Bengaluru Airport: ವಿಮಾನಗಳ ಹಾರಾಟ ಬಂದ್
ಬೆಂಗಳೂರು, ಜನವರಿ 30: ನಿತ್ಯ ಲಕ್ಷಗಟ್ಟಲೇ ಜನರಿಗೆ ವಿಮಾನಯಾನ ಸೇವೆ ನೀಡುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ ಮೊದಲ ಮತ್ತು ಎರಡನೇ ವಾರ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಯಲಹಂಕ ವೈಮಾನಿಕ ನೆಲೆಯಲ್ಲಿ Air Show 2025 ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಕೆಲವು ವಿಮಾನಗಳ ಹಾರಾಟದಲ್ಲಿ ಅಡಚಣೆ ಉಂಟಾಗಲಿದೆ.
ಬಹು ನಿರೀಕ್ಷಿತ ಏರೋ ಇಂಡಿಯಾ 2025 ವಾಯು ಪ್ರದರ್ಶನ ಮುಂಚಿತವಾಗಿಯೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತನ್ನ ನಾಗರಿಕ ವಿಮಾನಯಾ, ಕಾರ್ಯಾಚರಣೆಗಳಲ್ಲಿ ತಾತ್ಕಾಲಿಕ ಬದಲಾವಣೆ ಆಗಿದೆ ಎಂದು ತಿಳಿಸಿದೆ.

ವಿಮಾನಗಳ ಹಾರಾಟ ಯಾವಾಗ ಬಂದ್?
ಬಹು ನಿರೀಕ್ಷೆಯ ಬೆಂಗಳೂರು ಏರೋ ಇಂಡಿಯಾ 2025 ವಾಯು ಪ್ರದರ್ಶನವು ಫೆಬ್ರವರಿ 10ರಿಂದ 14ರವರೆಗೆ ನಡೆಯಲಿದೆ. ಲೋಹದ ಹಕ್ಕಿಗಳ ಕಲರವ ನಡೆಯಲಿದೆ. ಈ ಸಂಬಂಧ ವಾಯು ಸಂಚಾರದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಏರ್ ಶೋ ಕಾರ್ಯಕ್ರಮಕ್ಕೆ ಹಸ್ತಕ್ಷೇಪ ಆಗದಂತೆ ತಡೆಯಲು ಬೆಂಗಳೂರು ವಿಮಾನ ನಿಲ್ದಾಣದ ವೇಳಾಪಟ್ಟಿಗಳನ್ನು ಬದಲಾಯಿಸಿದೆ. ಫೆಬ್ರವರಿ 5 ರಿಂದ ಫೆಬ್ರವರಿ 14 ರವರೆಗೆ ಕೆಲವು ವಿಮಾನಗಳ ಹಾರಾಟ ಬಂದ್ ಆಗಲಿದೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ಬೆಂಗಳೂರು ಏರ್‌ಪೋರ್ಟ್ ವಿಮಾನಗಳ ವೇಳಾಪಟ್ಟಿ
ಏರ್ ಶೋ ಪ್ರಯುಕ್ತ ಕೆಇಎ ನಿರ್ಬಂಧಗಳು ಮಧ್ಯಾಹ್ನದ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತವೆ. ಫೆಬ್ರವರಿ 5 ಮತ್ತು 8 ರ ಮಧ್ಯೆ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಬೆಂಗಳೂರು ವಿಮಾನ ನಿಲ್ದಾಣಗಳ ಹಾರಾಟ ಇರುವುದಿಲ್ಲ. ಈ ಸಮಯದಲ್ಲಿ ಹಾರಾಟ ಸಂಪೂರ್ಣ ಬಂದ್ ಆಗಿರುತ್ತದೆ.
ಫೆಬ್ರವರಿ 9 ಹಾಗೂ 10ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು. ಫೆಬ್ರವರಿ 10 ರಂದು ಮಧ್ಯಾಹ್ನ 2-4 ಗಂಟೆವರೆಗೆ ವಿಮಾನಗಳು ಹೆಚ್ಚುವರಿ ನಿಲುಗಡೆ ಹೊಂದಿರುತ್ತವೆ. ಫೆಬ್ರವರಿ 11 ಮತ್ತು 12 ರಂದು ಮಧ್ಯಾಹ್ನ 12-3 ಗಂಟವರೆಗೆ ವಿಮಾನ ಹಾರಾಟ ಸ್ಥಗಿತಗೊಳ್ಳಲಿವೆ.

ಏರ್ ಶೋ ಕಾರ್ಯಕ್ರಮದ ಕೊನೆಯ ಎರಡು ದಿನಗಳಾದ ಫೆಬ್ರವರಿ 13 ಮತ್ತು 14ರಂದು, ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 2 - 5 ಗಂಟೆವರೆಗೆ ವಿಮಾನ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳ್ಳಲಿವೆ ಎಂದು KIA ಮೂಲಗಳು ಮಾಹಿತಿ ನೀಡಿವೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಮಾನ ಹಾರಾಟ ಸಮಯ, ನವೀಕರಣ ಮಾಹಿತಿ, ವೇಳಾಪಟ್ಟಿಗಳನ್ನು ವಿಮಾನಯಾನ ಸಂಸ್ಥೆಗಳ ಜೊತೆಗೆ ಹಂಚಿಕೊಳ್ಳಬೇಕು. ಅಪ್ಡೇಟ್ ಮಾಡಬೇಕು ಎಂದು ಸೂಚಿಸಿದ್ದಾರೆ. ಪ್ರಯಾಣಿಕರು ಸಹ ಏರ್‌ಶೋ ಸಮಯದಲ್ಲಿ ಆದ ನಾಗರಿಕ ವಿಮಾನ ಹಾರಾಟ, ವೇಳಾಪಟ್ಟಿ ಗಮನಿಸಿ ಪ್ರಯಾಣವನ್ನು ಪ್ಲಾನ್ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರಕ್ಷಣಾ ಇಲಾಕೆ ಸಹಕಾರದಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಏರ್ ಶೋ ನಡೆಯುತ್ತಿದೆ. ದೇಶದ ರಕ್ಷಣಾ ಇಲಾಖೆಯ ಮಿಲಿಟರಿ ವಿಮಾನಗಳು, ಯುದ್ಧ ಹೆಲಿಕಾಪ್ಟರ್‌ಗಳು, ಉಪಕರಣಗಳು ಮತ್ತು ಹೊಸ ಯುಗದ ಏವಿಯಾನಿಕ್ಸ್ ತಯಾರಿಕೆಗೆ ಉದಯೋನ್ಮುಖ ಕೇಂದ್ರಗಳ ಪ್ರದರ್ಶನವು ಇಲ್ಲಿರುತ್ತದೆ. ಸಾವಿರಾರು ಜನರು ಈ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಐದು ದಿನ ವೈಮಾನಿಕ ಸಂಬಂಧಿ ಪ್ರದರ್ಶನ, ಸಭೆಗಳು ನಡೆಯಲಿವೆ..












Click it and Unblock the Notifications