ಬೆಂಗಳೂರು ಅವ್ಯವಸ್ಥೆ: ಸರ್ಕಾರದ ಮೇಲೆ ಮುಗಿಬಿದ್ದ ಮೋಹನ್ ದಾಸ್ ಪೈ & ಕಿರಣ್ ಮಜುಂದಾರ್ ಶಾ
ಬೆಂಗಳೂರು ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಉದ್ಯಮಿಗಳು ಸರ್ಕಾರದ ವಿರುದ್ಧ ತಿರುಗಿ ಬೀಳುವುದು ಮುಂದುವರಿದಿದೆ. ಬೆಂಗಳೂರಿನ ರಸ್ತೆಗುಂಡಿ, ಕಸ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ಉದ್ಯಮಿಗಳು ಧ್ವನಿ ಎತ್ತುವುದು ಮುಂದುವರಿದಿದೆ. ಬೆಂಗಳೂರಿನ ಮೂಲಸೌಕರ್ಯ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿಗಳಾದ ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಶಾ ಅವರು ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಮೂಲಸೌಕರ್ಯದ ವಿಚಾರವು ಪದೇ ಪದೇ ಚರ್ಚೆ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವಾಗಿ ಪರ - ವಿರೋಧ ಚರ್ಚೆಗಳು ನಡೆದಿವೆ. ಆದರೆ ಬೆಂಗಳೂರಿನಲ್ಲಿ ಮೌಲಸೌಕರ್ಯ ಕುಸಿದಿರುವ ಬಗ್ಗೆ ಎಲ್ಲರೂ ಒಪ್ಪಿಕೊಳ್ಳುವಂತಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯದ ಬಗ್ಗೆ ಇದೀಗ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ ಬೆನ್ನಲ್ಲೇ ಉದ್ಯಮಿಗಳಾದ ಮೋಹನ್ ದಾಸ್ ಪೈ ಮತ್ತು ಮಜುಂದರ್ ಶಾ ಅವರು ಸರ್ಕಾರದ ಮೇಲೆ ಮುಗಿ ಬಿದ್ದಿದ್ದಾರೆ.

ನರೇಶ್ ಎನ್ನುವವರು, ಬೆಳ್ಳಂದೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇದೀಗ ಪ್ರಯಾಣಿಸಿದೆ. ಈ ಮಾರ್ಗದಲ್ಲಿ ಸಂಚರಿಸುವುದಕ್ಕೆ ಬರೋಬ್ಬರಿ 1 ಗಂಟೆ 45 ನಿಮಿಷಗಳನ್ನು ಬೇಕಾಯಿತು. ಇದು ಹುಚ್ಚುತನ. ಜೊತೆಗೆ ರಸ್ತೆಗಳೆಲ್ಲವೂ ಅಗೆದು ಹೊಂಡಗಳಿಂದ ತುಂಬಿವೆ. ರಸ್ತೆ ಗುಂಡಿಗಳೇ ತುಂಬಿವೆ. ಕ್ಷಮಿಸಿ, ಆದರೆ ಬೆಂಗಳೂರಿನಲ್ಲಿ ಭಾರತದ ಅತ್ಯಂತ ಕೆಟ್ಟ ರಸ್ತೆಗಳಿವೆ ಎಂದು ನಾನು ಭಾವಿಸುತ್ತೇನೆ. ಇದು ಸುಸ್ಥಿರವಲ್ಲ, ಇದು ಮುಂದಿನ 10 ವರ್ಷಗಳಲ್ಲಿ ಪ್ರಯಾಣಿಕರಿಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಇದು ಸೃಷ್ಟಿ ಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ರಿಯಾಕ್ಟ್ ಮಾಡಿರುವ ಮೋಹನ್ ದಾಸ್ ಪೈ ಅವರು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕೆಲವು ಪ್ರತಿಕ್ರಿಯೆಗಳು. ಇದು ಅಭಿವೃದ್ಧಿಯ ಬೆಳವಣಿಗೆಯಲ್ಲ. ಬದಲಾಗಿ ಭಾರಿ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತದ ಪರಿಣಾಮವಾಗಿದೆ. ದಯವಿಟ್ಟು ಸಹಾಯ ಮಾಡಿ ಎಂದು ಗ್ರೇಟರ್ ಬೆಂಗಳೂರು ಆಡಳಿತಕ್ಕೆ ಟ್ಯಾಗ್ ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತದ ಮುಖ್ಯ ಆಯುಕ್ತರಿಗೂ ಟ್ಯಾಗ್ ಮಾಡಿದ್ದಾರೆ. ಗುಂಡಿಗಳಿಲ್ಲದೆ ನಾವು ರಸ್ತೆಗಳನ್ನು ಹೊಂದಲು ಸಾಧ್ಯವಿಲ್ಲವೇ ಎಂದು ಪ್ರಶ್ನೆ ಮಾಡಿರುವ ಅವರು, ಇದು AI ಕೆಲಸವಲ್ಲ ಆದರೆ 200 ವರ್ಷಗಳಿಗೂ ಹೆಚ್ಚು ಕಾಲ ಇದೇ ಮುಂದುವರಿದಿದೆ ಎಂದಿದ್ದಾರೆ.
ಇನ್ನು ಮೋಹನ್ ದಾಸ್ ಪೈ ಅವರ ಟ್ವೀಟ್‌ಗೆ ರೀಟ್ವೀಟ್ ಮಾಡಿರುವ ಮಜುಂದರ್ ಶಾ ಅವರು, ನಮ್ಮ ನಗರವನ್ನು ಸರಿಪಡಿಸಲು ಮತ್ತು ಅದನ್ನು ವಿಶ್ವ ದರ್ಜೆಯನ್ನಾಗಿ ಮಾಡಲು ರಾಜಕೀಯ ನಾಯಕತ್ವವು, ರಾಜಕೀಯ ಇಚ್ಛಾಶಕ್ತಿಯನ್ನು ಏಕೆ ತೋರಿಸುತ್ತಿಲ್ಲ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಬಜೆಟ್ ಹಂಚಿಕೆ ಮತ್ತು ಅನುಷ್ಠಾನದ ವಿಷಯದಲ್ಲಿ ಗಮನಹರಿಸುವುದಕ್ಕಿಂತ ಹೆಚ್ಚಿನದನ್ನು ಇದು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.












Click it and Unblock the Notifications