ಕೋವಿಡ್ ಕೇರ್ ಸೆಂಟರ್ ಮತ್ತೆ ತೆರೆಯಲಿದೆ ಬಿಬಿಎಂಪಿ
ಬೆಂಗಳೂರು, ಜನವರಿ 05; ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಕೇರ್ ಸೆಂಟರ್‌ಗಳನ್ನು ಮತ್ತೆ ತೆರೆಯಲಿದೆ.
ಬೆಂಗಳೂರಿನಲ್ಲಿ ಹೊಸ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಮಂಗಳವಾರ ಒಂದೇ ದಿನ ಬೆಂಗಳೂರು ನಗರದಲ್ಲಿ 3048 ಹೊಸ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಸೋಂಕು ಹರಡುವಿಕೆ ತಡೆಗೆ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿದೆ.
ತಾಂತ್ರಿಕ ಸಲಹಾ ಸಮಿತಿ ಸಹ ಕೋವಿಡ್ ಕೇರ್ ಸೆಂಟರ್ ಮತ್ತೆ ಆರಂಭಿಸಬೇಕು ಎಂದು ಸಲಹೆ ನೀಡಿತ್ತು. ಈ ಹಿನ್ನಲೆಯಲ್ಲಿ ಬಿಬಿಎಂಪಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕೋವಿಡ್ ಕೇರ್ ಸೆಂಟರ್ ಪುನಃ ಆರಂಭಿಸಲಿದೆ.

ಮಂಗಳವಾರ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್‌ನಲ್ಲಿರುವ ಕೆಂಪೇಗೌಡ ಕಮ್ಯುನಿಟಿ ಹಾಲ್‌ನ ಕೋವಿಡ್ ಕೇರ್ ಸೆಂಟರ್ ವೀಕ್ಷಣೆ ಮಾಡಿದರು. ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಪ್ರಸ್ತುತ ಬೆಂಗಳೂರು ನಗರದಲ್ಲಿ 90 ಬೆಡ್‌ಗಳನ್ನು ಹೊಂದಿರುವ ಎರಡು ಕೋವಿಡ್ ಕೇರ್ ಸೆಂಟರ್‌ಗಳು ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿವೆ. ಇವುಗಳಲ್ಲಿ 22 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈಗ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋವಿಡ್ ಕೇರ್ ಸೆಂಟರ್ ಮತ್ತೆ ತೆರೆಯಲಾಗುತ್ತಿದೆ.
ಬಿಬಿಎಂಪಿಯ ಆರೋಗ್ಯಾಧಿಕಾರಿ ಬಾಲಸುಂದರ್ ಮಾತನಾಡಿ,"ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆಯನ್ನು ಸಿದ್ಧಗೊಳಿಸಿಕೊಳ್ಳಲಾಗುತ್ತದೆ. ಅಗತ್ಯವಿದ್ದಾಗ ಅವುಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ" ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೋವಿಡ್ 2ನೇ ಅಲೆಗೆ ಹೋಲಿಕೆ ಮಾಡಿದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೇರ್ ಸೆಂಟರ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಅಧಿಕವಾದರೆ ಇದು ಸಹಾಯಕವಾಗಲಿದೆ.
ಎಲ್ಲರೂ ಸಾಮಾನ್ಯವಾಗಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಆದ್ದರಿಂದ ಹೋಂ ಐಸೋಲೇಷನ್‌ನಲ್ಲಿಯೇ ಗುಣಮುಖಗೊಳ್ಳುತ್ತಿದ್ದಾರೆ. ಆದರೆ ತುರ್ತು ಸಂದರ್ಭಕ್ಕೆ ಮತ್ತು ಹೋಂ ಐಸೋಲೇಷನ್ ವ್ಯವಸ್ಥೆ ಇಲ್ಲದ ಜನರಿಗಾಗಿ ಕೋವಿಡ್ ಕೇರ್ ಸೆಂಟರ್ ಪುನಃ ಆರಂಭಿಸಲಾಗುತ್ತಿದೆ.
ಮಾರ್ಗಸೂಚಿ ಪ್ರಕಟ; ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಬುಧವಾರ ರಾತ್ರಿ 10 ಗಂಟೆಯಿಂದ ಇದು ಜಾರಿಗೆ ಬರಲಿದೆ.
ಮಾರ್ಗಸೂಚಿಗಳ ಅನ್ವಯ ಈಗಾಗಲೇ ಜಾರಿಯಲ್ಲಿರುವ ನೈಟ್ ಕರ್ಫ್ಯೂ ವಿಸ್ತರಣೆಯಾಗಲಿದೆ. ಮತ್ತೆ ವಾರಾಂತ್ಯದ ಕರ್ಫ್ಯೂ ಜಾರಿಗೆ ಬರಲಿದೆ. ಶಾಲೆಗಳ ಭೌತಿಕ ತರಗತಿ ಬೆಂಗಳೂರಿನಲ್ಲಿ ರದ್ದಾಗಿದೆ. ಚಿತ್ರಮಂದಿರದಲ್ಲಿ ಶೇ 50ರಷ್ಟು ಸೀಟು ಭರ್ತಿ ನಿಯಮ ಮತ್ತೆ ಜಾರಿಗೆ ಬರಲಿದೆ.
ಬೆಂಗಳೂರಿನಲ್ಲಿ ಗುರುವಾರದಿಂದ ಶಾಲೆಗಳ ಭೌತಿಕ ತರಗತಿ ಬಂದ್ ಆಗಲಿದೆ. 10, 11 ಮತ್ತು 12ನೇ ತರಗತಿಗಳು ಮಾತ್ರ ಭೌತಿಕವಾಗಿ ನಡೆಯಲಿದ್ದು, 1 ರಿಂದ 9ನೇ ತರಗತಿ ಮಕ್ಕಳಿಗೆ ಮತ್ತೆ ಆನ್‌ಲೈನ್ ಮೂಲಕ ತರಗತಿ ನಡೆಸಲಾಗುತ್ತದೆ.
ಮಾರ್ಗಸೂಚಿ ಪ್ರಕಾರ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ, ನಮ್ಮ ಮೆಟ್ರೋ ರೈಲಿನಲ್ಲಿ ನಿಂತು ಪ್ರಯಾಣ ಮಾಡುವಂತಿಲ್ಲ. ಪೂರ್ಣ ಸೀಟುಗಳ ಭರ್ತಿಗೆ ಅವಕಾಶ ನೀಡಿಲ್ಲ. ವಾರದ ದಿನಗಳಲ್ಲಿ ಮೆಟ್ರೋ ಸಂಚಾರ ನಡೆಸಲಿದ್ದು, ಶನಿವಾರ, ಭಾನುವಾರ ರೈಲು ಸಂಚಾರದ ಕುರಿತು ಇನ್ನೂ ಮಾರ್ಗಸೂಚಿ ಪ್ರಕಟವಾಗಿಲ್ಲ.












Click it and Unblock the Notifications