BBMP: ಬೆಂಗಳೂರಲ್ಲಿ ಜಾಹೀರಾತು ಹಾಕುವವರೇ ಎಚ್ಚರ, ಪ್ರಹರಿ ವಾಹನ ಗಸ್ತು ತಿರುಗಲು ಸೂಚನೆ
ಬೆಂಗಳೂರು, ಜುಲೈ 29: ಬೃಹತ್ ಬೆಂಗಳೂರ ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ ಅಳವಡಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ ಗಳನ್ನು ಅಳವಡಿಸುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ. ಈ ನಿಟ್ಟಿನಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಎಲ್ಲಿಯೂ ಅನಧಿಕೃತ ಜಾಹೀರಾತುಗಳನ್ನು ಅಳವಡಿಸದಂತೆ ನಿಗಾ ವಹಿಸಲು ಹೇಳಿದರು.

ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್/ಬ್ಯಾನರ್ ಗಳನ್ನು ಪಾಲಿಕೆಯಿಂದ ತೆರವುಗೊಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ FIR ದಾಖಲಿಸಲಾಗುತ್ತಿದೆ. ಆದರೂ ಸಾರ್ವಜನಿಕ ಸ್ಥಳ, ರಸ್ತೆ ಬದಿ ಫ್ಲೆಕ್ಸ್ ಅಳವಡಿಸುವುದು ಮಾತ್ರ ನಿಯಂತ್ರಣವಾಗುತ್ತಿಲ್ಲ. ಆದ್ದರಿಂದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಜಾಹೀರಾತು ಅಳವಡಿಕೆಗೆ ನಿಯಂತ್ರಣ ತರಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ವಲಯವಾರು ಬರುವ ಫ್ರಿಂಟಿಂಗ್ ಯುನಿಟ್ಸ್ ಗಳ ಮೇಲೆ ಆಗಿಂದಾಗ್ಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಫ್ಲೆಕ್ಸ್/ಬ್ಯಾನರ್ ಗಳನ್ನು ಅಳವಡಿಸದಂತೆ ಎಚ್ಚರಿಕೆ ನೀಡಬೇಕು. ಜೊತೆಗೆ ಅನಧಿಕೃತ ಜಾಹೀರಾತುಗಳನ್ನು ಅಳವಡಿಸಿದಂತೆ ನಾಗರೀಕರಲ್ಲಿ ಹೆಚ್ಚು-ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು.
ರಾತ್ರಿ ವೇಳೆ ಪ್ರಹರಿ ವಾಹನಗಳ ಗಸ್ತಿಗೆ ಸೂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ರಾತ್ರಿ ವೇಳೆ ಹೆಚ್ಚಾಗಿ ಅಳವಡಿಸುತ್ತಾರೆ. ಈ ನಿಟ್ಟಿನಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಒಂದು ಪ್ರಹರಿ ವಾಹನ ನಿಯೋಜಿಸಿ ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗುವ ಮೂಲಕ ಪರಿಶೀಲನೆ ಹಾಗೂ ಅನಧಿಕೃತ ಫ್ಲೆಕ್ಸ್/ಬ್ಯಾನರ್ ಅಳವಡಿಸುವುದರ ಮೇಲೆ ನಿಗಾ ಇಡಿ ಎಂದು ತಾಕೀತು ಮಾಡಿದರು.

ರಸ್ತೆ ಗುಂಡಿ: ದೂರುಗಳಿಗೆ ಕೂಡಲೆ ಸ್ಪಂದಿಸಿ
ನಗರದಲ್ಲಿ ಕಾಲಮಿತಿಯೊಳಗಾಗಿ ಹಾಗೂ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ 'ರಸ್ತೆ ಗುಂಡಿ ಗಮನ' ಮೊಬೈಲ್ ಅಫ್ಲಿಕೇಷನ್ ಅನ್ನು ಅನಾವರಣಗೊಳಿಸಲಾಗಿದೆ. ಅದರ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ತಂತ್ರಾಂಶದ ಮೂಲಕ ನಾಗರೀಕರಿಂದ ಬರುವ ದೂರಗಳನ್ನು ತ್ವರಿತವಾಗಿ ಮುಚ್ಚಬೇಕು. ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದರು.
ಡೆಂಘೀ ನಿಯಂತ್ರಣಕ್ಕೆ ಸೂಕ್ತ ಕ್ರಮಕ್ಕೆ ನಿರ್ದೇಶನ
ನಗರದಲ್ಲಿ ಸರಾಸರಿ 200 ಡೆಂಘೀ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿ ವಾರ್ಡ್ನಲ್ಲಿ ಔಷಧಿ ಸಿಂಪಡಣೆಗಾಗಿ ಸ್ಪ್ರೇಯರ್ ಹಾಗೂ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದ್ದು, ಈ ಪೈಕಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲು ಸೂಚಿಸಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 30 ಆಕ್ಟೀವ್ ಹಾಟ್ ಸ್ಪಾಟ್ ಗಳಿದ್ದು, ಕೊಳಗೇರಿ ಹಾಗೂ ಬಡ ವರ್ಗದ ಪ್ರದೇಶದಲ್ಲಿ ನೀಮ್ ಆಯಿಲ್ ಹಾಗು ಡೀಟ್ ಕ್ರೀಮ್ ಅನ್ನು ಹಂಚಿಕೆ ಮಾಡಲಾಗುತ್ತಿದೆ. ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಸುವ ಸಲುವಾಗಿ ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಹೆಚ್ಚಾಗಿ ಫಾಗಿಂಗ್, ಔಷಧಿ ಸಿಂಪಡಣೆ ಮಾಡಬೇಕು. ಜೊತೆಗೆ ಹಾಟ್‌ಸ್ಪಾಟ್ ಸ್ಥಳಗಳಲ್ಲಿ ಡೆಂಘೀ ನಿಯಂತ್ರಣಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಶಿವಾನಂದ್ ಕಲ್ಕೆರೆ, ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಶಿವಾನಂದ್ ಕಪಾಶಿ, ರಮೇಶ್, ಕರೀಗೌಡ, ಪ್ರೀತಿ ಗೆಹ್ಲೋಟ್, ಸ್ನೇಹಲ್, ವಿನೋತ್ ಪ್ರಿಯಾ, ರಮ್ಯಾ, ಪ್ರಧಾನ ಅಭಿಯಂತರರಾದ ಡಾ. ಪ್ರಹ್ಲಾದ್, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications