ಬೆಂಗಳೂರು, ಮೈಸೂರು & ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ರೈಲು ಸೇವೆ ಕೊಡಿ ಎಂದ ಬೆಂಗಳೂರು ಬಿಜೆಪಿ ಸಂಸದ ಪಿ.ಸಿ ಮೋಹನ್!
ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಿಗೆ ಉತ್ತರ ಭಾರತ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು. ಭಾಷಾ ಸಂಘರ್ಷ ಹಾಗೂ ಜನದಟ್ಟಣೆ ಸೇರಿದಂತೆ ವಿವಿಧ ಸಮಸ್ಯೆಗಳು ಹೆಚ್ಚಾಗಿವೆ. ಪರೋಕ್ಷವಾಗಿ ವಲಸಿಗರ ಹೆಚ್ಚಳದಿಂದ ಉದ್ಯೋಗವೂ ಕಡಿಮೆಯಾಗುತ್ತಿದೆ. ಈ ರೀತಿ ಇರುವಾಗ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಉತ್ತರ ಭಾರತದಿಂದ ರೈಲು ಸೇವೆ ಕೊಡಿ ಎಂದು ಕೇಂದ್ರ (South Western Railway) ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ರೈಲು ಸೇವೆಯ ಬಗ್ಗೆ ಮಾತನಾಡದ ಕರ್ನಾಟಕದ ಸಂಸದರು ರಾಜಸ್ಥಾನದಿಂದ ಬರುವವರ ಬಗ್ಗೆ ಯಾಕೆ ತಲೆ ಕೆಡಿಸಿಕೊಂಡಿದ್ದಾರೆ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ದೈನಂದಿನ ರೈಲು ಸೇವೆಗಳನ್ನು ಕಲ್ಪಿಸಿ ಎಂದು ಕರ್ನಾಟಕ ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು. ಇದಕ್ಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಬೇರೆ ಬೇರೆ ರಾಜ್ಯಗಳಿಗೆ ಹೋಗುವವರು ಇನ್ನೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ರೀತಿ ಇರುವಾಗ ಕರ್ನಾಟಕದ ಸಂಸದರು ರಾಜಸ್ಥಾನದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಪಿ.ಸಿ ಮೋಹನ್ ಪತ್ರದಲ್ಲಿ ಏನಿದೆ ?
ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರು, ಕರ್ನಾಟಕದಲ್ಲಿ ವಾಸಿಸುವ ಪ್ರವಾಸಿ ರಾಜಸ್ಥಾನಿ ಸಮುದಾಯದ ಸದಸ್ಯರಿಂದ ನನಗೆ ಪ್ರಾತಿನಿಧ್ಯ ಬಂದಿದೆ. ಇದು ಕರ್ನಾಟಕ ಮತ್ತು ರಾಜಸ್ಥಾನದ ನಡುವೆ ಸುಧಾರಿತ ರೈಲ್ವೆ ಸಂಪರ್ಕದ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಪ್ರಸ್ತುತ, ನೇರ ಮತ್ತು ಆಗಾಗ್ಗೆ ರೈಲು ಸೇವೆಗಳ ಕೊರತೆಯು ಸಾವಿರಾರು ಪ್ರಯಾಣಿಕರಿಗೆ ಗಮನಾರ್ಹ ತೊಂದರೆಯನ್ನುಂಟುಮಾಡುತ್ತಿದೆ. ಅವರ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮುಖ ವಿಷಯಗಳನ್ನು ನಿಮ್ಮ ಗಮನಕ್ಕೆ ತರುವುದಕ್ಕೆ ಬಯಸುತ್ತೇನೆ.
* ಈ ಮಾರ್ಗದಲ್ಲಿ ರೈಲು ಸಂಪರ್ಕ ಕೊರತೆಯನ್ನು ಪರಿಹರಿಸಲು ಬೆಂಗಳೂರಿನಿಂದ ಬಿಲ್ಡಿ - ಜಾಲೋರ್ ಮೂಲಕ ಜೋಧ್‌ಪುರಕ್ಕೆ ಹೊಸ ನೇರ ರೈಲು ಪರಿಚಯಿಸಬೇಕು.
* ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಈಗಾಗಲೇ ಇರುವ ವಾರದ ರೈಲು (ವಾರಕ್ಕೊಮ್ಮೆ ಸೇವೆ ಇರುವ) (ರೈಲು ಸಂಖ್ಯೆ 14805/06) ವಾರದಲ್ಲಿ ಮೂರು ಬಾರಿ ರೈಲು ಸೇವೆ ಕೊಡಬೇಕು.
* ಈ ಪ್ರದೇಶದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16209/16210 (ಬೆಂಗಳೂರಿನಿಂದ ಅಜ್ಮೀರ್) ಗಾಗಿ ಜವೈಬಂದ್ ನಿಲ್ದಾಣದಲ್ಲಿ (ಪಾಲಿ ಜಿಲ್ಲೆ) ಹೆಚ್ಚುವರಿ ನಿಲ್ದಾಣವನ್ನು ಒದಗಿಸುವುದು.
* ಬೆಂಗಳೂರು ಮತ್ತು ರಾಜಸ್ಥಾನದ ನಡುವೆ ಕನಿಷ್ಠ ಒಂದು ದೈನಂದಿನ ರೈಲು ಸೇವೆಯ ಆರಂಭಿಸಬೇಕು. ಏಕೆಂದರೆ ಪ್ರಸ್ತುತ ಯಾವುದೇ ರೈಲುಗಳು ಪ್ರತಿದಿನವೂ ಕಾರ್ಯನಿರ್ವಹಿಸುವುದಿಲ್ಲ ಎಂದಿದ್ದಾರೆ.
ಮುಂದುವರಿದು ಈ ಕ್ರಮಗಳು ಪ್ರಯಾಣದ ತೊಂದರೆಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಎರಡೂ ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಈ ವಿನಂತಿಗಳನ್ನು ಅನುಕೂಲಕರವಾಗಿ ಪರಿಗಣಿಸಿ ಮತ್ತು ಅಗತ್ಯ ಕ್ರಮವನ್ನು ಆದಷ್ಟು ಬೇಗ ತೆಗೆದುಕೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಸಂಸದ ಪಿ.ಸಿ ಮೋಹನ್ ಅವರು ಹೇಳಿದ್ದಾರೆ.
ಕನ್ನಡಿಗರ ಆಕ್ರೋಶ: ಸಂಸದ ಪಿ.ಸಿ ಮೋಹನ್ ಅವರ ಮನವಿಗೆ ಕನ್ನಡಿಗರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ರೈಲು ಕೇಳಿದಾಗ ಮೌನ! ಕಲಬುರಗಿ, ಬೀದರ್, ಉಡುಪಿ, ಕಾರವಾರ ಅಥವಾ ಮಂಗಳೂರಿಂದ ಬೆಂಗಳೂರಿಗೆ ಇಂದಿಗೂ ಸರಿಯಾದ ದೈನಂದಿನ ರೈಲುಗಳಿಲ್ಲ. ಆದರೆ ಬೆಂಗಳೂರು ಕೇಂದ್ರ ಸಂಸದ
ಪಿ.ಸಿ ಮೋಹನ್ ಅವರು, ಕರ್ನಾಟಕದಲ್ಲಿರುವ ರಾಜಸ್ಥಾನಿಗಳಿಗೆ ಹೊಸ ರೈಲು ಮಾರ್ಗಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದು ಕರ್ನಾಟಕದ & ಕನ್ನಡಿಗರನ್ನು ನಿರ್ಲಕ್ಷ್ಯಿಸುತ್ತಿರುವಂತೆ ಅಲ್ಲವೇ ಎಂದು ಕನ್ನಡಿಗರ ಪ್ರಶ್ನೆ ಮಾಡಿದ್ದಾರೆ. Karnataka Update ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು. ಟ್ವೀಟ್ ವೈರಲ್ ಆಗಿದೆ.












Click it and Unblock the Notifications