ಒಂದು ಬೆಡ್ ರೂಂ ನಿರ್ಮಾಣ ಸ್ಥಗಿತಗೊಳಿಸಲಿದೆ ಬಿಡಿಎ
ಬೆಂಗಳೂರು, ಜೂ. 27 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ಒಂದು ಬೆಡ್ ರೂಂ ಮನೆಯನ್ನು ಖರೀದಿಸುವ ಜನರ ಆಸೆಗೆ ಹಿನ್ನಡೆ ಉಂಟಾಗಿದೆ. ಬಿಡಿಎ ತನ್ನ ಮುಂದಿನ ಹಂತ ಯೋಜನೆಗಳಲ್ಲಿ ಒಂದು ಬೆಡ್ ರೂಂ ಹೊಂದಿರುವ ಮನೆಗಳನ್ನು ನಿರ್ಮಿಸದೆ ಇರಲು ತೀರ್ಮಾನ ಕೈಗೊಂಡಿದೆ.
ಬಿಡಿಎ ಅಧಿಕಾರಿಗಳು ಹೇಳಿರುವ ಪ್ರಕಾರ ಎರಡು ಮತ್ತು ಮೂರು ಬೆಡ್ ರೂಂ ಮನೆಗಳಿಗೆ ಜನರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ, ಒಂದು ಬೆಡ್ ರೂಂ ಮನೆಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಮುಂದಿನ ಹಂತದ ಯೋಜನೆಗಳಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ.

ಸದ್ಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆಂಗೇರಿ ಬಳಿ ಐದು ಯೋಜನೆಗಳನ್ನು ಆರಂಭಿಸಲು ಮುಂದಾಗಿದೆ. ದೊಡ್ಡಬನಹಳ್ಳಿ, ವೈಟ್ ಫೀಲ್ಡ್, ಜೆ.ಪಿ.ನಗರ 9ನೇ ಹಂತ, ಕೊತ್ತನೂರು ಮತ್ತು ತಿಪ್ಪಸಂದ್ರದಲ್ಲಿ ಹಲವು ಯೋಜನೆಗಳನ್ನು ಆರಂಭಿಸಿದೆ. ಎಲ್ಲಾ ಕಡೆ ಎರಡು ಮತ್ತು ಮೂರು ಬೆಡ್ ರೂಂ ಮನೆಗಳಿಗೆ ಜನರು ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ಒಂದು ಬೆಡ್ ರೂಂ ಹೊಂದಿರುವ ಮನೆ ನಿರ್ಮಾಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. [ಬಿಡಿಎ ಕಚೇರಿಗೆ ಹೋಗಲು ಕೆಲವು ನಿಯಮಗಳು]
ಸದ್ಯ ಬಿಡಿಎ ಆರಂಭಿಸಿರುವ ಯೋಜನೆಗಳಲ್ಲಿ ಒಂದು ಬೆಡ್ ರೂಂ ಹೊಂದಿರುವ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಪ್ರಾಧಿಕಾರ ಕೈಗೊಂಡಿರುವ ಯೋಜನೆಗಳು ಪೂರ್ಣಗೊಂಡ ಬಳಿಕ ಹೊಸ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಆಗ, ಎರಡು ಮತ್ತು ಮೂರು ಬೆಡ್ ರೂಂ ಹೊಂದಿರುವ ಮನೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. [ಬಿಡಿಎ ಸೈಟು 23 ಲಕ್ಷ ರೂ- ಖರೀದಿ ಆಸೆ ಬಿಟ್ಬಿಡಿ]
ಈಗಾಗಲೇ ಬಿಡಿಎ ನಿರ್ಮಿಸಿರುವ 30,000 ಮನೆಗಳಲ್ಲಿ ಏಳು ಸಾವಿರ ಒಂದು ಬೆಡ್ ರೂಂ ಮನೆಗಳಿವೆ. ಈ ಮನೆಗಳಲ್ಲಿ 4,200 ಮನೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಡಿಸೆಂಬರ್ 2013ರಲ್ಲಿ ಲಾಟರಿ ಮೂಲಕ ಇವುಗಳಲ್ಲಿ 3000 ಮನೆಗಳನ್ನು ಹಂಚಿಕೆ ಮಾಡಲಾಗಿದೆ. [ಬಿಡಿಎ ವೆಬ್ ಸೈಟ್ ನೋಡಿ]
ಆರ್ಥಿಕವಾಗಿ ಹಿಂದುಳಿದವ ವರ್ಗಗಳಿಗೆ ಅನುಕೂಲವಾಗಲಿ ಎಂದು ಬಿಡಿಎ ಒಂದು ಬೆಡ್ ರೂಂ ಮನೆಗಳನ್ನು ನಿರ್ಮಾಣ ಮಾಡುತ್ತಿತ್ತು. ಸದ್ಯ ನಿರ್ಮಿಸಿರುವ ಮನೆಗಳ ಮಾರಾಟಕ್ಕೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಆದರೆ, ಮುಂದಿನ ಯೋಜನೆಗಳಲ್ಲಿ ಒಂದು ಬೆಡ್ ರೂಂ ಮನೆ ನಿರ್ಮಾಣ ಮಾಡದಿರಲು ಬಿಡಿಎ ನಿರ್ಧರಿಸಿದೆ.












Click it and Unblock the Notifications