BDA: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ 145ಕ್ಕೂ ಅಧಿಕ ಬಿಡಿಎ ಸೈಟು ಹರಾಜು
ಬೆಂಗಳೂರು, ಮಾರ್ಚ್ 05: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೈಟು ಕೊಳ್ಳಬೇಕು ಎಂದು ಆಲೋಚಿಸುತ್ತಿರುವ ಜನರಿಗೆ ಪ್ರಮುಖವಾದ ಮಾಹಿತಿ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಪ್ರಮುಖ ಬಡಾವಣೆಳಲ್ಲಿ ಸೈಟುಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿದೆ. ಮಾರ್ಚ್ 10ರ ಬಳಿಕ ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ವಿವಿಧ ಬಡಾವಣೆಯಲ್ಲಿನ ಸೈಟುಗಳ ಹಂಚಿಕೆಗೆ ಬಿಡಿಎ ತಯಾರಿ ನಡೆಸಿದೆ.
ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ 145ಕ್ಕೂ ಅಧಿಕ ಸೈಟುಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಹೆಬ್ಬಾಳ ಸಮೀಪದ ಭೂಪಸಂದ್ರ, ನಾಗರಬಾವಿ 2ನೇ ಹಂತ, ಬನಶಂಕರಿ 6ನೇ ಸ್ಟೇಜ್, ಸರ್. ಎಂ. ವಿಶ್ವೇಶ್ವರಯ್ಯ ಲೇಔಟ್, ಹೆಚ್‌ಎಸ್‌ಆರ್ ಲೇಔಟ್ ಮುಂತಾದ ಪ್ರದೇಶದಲ್ಲಿ ಸೈಟುಗಳನ್ನು ಮಾರಾಟ ಮಾಡಲಾಗುತ್ತದೆ.

ಅಧಿಕಾರಿಗಳು ಹೇಳುವಂತೆ ವಿವಿಧ ಪ್ರದೇಶದ ಮೂಲೆ ನಿವೇಶನಗಳು, ಮಧ್ಯಂತರ ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಈ ಕುರಿತು ಮಾರ್ಚ್ 10ರ ಬಳಿಕ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ, ಆಗ ಸೈಟುಗಳ ನಿಖರ ಪ್ರದೇಶದ ಮಾಹಿತಿ ಸಿಗಲಿದೆ.
ಸೈಟುಗಳ ದರಗಳು ಎಷ್ಟಿರಲಿವೆ?; ಈಗಾಗಲೇ ಬಿಡಿಎ ಹಲವು ಬಾರಿ ನಗರದ ವಿವಿಧ ಪ್ರದೇಶಗಳಲ್ಲಿ ಮೂಲೆ ನಿವೇಶನಗಳು, ಮಧ್ಯಂತರ ನಿವೇಶನಗಳು ಮತ್ತು ಇತರೆ ಹರಾಜು ಮಾಡಬಹುದಾದ ನಿವೇಶನಗಳನ್ನು ವಿಲೇವಾರಿ ನಿಯಮಾವಳಿ 1984ರ ಅನುಸಾರ ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಿದೆ.
ಬಡಾವಣೆಗಳ ಸ್ಥಳದ ಮೇಲೆ ಸೈಟುಗಳ ದರಗಳು ನಿಗದಿಯಾಗುತ್ತದೆ. ಹರಾಜಿನಲ್ಲಿ ಹಂಚಿಕೆ ಮಾಡುವ ಸೈಟುಗಳಿಗೆ ಬಿಡಿಎ ಮೊದಲು ಪ್ರಾಥಮಿಕ ದರವನ್ನು ನಿಗದಿ ಮಾಡುತ್ತದೆ. ಬಳಿಕ ಹರಾಜಿನಲ್ಲಿ ಸೈಟುಗಳ ದರಗಳು ಹೆಚ್ಚಾಗಲಿವೆ.
ಹರಾಜು ಪ್ರಕ್ರಿಯೆ ಉದಾಹರಣೆಗೆ ಅಂಜನಾಪುರ ಟೌನ್‌ಶಿಪ್‌ನಲ್ಲಿ ಪ್ರತಿ ಚದರ ಮೀಟರ್‌ಗೆ 70,200 ರೂ. ದರವನ್ನು ನಿಗದಿ ಮಾಡಲಾಗುತ್ತದೆ. ಕೋರಮಂಗಲ 4ನೇ ಬ್ಲಾಕ್‌ನಲ್ಲಿ 2 ಲಕ್ಷ ಪ್ರತಿ ಚದರ ಮೀಟರ್‌ಗೆ ನಿಗದಿಯಾಗಿರುತ್ತದೆ.
ಹರಾಜಿನ ವೇಳೆ ಪ್ರತಿ ಚ.ಮೀ.ಗೆ ರೂ. 500ಗಳ ಗುಣಕಗಳಲ್ಲಿ ಬಿಡ್ ದರದ ಕನಿಷ್ಠ ಏರಿಕೆಯಾಗುತ್ತದೆ. ಹರಾಜಿನಲ್ಲಿ ಪಾಲ್ಗೊಂಡ ಯಶಸ್ವಿ ಬಿಡ್ಡುದಾರರಿಗೆ ಹರಾಜಾದ ನಿವೇಶನಗಳನ್ನು 'ಅವು ಹೇಗಿದೆಯೋ ಅದೇ ಸ್ಥಿತಿ'ಯಲ್ಲಿ ಹಂಚಲಾಗುತ್ತದೆ ಎಂದು ಬಿಡಿಎ ಹೇಳಿದೆ.
ಬಿಡಿಎ ಇ-ಹರಾಜಿನಲ್ಲಿ ಪಾಲ್ಗೊಳ್ಳುವ ಜನರಿಗೆ ಮೂಲ ಠೇವಣಿಯನ್ನು ನಿಗದಿ ಮಾಡಿರುತ್ತದೆ. ಬಿಡಿಎ ಅಧಿಸೂಚನೆಯಲ್ಲಿ ಸೂಚಿಸಿರುವ ಬ್ಯಾಂಕ್‌ಗಳಲ್ಲಿ ಠೇವಣಿಯನ್ನು ಪಾವತಿ ಮಾಡಿ, ನಿಯಮಗಳ ಅನ್ವಯ ಹರಾಜಿನಲ್ಲಿ ಪಾಲ್ಗೊಳ್ಳಬಹುದು.
ಈಗಾಗಲೇ ಹಲವು ಬಾರಿ ಬಿಡಿಎ ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಿದೆ. ಪ್ರಾಧಿಕಾರಕ್ಕೆ ಆದಾಯ ಸಂಗ್ರಹಣೆ ಮಾಡಿದೆ. ಈ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ಹಂಚಿಕೆ ಮಾಡುವುದಿಲ್ಲ. ಅದು ಹೇಗಿದೆಯೋ ಅದೇ ಮಾದರಿಯಲ್ಲಿ ಹಂಚಿಕೆ ಮಾಡಲಾಗುತ್ತದೆ.
ಬಿಡಿಎ ನಡೆಸುವ ಫ್ಲಾಟ್ ಮೇಳ, ವಿಲ್ಲಾ ಮೇಳ ಮತ್ತು ನಿವೇಶನಗಳ ಹರಾಜಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಈಗ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಸೈಟುಗಳನ್ನು ಕೊಳ್ಳುವ ಆಸಕ್ತಿ ಇದ್ದರೆ ಬಿಡಿಎ ಇ-ಹರಾಜಿನಲ್ಲಿ ಪಾಲ್ಗೊಳ್ಳಿ.
ಇ-ಹರಾಜು ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಬಿಡಿಎ ನಿಗದಿ ಮಾಡಿರುವ ನೋಂದಣಿ ಶುಲ್ಕ ಮತ್ತು ನಿವೇಶನದ ಕುರಿತು ಇತರ ಮಾಹಿತಿಯನ್ನು ಜನರು ಪಡೆಯಲು ಬಿಡಿಎ ವೆಬ್‌ಸೈಟ್‌ಗೆ ಭೇಟಿ ನೀಡಿ.












Click it and Unblock the Notifications