎಲ್ಲೆಲ್ಲಿ ಹಂಪ್ ಹಾಗೂ ಸ್ಪೀಡ್ ಬ್ರೇಕರ್‌ಗಳು ಇವೆ ಅವು ಸ್ಪಷ್ಟವಾಗಿ ಕಾಣುವಂತೆ ಮಾರ್ಕಿಂಗ್ ಮಾಡುವಂತೆ ತಿಳಿಸಿದರು. ಈ ಕೆಲಸ ಆದಷ್ಟು ತ್ವರಿತವಾಗಿ ನಡೆಸಬೇಕು. ಪಾದಚಾರಿ ಮಾರ್ಗಗಳಲ್ಲಿರುವ ತೆರೆದ ಸ್ಲ್ಯಾಬ್‌ಗಳು, ಭಗ್ನಾವಶೇಷಗಳು, ಒಣಗಿದ ಮರಗಳು ಹಾಗೂ ರೆಂಬೆಗಳನ್ನು ಕೂಡಲೇ ತೆರವುಗೊಳಿಸಬೇಕು. ಜೊತೆಗೆ, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹೇಳಿದರು.
ಜಾರಿ ಆಗಬೇಕಿರುವ ಮುನ್ನೆಚ್ಚರಿಕೆ ಕ್ರಮಗಳು
* ಮಳೆಗಾಲದ ವೇಳೆ ಧರೆಗುರುಳಿದ ಮರಗಳು ಹಾಗೂ ರೆಂಬೆಗಳನ್ನು ತೆರವುಗೊಳಿಸಲು ಗರಗಸ, ಮರ ಕತ್ತರಿಸುವ ಯಂತ್ರ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
* ಗಾಳಿ ಆಂಜನೇಯ ದೇವಸ್ಥಾನದ ಬಳಿಕ ರಾಜಕಾಲುವೆಯಲ್ಲಿ ಸಂಪೂರ್ಣ ಹೂಳೆತ್ತಿ ಸ್ವಚ್ಛತೆ ಕಾಪಾಡುವುದು. ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ನಿರ್ದೇಶನ ನೀಡುವುದು.
* ಸಸಿ/ಮರಗಳ ಬುಡಕ್ಕೆ ಹಾಕಿರುವ ಕಾಂಕ್ರೀಟ್ ಅನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಯಿತು. ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸಲಾಗಿದೆ.
* ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳುವುದು ಮತ್ತು ವಾರ್ಡ್‌ಗಳಲ್ಲಿ ನಡೆಯುವ ಕಾರ್ಯಕ್ರಮ/ಸಮಾರಂಭಗಳ ಬಗ್ಗೆ ಮುಂಚಿತ ಮಾಹಿತಿ ಪಡೆದು ಯಾವುದೇ ಅಜಾಗರೂಕತೆ ಆಗದಂತೆ ಎಚ್ಚರವಹಿಸುವುದು ಸೇರಿದಂತೆ ಹಲವು ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ ಆಯುಕ್ತರು ನೀಡಿದ್ದಾರೆ.














Click it and Unblock the Notifications