ಎಸಿಬಿ ದಾಳಿಯಲ್ಲಿ ಬಿಡಿಎ ಅಕ್ರಮ ಬಯಲು: ಬಂಧನದ ಭೀತಿಯಲ್ಲಿ ಬಿಡಿಎ ಭ್ರಷ್ಟ ಅಧಿಕಾರಿಗಳು!
ಬೆಂಗಳೂರು, ಡಿ. 06: ಬಿಡಿಎ ನಿವೇಶನ ಮಾರಿದರೂ ಸರ್ಕಾರಕ್ಕೆ ಹಣ ಪಾವತಿಸದೇ ಅಧಿಕಾರಿಗಳು ಜೇಬಿಗೆ ಇಳಿಸಿದ್ದಾರೆ. ಯಾರಿಗೋ ಮಂಜೂರು ಮಾಡಿದ ನಿವೇಶನವನ್ನು ಇನ್ಯಾರಿಗೋ ಮಾರಾಟ ಮಾಡಿ ವಂಚನೆ ಮಾಡಿದ್ದಾರೆ. ಏಜೆಂಟರ ಮೂಲಕ ಬಂದು ಲಂಚ ಕೊಟ್ಟವರಿಗೆ ಮನಸೋ ಇಚ್ಛೆ ನಿವೇಶನಗಳ ಹಂಚಿಕೆಯಾಗಿದೆ. ಪ್ರಾಮಾಣಿಕವಾಗಿ ಅರ್ಜಿ ಹಾಕಿ ಹಣ ಪಾವತಿ ಮಾಡಿರುವರಿಗೆ ಮೂರು ನಾಮ!
ಸರ್ಕಾರದ ಅಧಿಕೃತ ರಿಯಲ್ ಎಸ್ಟೇಟ್ ಕಂಪನಿಯಂತಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕರ್ಮಕಾಂಡದ ಕಥೆಯಿದು. ಬಿಡಿಎ ನಿವೇಶನಗಳ ಅಕ್ರಮ ಪರಭಾರೆ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿ ಸಾವಿರಾರು ಪುಟಗಳ ದಾಖಲೆಗಳನ್ನು ಜಪ್ತಿ ಮಾಡಿತ್ತು. ಇದೀಗ ಅಕ್ರಮದ ತನಿಖೆ ಸಂಬಂಧ ಬಿಡಿಎ ನಾಲ್ವರು ಉಪ ಕಾರ್ಯದರ್ಶಿಗಳು ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ. ಈ ತನಿಖೆಯಲ್ಲಿ ಭಾರೀ ಅಕ್ರಮಗಳು ಬಯಲಾಗಿದ್ದು, ಬಿಡಿಎ ಅಧಿಕಾರಿಗಳ ದನ ದಾಹಕ್ಕೆ ನಿವೇಶನಗಳನ್ನು ಮನಸೋ ಇಚ್ಚೆ ಪರಭಾರೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮವನ್ನು ಬಿಡಿಎ ಕೈಗೆತ್ತಿಕೊಳ್ಳುತ್ತಿದ್ದಂತೆ ಬಿಡಿಎ ಅಧಿಕಾರಿಗಳಿಗೆ ಮತ್ತು ಏಜೆಂಟರಿಗೆ ಬಂಧನದ ಭೀತಿ ಶುರುವಾಗಿದೆ.
ಸ್ವತಃ ನಾವೇ ಜಾಮೀನು ಕೇಳಿಕೊಂಡು ನ್ಯಾಯಾಲಯದ ಮೊರೆ ಹೋದರೆ, ಮುಚ್ಚಿಟ್ಟಿರುವ ತಪ್ಪುಗಳನ್ನು ಮೇಲ್ನೋಟಕ್ಕೆ ಒಪ್ಪಿಕೊಂಡಂತೆ ಆಗುತ್ತದೆ. ಜಾಮೀನು ಪಡೆಯದಿದ್ದರೆ ಜೈಲಿಗೆ ಹೋಗಬೇಕಾದೀತೇನೋ ಎಂಬ ಗೊಂದಲಲ್ಲಿ ಬಿಡಿಎ ಅಧಿಕಾರಿಗಳು ಒದ್ದಾಡುತ್ತಿದ್ದಾರೆ. ಇನ್ನು ಬಿಡಿಎ ನಿವೇಶನಗಳ ಅಕ್ರಮ ಪರಭಾರೆ, ಅಧಿಕಾರ ದುರುಪಯೋಗ ಸಂಬಂಧ ಬಿಡಿಎ ಭೂ ಸ್ವಾಧೀನ ವಿಭಾಗದ ನಾಲ್ವರು ಉಪ ಕಾರ್ಯದರ್ಶಿಗಳ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಇದರ ಜತೆಗೆ ಇತರೆ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಎಂದು ಎಸಿಬಿ ಎಫ್ಐಆರ್ ನಲ್ಲಿ ಉಲ್ಲೇಖಿಸಿರುವುದು ಬಿಡಿಎ ಅಧಿಕಾರಿಗಳಲ್ಲಿ ಭೀತಿ ಶುರುವಾಗಿದೆ. ಮಾಡಿರುವ ಅಕ್ರಮಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಸಾಕ್ಷಿ ಸಿಗದಂತೆ ತೆರೆ ಮರೆಯಲ್ಲಿ ಆರೋಪಿತ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ.

ಬಿಡಿಎ ಸ್ವತ್ತುಗಳ ಅಕ್ರಮ ಪರಭಾರೆ
ಬಿಡಿಎ ನಿವೇಶನಗಳ ಅಕ್ರಮ ಪರಭಾರೆ ಅಕ್ರಮ ಸಂಬಂಧ ಎಸಿಬಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 7(a), 7a, 8,12,13(1)a,13(2) ಹಾಗೂ ಪಿಸಿ ಆಕ್ಟ್ 1988 ಎಫ್ಐಆರ್ ದಾಖಲಿಸಿದೆ. ಎಸಿಬಿ ಅಧಿಕಾರಿಗಳ ಒಂದು ತಂಡವೇ ಅಕ್ರಮದ ಜಾಡು ಹಿಡಿಯುವಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಾನೂನು ಬಾಹಿರವಾಗಿ ನಿವೇಶನಗಳನ್ನು ಪರಭಾರೆ ಮಾಡಿದ್ದಾರೆ. ಹಣದಾಸೆಗೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಮನಸಿಗೆ ಬಂದಂತೆ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ನಿವೇಶನ ಹಂಚಕೆ ವೇಳೆ ಸಿಎ ರಿಜಿಸ್ಟರ್ ನಲ್ಲಿ ಕಾನೂನು ಬಾಹಿರವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಅಕ್ರಮ ಎಸಗಿರುವುದು ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಾತ್ರವಲ್ಲ ತಮ್ಮ ಮನಸಿಗೆ ಬಂದವರಿಗೆ ನಿವೇಶನ ಹಂಚಿಕೆ ಮಾಡಿ ಅನುಕೂಲ ಮಾಡಿಕೊಟ್ಟಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಬಿಡಿಎ ಸ್ವತ್ತುಗಳನ್ನು ಅಕ್ರಮವಾಗಿ ಪರಭಾರೆ ಮಾಡಿದ್ದಾರೆ.

ಬಿಡಿಎ ನಿವೇಶನಗಳನ್ನು ಮಂಜೂರು ಮಾಡುವ ಸಂಬಂಧ ಸೇಲ್ ಡೀಡ್, ಅಬ್ಸಲೂಟ್ ಸೇಲ್ ಡೀಡ್ ಗಳ ಬಗ್ಗೆ ಉಲ್ಲೇಖಿಸಿರುವ ವಿವರಗಳು ತಪ್ಪಾಗಿದ್ದು, ಬಿಡಿಎ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಅಕ್ರಮ ಎಸಗಿ ಮುಚ್ಚಿ ಹಾಕಿರುವುದಕ್ಕೆ ಸಂಬಂಧಿಸಿದಂತೆ ಎಸಿಬಿ ದಾಖಲೆಗಳನ್ನು ಸಂಗ್ರಹಿಸಿದೆ. ಮಾತ್ರವಲ್ಲಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿ ಅನಧಿಕೃವಾಗಿ ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ತಮಗೆ ಬೇಕಾದವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಖಜಾನ್ ಖಾಲಿ ಮಾಡಿದ ಭೂಪರು
ನಿವೇಶನ ಮಂಜೂರಾತಿ ಸಂಬಂಧ ಸಾರ್ವಜನಿಕರಿಂದ ಬಿಡಿಎ ಅಧಿಕಾರಿಗಳು ಸಂಗ್ರಹಿಸಿರುವ ಹಣವನ್ನೂ ಲಪಟಾಯಿಸಿ ಸರ್ಕಾರದ ಖಜಾನೆಯನ್ನೇ ಖಾಲಿ ಮಾಡಿದ್ದಾರೆ. ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ. ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಲಾಗದೆ. ಈ ಮೂಲಕ ಬಿಡಿಎ ಹಾಗೂ ಸರ್ಕಾರಕ್ಕೆ ನಷ್ಟವುಂಟು ಮಾಡಲಾಗಿದೆ. ನಿವೇಶನ ಮರು ಮಂಜೂರಾತಿಯಲ್ಲಿ ಕೂಡ ಲೋಪಗಳು ಕಂಡು ಬಂದಿದ್ದು, ಬದಲಿ ನಿವೇಶನ ಮಂಜೂರಾತಿಯಲ್ಲೂ ಭಾರೀ ಅಕ್ರಮ ಎಸಗಿರುವುದು ಎಸಿಬಿ ತನಿಖೆಯಲ್ಲಿ ಪತ್ತೆಯಾಗಿದೆ. ಬಿಡಿಎ ಅಧಿಕಾರಿಗಳು ಅಧಿಕಾರ ದುರುಪಯೋಗ, ನಿಯಮಗಳ ಉಲ್ಲಂಘನೆ, ಸ್ವ ಹಿತಾಸಕ್ತಿಗಾಗಿ ಬಿಡಿಎ ನಿವೇಶನಗಳ ಅಕ್ರಮ ಪರಭಾರೆ ಸೇರಿದಂತೆ ಅನೇಕ ಅಕ್ರಮಗಳು ಕಂಡು ಬಂದಿದ್ದು, ಇದೀಗ ಅಧಿಕಾರಿಗಳ ಚಳಿ ಬಿಡಿಸಲು ಎಸಿಬಿ ಪೊಲೀಸರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಬಿಡಿಎ ಅಧಿಕಾರಿಗಳ ಬಂಧನದ ಸರಣಿ ಶುರುವಾಗಲಿದೆ.












Click it and Unblock the Notifications