Bengaluru 2nd Airport: ವಿಮಾನ ನಿಲ್ದಾಣದ ನಿರ್ಮಾಣದ ಬಗ್ಗೆ HD ಕುಮಾರಸ್ವಾಮಿಗೆ ನೆಲಮಂಗಲ ರೈತರ ಮನವಿ ಏನು?
Bengaluru 2nd Airport: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರ ಇದೀಗ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ನಾಲ್ಕು ಕಡೆ ಸ್ಥಳಗಳನ್ನು ಗುರುತಿಸಲಾಗಿದ್ದು, ಇನ್ನೂ ನಿರ್ಮಾಣ ಎಲ್ಲಿ ಎಂದು ನಿಗಧಿಯಾಗಿಲ್ಲ. ಆದರೆ, ನೆಲಮಂಗಲದಲ್ಲಿ ಸರ್ವೇ ಕಾರ್ಯಗಳು ನಡೆದಿವೆ ಎನ್ನುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಈ ಭಾಗದ ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.
ನೆಲಮಂಗಲದಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ನಿರ್ಮಾಣ ಆಗಲು ಬಿಡುವುದಿಲ್ಲ. ವಿಮಾನ ನಿಲ್ದಾಣ ನಿರ್ಮಾಣ ಆದ್ರೆ ನಾವು ಫಲವತ್ತಾ ಭೂಮಿಯನ್ನು ಕಳೆದುಕೊಳ್ಳುತ್ತೇವೆ ಎನ್ನವ ಆತಂಕದಲ್ಲಿ ಈ ಭಾಗದ ಜನರಿದ್ದಾರೆ. ಈಗಾಗಲೇ ಇಲ್ಲಿನ ರೈತರಿಗೆ ಕ್ಷೇತ್ರದ ಶಾಸಕರು ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮುಂದಾದರೆ ನಾನು ಶಾಸಕ ಸ್ಥಾನವನ್ನು ಮುಡುಪಾಗಿಟ್ಟರೂ ಹೋರಾಟಕ್ಕಿಳಿದು ರೈತರ ಪರ ನಿಲ್ಲುತ್ತೇನೆ. ಈಗಾಗಲೇ ಈ ಬಗ್ಗೆ ಸಿಎಂ ಬಳಿ ಮಾತನಾಡಿದ್ದು, ಇದಕ್ಕೆ ಅವರು ಸ್ಪಂದಿಸಿದ್ದಾರೆ ಅಂತಾ ಭರವಸೆ ನೀಡಿದ್ದರು.

ಮನವಿಯಲ್ಲಿ ಏನಿದೆ?: ಇನ್ನು ಇದೀಗ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡದಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರೈತರು ಮನವಿ ಸಲ್ಲಿಸಿದರು.
ಮಾಜಿ ಶಾಸಕ ಡಾ.ಶ್ರೀನಿವಾಸಮೂರ್ತಿ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ತಾಲೂಕಿನ ರೈತರಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಆತಂಕ ಮನೆ ಮಾಡಿದೆ. ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ತಿಳಿಸಿದರು.
ವಿಮಾನ ನಿಲ್ದಾಣವನ್ನು ನಿರ್ಮಿಸದಂತೆ ಹೋರಾಟಗಳು ನಡೆಯುತ್ತಿವೆ. ಆದ್ದರಿಂದ ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಅವಕಾಶ ನೀಡದಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ನೀಡಿದ್ದೇವೆ. ಅದಷ್ಟು ಬೇಗ ಕೇಂದ್ರದ ಗಮನಕ್ಕೆ ತಂದು ರೈತರ ಪರವಾಗಿ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿ ಹೆಸರಿನಲ್ಲಿ ರೈತರ ಬೆನ್ನು ಮುರಿಯುವುದು ಸರಿಯಲ್ಲ. ಕೃಷಿ ಭೂಮಿಯನ್ನು ಅಭಿವೃದ್ಧಿ ಮಾಡುವ ಯೋಜನೆಗಳನ್ನು ಜಾರಿಗೆ ತರಬೇಕು. ದಿನದಿಂದ ದಿನಕ್ಕೆ ರೈತರ ಸಂಖ್ಯೆ ಇಳಿಕೆಯಾಗುತ್ತಿದೆ. ಹೀಗೆ ಮುಂದುವರೆದರೆ ತಿನ್ನುವ ಅನ್ನಕ್ಕೂ ಪರದಾಡಬೇಕಾಗುತ್ತದೆ. ರೈತರ ಭೂಮಿಯನ್ನು ಬಿಟ್ಟು ಬರಡು ಭೂಮಿಗಳಲ್ಲಿ ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಹೇಳಿದರು.
ರಾಜ್ಯ ಸರ್ಕಾರದಿಂದ ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಸುಮಾರು 6000 ಹೆಕ್ಟೇರ್ ಪ್ರದೇಶದಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತು ಮಾಡಲಾಗಿತ್ತು. ಆದರೆ ಈ ಭಾಗದಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಇದೆ. ಅಲ್ಲದೆ, ಈ ಭಾಗದ ರೈತರು ಆತಂಕದಲ್ಲಿದ್ದರು. ಈ ಬಗ್ಗೆ ಇತ್ತೀಚೆಗಷ್ಟೇ ಪ್ರತಿಕ್ರಿಸಿದ ಶಾಸಕರು ರೈತರಿಗೆ ಅಭಯ ನೀಡುವಂತಹ ಕೆಲಸ ಮಾಡಿದ್ದರು.
ವಿಮಾನ ನಿಲ್ದಾಣದ ಅನೇಕ ಸಭೆಗಳಲ್ಲಿ ನಾನು ಕೂಡ ಭಾಗವಹಿಸಿದ್ದರು. ಈ ವೇಳೆ ನನ್ನ ಕ್ಷೇತ್ರಕ್ಕೆ ವಿಮಾನ ನಿಲ್ದಾಣ ಬೇಡ. ಇದರಿಂದ ರೈತರಿಗೆ ಅನ್ಯಾಯ ಆಗಲಿದೆ ಎಂಬುದಾಗಿ ನಾನು ಹೇಳಿದ್ದೇನೆ. ಇದಕ್ಕೆ ಸರ್ಕಾರ ಕೂಡ ಸ್ಪಂದನೆ ನೀಡಿದ್ದು, ನೆಲಮಂಗಲ ಭಾಗದಲ್ಲಿ ಮಾಡುವುದಿಲ್ಲ ಎಂಬ ಭರವಸೆ ನೀಡಿದೆ. ಒಂದು ವೇಳೆ ವಿಮಾನ ನಿಲ್ದಾಣ ಏನಾದ್ರೂ ನಿರ್ಮಾಣ ಮಾಡಲು ಮುಂದಾದರೆ, ನನ್ನ ಶಾಸಕ ಸ್ಥಾನ ಮುಡಿಪಾಗಿಟ್ಟು ಹೋರಾಟ ಮಾಡುತ್ತೇನೆ. ಕ್ಷೇತ್ರದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದರು.












Click it and Unblock the Notifications