SORRY.. ಎಂದು ವಾಟ್ಸ್‌ಆಪ್ ಸ್ಟೇಟಸ್ ಹಾಕಿ ವಿದ್ಯಾರ್ಥಿ ಮಾಡಿದ್ದೇನು..?
ಬೆಂಗಳೂರು, ಜೂ. 2: ಅವನ ವಯಸ್ಸು ಕೇವಲ 19 ವರ್ಷ. ಈ ಚಿಕ್ಕ ವಯಸ್ಸಿಗೆ ಅದ್ಯಾವ ನೋವು ಆತನನ್ನ ಕಾಡ್ತಿತ್ತೋ ಏನೊ. ಒಂದು ವಾರದಿಂದ ನೋವಿನಲ್ಲೇ ಇದ್ದ ಆತ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದ. ಬಾಳಿ ಬದುಕ ಬೇಕಾದವನು ಸಣ್ಣ ವಯಸ್ಸಿನಲ್ಲೇ ಸಾವಿಗೆ ಶರಣಾಗಿದ್ದಾನೆ. ಇನ್ಸ್ಟಾಗ್ರಾಮ್ ನಲ್ಲಿ SORRY ಅಂತಾ ಸ್ಟೋರಿ ಹಾಕಿದ್ದ ಆತ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಶವವಾಗಿದ್ದ. ಚಿಲ್ ವಿ ಆಲ್ ಡೈ ಅಂತಾ ಬರ್ಕೊಂಡಿದ್ದ ಆತ ಸಾವಿಗೆ ಶರಣಾಗೇ ಬಿಟ್ಟಿದ್ದ. ಆದರೇ ಆತನ ಈ ನೋವಿಗೆ, ಈ ನಿರ್ಧಾರಕ್ಕೆ ಕಾರಣ ಏನು ಅನ್ನೋದು ಮಾತ್ರ ನಿಗೂಡವಾಗೇ ಉಳಿದಿದೆ. ಪ್ರೇಮ ವೈಫಲ್ಯ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.
ಬಲು ಮುದ್ದಾದ ಯುವಕನ ಮನೋಜ್.ಮಂಡ್ಯ ಮೂಲದ ರಮೇಶ್ ಗೌಡ ಮತ್ತು ಲತಾ ದಂಪತಿಯ ಪುತ್ರ. ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಬಂದು ನೆಲೆಸಿದ್ದರು. ಆದರೆ ಬೆಳಗಾಗುದರೊಳಗೆ ಹೆತ್ತ ಕಂದನ ಶವ ಕಂಡು ದಿಕ್ಕೇ ತೋಚದಂತಾಗಿಬಿಟ್ಟಿದ್ದರು. ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ ಮಗನ ಕಂಡು ಕಂಗಾಲಾಗಿಬಿಟ್ಟಿದ್ದರು. 19 ವರ್ಷದ ಮನೋಜ್ ನಾಗರಬಾವಿ ಬಳಿಯ ಕೆಎಲ್ಇ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ. ಎಲ್ಲರ ಜೊತೆಗೆ ಖುಷಿ ಖುಷಿಯಾಗೇ ಇದ್ದ. ಆದರೆ ಅದೇನಾಯ್ತೋ ಏನೊ. ಒಂದು ತಿಂಗಳಿಂದ ಕಾಲೇಜಿಗೂ ಹೋಗುತ್ತಿರಲಿಲ್ಲವಂತೆ. ಅಷ್ಟೇ ಅಲ್ಲ ಒಂದು ವಾರದಿಂದ ವಾಟ್ಸ್ ಆ್ಯಪ್ ಸ್ಟೇಟಸ್,ಇನ್ಸ್ಟಾಗ್ರಾಮ್ ನಲ್ಲಿ ಸ್ಯಾಡ್ ಸ್ಟೋರಿಸ್ ಹಾಕುತ್ತಿದ್ದನಂತೆ. ಈ ದಿನ ಬೆಳಗ್ಗೆ ಎಷ್ಟು ಬಾರಿ ಕರೆ ಮಾಡಿದರೂ ಉತ್ತರಿಸದಿದ್ದಾಗ ಮನೋಜ್ ತಂದೆಗೆ ಸ್ನೇಹಿತರು ಕರೆ ಮಾಡಿದ್ದಾರೆ.ಆಗ ವಿಚಾರ ಗೊತ್ತಾಗಿದೆ.
ಅಜ್ಜಿ ಮನೆಗೆ ಮಲಗಲು ಹೋಗಿದ್ದ ಮನೋಜ್ ಆತ್ಮಹತ್ಯೆ
ಮನೋಜ್ ಪೋಷಕರ ಮನೆ ಹಾಗು ಅಜ್ಜಿ ಮನೆ ಅಕ್ಕಪಕ್ಕದಲ್ಲೇ ಇದೆ. ಹಾಗಾಗಿ ಪ್ರತಿ ದಿನ ಮನೆಯಲ್ಲಿ ಊಟ ಮಾಡಿ ಅಜ್ಜಿ ಮನೆಗೆ ಹೋಗಿ ಮಲಗ್ತಿದ್ದ. ಅದರಂತೆ ಜೂನ್ 1ರಂದು ರಾತ್ರಿ ಕೂಡ ಊಟ ಮಾಡಿ ಚಿಕ್ಕಮಗಳೂರು ಟ್ರಿಪ್ ಹೋಗೋ ಬಗ್ಗೆಯೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ಅಜ್ಜಿ ಮನೆಗೆ ಹೋಗಿದ್ದ. ಆದರೆ ರಾತ್ರಿ ಹೊತ್ತು ಮನೋಜ್ ಗೆ ಅದ್ಯಾವ ನೋವು ಅತಿಯಾಗಿ ಕಾಡಿತ್ತೋ ಏನೋ..ಇನ್ಸ್ಟಾಗ್ರಾಮ್ ನಲ್ಲಿ SORRY ಅಂತಾ ಸ್ಟೋರಿ ಹಾಕಿ ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ 7.30 ಆದರೂ ತಾಯಿಯನ್ನ ಆಫಿಸ್‌ಗೆ ಡ್ರಾಪ್ ಮಾಡಲು ಎದ್ದು ಬಾರದೇ ಇದ್ದಾಗ ರೂಮ್ ಬಾಗಿಲು ಒಡೆದು ಒಳಗೆ ಹೋದಾಗ ಫ್ಯಾನಿನಲ್ಲಿ ನೇತಾಡ್ತಿದ್ದ ದೃಶ್ಯ ಕಂಡಿದೆ. ಚಿಕ್ಕ ವಯಸ್ಸಿನ ಹುಡುಗನ ಸಾವು ಕಂಡು ಕುಟುಂಬಸ್ಥರು ಮರುಗಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಮನೋಜ್ ಕುಟುಂಬಸ್ಥರು ಮತ್ತು ಸ್ನೇಹಿತರು ಪ್ರೀತಿ ಪ್ರೇಮ ಏನು ಇಲ್ಲ ಅಂತಿದ್ದಾರೆ. ಆದರೇ ಸಾಮಾಜಿಕ ಜಾಲತಾಣದಲ್ಲಿ ಆತನ ಸ್ಟೇಟಸ್ ನೋಡ್ತಿದರೇ ಲವ್ ಫೇಲ್ಯೂರ್ ನಿಂದಲೇ ಸಾವನ್ನಪ್ಪಿದ್ದಾನೆ ಅನ್ನೋ ಅನುಮಾನ ಸಹಜವಾಗೇ ಮೂಡುತ್ತದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಮೊಬೈಲ್ ಪರಿಶೀಲನೆ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications