BWSSB: ಈವರೆಗೆ 4000 ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ: ಅಪ್ಡೇಟ್ ಕೊಟ್ಟ ಜಲಮಂಡಳಿ
ಬೆಂಗಳೂರು, ಏಪ್ರಿಲ್ 04: ಬೆಂಗಳೂರಲ್ಲಿ ನೀರು ಪೂರೈಕೆಯಲ್ಲಿ ಕೊರತೆ ಸಮಸ್ಯೆ ಆಗಿದೆ. ಬೇಸಿಗೆ ಕಾರಣ ಅಂತರ್ಜಲ ಕುಸಿದಿದ್ದು, ನೀರಿನ ಮಿತ ಬಳಕೆಗೆ ಜಲಮಂಡಳಿ ಆದ್ಯತೆ ನೀಡಿದೆ. ಇದರ ಭಾಗವಾಗಿ ಹೆಚ್ಚು ಜನರ ಸೇರುವ ಪ್ರದೇಶಗಳಲ್ಲಿ ನಲ್ಲಿಗಳಿಗೆ ಮೀತ ನೀರಿನ ಬಳಕೆಗೆ ಆಸರೆಯಾಗುವ ಏರಿಯೇಟರ್ ಅಳವಡಿಕೆ ಕಾರ್ಯ ಮತ್ತಷ್ಟು ಚುರುಕು ಪಡೆದಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯು ಈವರೆಗೆ 4000 ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಮಾಡಿದ್ದಾರೆ. ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವಂತಹ ಸರ್ಕಾರಿ ಕಚೇರಿಗಳು ಹಾಗೂ ನಗರದ ಪ್ರಮುಖ ಸಂಸ್ಥೆಗಳಲ್ಲಿನ ನಲ್ಲಿಗಳಿಗೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಏರಿಯೇಟರ್ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಸಾರ್ವಜನಿಕ ಸ್ಥಳಗಳ ನಲ್ಲಿಗಳಿಗೆ ಅಳವಡಿಕೆ
ಈ ಕುರಿತು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು, ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಸರಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೇಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಪ್ಲೋ ರಿಸ್ಟ್ರಿಕ್ಟರ್/ಏರಿಯೇಟರ್ ಅಳವಡಿಸುವುದನ್ನ ಕಡ್ಡಾಯಗೊಳಿಸಿದ್ದೇವೆ. ಈ ಸಂಬಂಧ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಪ್ರೇರಣೆ
ಈ ನಿಯಮವನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಮೊದಲ ಹಂತದಲ್ಲಿ ಬೆಂಗಳೂರು ಜಲಮಂಡಳಿಯ ಎಲ್ಲಾ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲಾಗಿದೆ.
2ನೇ ಹಂತದ ಏರಿಯೇಟರ್ ಅಳವಡಿಕೆ ಮಾಹಿತಿ
ಇನ್ನೂ ಎರಡನೇ ಹಂತದಲ್ಲಿ ನಗರದ ಪ್ರಮುಖ ಸರಕಾರಿ ಕಚೇರಿಗಳಾದ ಬಿಡಿಎ, ಬಿಎಸ್‌ಎನ್‌ಎಲ್, ಇಂದಿರಾ ಕ್ಯಾಂಟೀನ್, ಇನ್ ಕಮ್ ಟ್ಯಾಕ್ಸ್, ಬಿಬಿಎಂಪಿ ಸರಕಾರಿ ಶಾಲೆಗಳು, ಇಸ್ರೋ, ಬೆಗ್ಗರ್ಸ್ ಕಾಲೋನಿ, ಹೆಚ್ ಎ ಎಲ್, ಬೆಮೆಲ್, ಸಿಲ್ಕ್ ಬೋರ್ಡ್, ಕೇಂದ್ರೀಯ ಸದನ್, ಡಿಫೆನ್ಸ್, ವಿವಿ ಟವರ್, ಐಎಎಸ್ ಅಫಿಸರ್ಸ್ ಅಸೋಸಿಯೇಷನ್, ಆರ್‌ಟಿಓ, ಡಿಸಿ ಆಫೀಸ್, ಪೊಲೀಸ್ ಸ್ಟೇಷನ್, ಜಯದೇವ ಹಾಸ್ಪಿಟಲ್, ಸೆಂಟ್ರಲ್ ಫಾರ್ಮಸಿ, ಐಟಿಐ ಇನ್ಸಿಟ್ಯೂಟ್, ಸೆಂಟ್ರಲ್ ಫಾರ್ಮಸಿ, ಲೋಕಾಯುಕ್ತ ನಿವಾಸ, ಕೆಪಿಟಿಸಿಲ್, ಬಿಬಿಎಂಪಿ, ಕೆಎಂಎಫ್, ಬೆಸ್ಕಾಂ, ಪಿ&ಟಿ ಕ್ಯಾಟರ್ಸ್ ಮತ್ತು ಗ್ಯಾರಿಸನ್ ಇಂಜಿನೀಯರಿಂಗ್ ಕಟ್ಟಡಗಳಲ್ಲಿ ಜಲಮಂಡಳಿಯ ವತಿಯಿಂದಲೇ 4,000 ಏರಿಯೇಟರ್/ಫ್ಲೋ ರಿಸ್ಟ್ರಿಕ್ಟರ್ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳು ಮಾದರಿಯಾಗಬೇಕು. ಯಾವುದೇ ಹೊಸ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲಿಸಿದಲ್ಲಿ ಜನರ ತಮ್ಮಲ್ಲಿ ಅಳವಡಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ತೋರುತ್ತಾರೆ. ಈ ಹಿನ್ನಲೆಯಲ್ಲಿ ಸುತ್ತೋಲೆ ಹೊರಡಿಸುವ ಮುನ್ನವೇ ನಮ್ಮ ಜಲಮಂಡಳಿ ಕಚೇರಿಗಳಲ್ಲಿ ಈ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಗ್ರಾಹಕರಿಂದಲೇ ಏರಿಯೇಟರ್ ವೆಚ್ಚ ಸಂಗ್ರಹ
ಈಗ ನಮ್ಮ ಸಿಬ್ಬಂದಿಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಏರಿಯೇಟರ್/ಫ್ಲೋ ರಿಸ್ಟ್ರಿಕ್ಟರ್ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಇಸ್ರೋ, ಬಿಬಿಎಂಪಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲಾಗಿದೆ. ಎಲ್ಲ ಸರ್ಕಾರಿ ಕಚೇರಿಗಳ ನಲ್ಲಿಗಳಿಗೂ ಮೀತ ನೀರಿನ ಬಳಕೆಗೆ ಸಹಾಯವಾಗುವ ಈ ಏರಿಯೇಟರ್ ಅನ್ನು ಅಳವಡಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಪಾರದರ್ಶಕವಾಗಿ ಗ್ರಾಹಕರಿಂದಲೇ ತಗೆದುಕೊಳ್ಳಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷರು ವಿವರಿಸಿದರು.












Click it and Unblock the Notifications