• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ, ಟೆಲಿಕಾಂ ಸಂಸ್ಥೆಗಳ ಮೇಲಾಟ: ಇಂಟರ್ನೆಟ್ ನಂಬಿಕೊಂಡ ಉದ್ಯಮಗಳು ಹೈರಾಣ

|

ಸಿಲಿಕಾನ್‌ ಸಿಟಿಯಲ್ಲಿ ಸ್ಥಳೀಯ ಆಡಳಿತ ಹಾಗೂ ಅಂತರ್ಜಾಲ ಸೇವೆ ನೀಡುವ ಕಂಪನಿಗಳ ನಡುವಿನ ಹಗ್ಗ- ಜಗ್ಗಾಟಕ್ಕೆ ಗ್ರಾಹಕರು ಹೈರಾಣಾಗಿ ಹೋಗಿದ್ದಾರೆ. ಮಾಫಿಯಾ ರೂಪದಲ್ಲಿ ಬದಲಾಗಿದ್ದ ಕೇಬಲ್ ಅಳವಡಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಬಿಎಂಪಿ ತೆಗೆದುಕೊಳ್ಳುತ್ತಿರುವ ಕ್ರಮಗಳು ಅಂತಿಮವಾಗಿ ಅಂತರ್ಜಾಲ ಸೇವೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ಬಂದು ನಿಂತಿದೆ. ಇದರಿಂದಾಗಿ ಅಂತರ್ಜಾಲವನ್ನೇ ನಂಬಿಕೊಂಡ ಉದ್ಯಮಗಳು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಿವೆ.

ಅಂತರ್ಜಾಲ ಸೇವೆ ನೀಡುವ ಕಂಪನಿಗಳಾಗಲೀ, ಸ್ಥಳೀಯ ಆಡಳಿತವಾಗಲಿ ಇದಕ್ಕೊಂದು ತಾರ್ಕಿಕ ಪರ್ಯಾಯ ರೂಪಿಸುವಲ್ಲಿ ಸೋಲುತ್ತಿವೆ. ಪ್ರತಿ ಬಾರಿ ಬಿಬಿಎಂಪಿಯಲ್ಲಿ ಹೊಸ ಆಡಳಿತಗಾರರು ಬರುತ್ತಿದ್ದಂತೆ ಅವರ ಕಣ್ಣು ಎಲ್ಲೆಂದರಲ್ಲಿ ಕಣ್ಣಿಗೆ ಬೀಳುವ ಕೇಬಲ್‌ ಲೈನ್‌ಗಳ ಮೇಲೆ ಬೀಳುತ್ತದೆ.

ವೈಫೈ ಕಾಲಿಂಗ್ ಸೇವೆ ಮೂಲಕ ಕಾಲ್‌ ಡ್ರಾಪ್‌ಗೆ ಅಂತ್ಯ ಹಾಡಿದ ಏರ್‌ಟೆಲ್‌

ಅಧಿಕಾರಿಗಳು ಎಳೆನೀರು ಕಟ್‌ ಮಾಡಿದಂತೆ ಕೇಬಲ್‌ಗಳನ್ನು ತುಂಡರಿಸಿಲು ಆರಂಭಿಸುತ್ತಾರೆ. ಇದರಿಂದಾಗಿ ಅನಿಮಿಯತ ಅಂತರ್ಜಾಲ ಸೇವೆ ಕೆಲವು ಪ್ರದೇಶಗಳಲ್ಲಿ ದಿನಗಟ್ಟಲೆ ಸ್ಥಗಿತಗೊಳ್ಳುತ್ತದೆ. ಅಂತಿಮವಾಗಿ ಇದೇ ಸೇವೆಯನ್ನು ನಂಬಿಕೊಂಡ ಉದ್ಯಮಗಳು ಹೈರಾಣಾಗುತ್ತಿವೆ.

ಬಿಬಿಎಂಪಿ ಮತ್ತು ಇಂಟರ್ನೆಟ್ ಸೇವೆ ನೀಡುವ ಸಂಸ್ಥೆಗಳ ನಡುವಿನ ಕಿತ್ತಾಟ ಇಂದು ನಿನ್ನೆಯದಲ್ಲ. ಈ ಸಮಸ್ಯೆಗೆ ಹಿಂದೆಯೂ ಪರಿಹಾರ ಸಿಕ್ಕಿರಲಿಲ್ಲ, ಮುಂದೆಯೂ ಸಿಗುವುದು ಡೌಟು. ಇದಕ್ಕೆ ಕಾರಣ, ಈ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಹಾಡಬೇಕು ಎನ್ನುವ ಇಚ್ಚಾಶಕ್ತಿ ಇಬ್ಬರಿಗೂ ಇದ್ದಂತೆ ಕಾಣಿಸುತ್ತಿಲ್ಲ.

ಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಹೊಸ ತಂತ್ರ

ಬಿಬಿಎಂಪಿ, ತನ್ನ ಕಾನೂನಿನ ಪ್ರಕಾರ ಓವರ್ ಹೆಡ್ ಕೇಬಲ್ ಹಾಕಲು ಅನುಮತಿ ನೀಡುವುದಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ. ಆದರೆ ಅವು ಕಾಗದಕ್ಕೆ ಮಾತ್ರವೇ ಸೀಮಿತವಾಗಿವೆ. ಕೇಬಲ್‌ ಎಳೆಯುವ, ಜನರಿಗೆ ಅಂತರ್ಜಾಲ ಸೇವೆ ನೀಡುವ ಕೈಂಕರ್ಯವನ್ನು ಕಡಿಮೆ ವೆಚ್ಚದಲ್ಲಿ, ಅಡ್ದದಾರಿಯಲ್ಲಿ ಇಂಟರ್ನೆಟ್‌ ಸರ್ವಿಸ್‌ ಪ್ರೊವೈಡರ್‌ಗಳು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಬಿಬಿಎಂಪಿ ಆಯುಕ್ತ ಬಿ. ಎಚ್‌. ಅನಿಲ್‌ ಕುಮಾರ್‌

ಬಿಬಿಎಂಪಿ ಆಯುಕ್ತ ಬಿ. ಎಚ್‌. ಅನಿಲ್‌ ಕುಮಾರ್‌

ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಬಿಎಂಪಿ ಆಯುಕ್ತ ಬಿ. ಎಚ್‌. ಅನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆಯೊಂದು ನಡೆದಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಓಎಫ್‌ಸಿ ಕೇಬಲ್‌ ಅಳವಡಿಕೆಗೆ ನೀಡಿರುವ ಅನುಮತಿಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ನಿರ್ಧಾರಕ್ಕೆ ಬರಲಾಯಿತು. ಇದರಂತೆ ಓಎಫ್‌ಸಿ ಅಳವಡಿಕೆಗೆ ನೀಡಲಾಗಿದ್ದ ಎಲ್ಲಾ ಅನುಮತಿಗಳನ್ನು ತಕ್ಷಣದಿಂದ ರದ್ದುಗೊಳಿಸಲಾಗಿತ್ತು. ಟೆಲಿಕಾಂ ಸಂಸ್ಥೆಗಳು, ಹೊಸದಾಗಿ ಅರ್ಜಿ ಸಲ್ಲಿಸಿ, ಕೇಬಲ್‌ ಅಳವಡಿಕೆಗೆ ಅನುಮತಿ ಪಡೆಯಬಹುದು ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು.

ಬೃಹತ್ ಬೆಂಗಳೂರು ಮಹಾನಗರಪಾಲಿಕೆ

ಬೃಹತ್ ಬೆಂಗಳೂರು ಮಹಾನಗರಪಾಲಿಕೆ

"ಟೆಲಿಕಾಂ ಸೇವಾ ಕಂಪನಿಗಳು ಹೊಸದಾಗಿ ಅಭಿವೃದ್ಧಿಪಡಿಸಿದ್ದ ಮತ್ತು ಡಾಂಬರು ಹಾಕಲಾಗಿರುವ ರಸ್ತೆಗಳನ್ನು ಕೇಬಲ್ ಅಳವಡಿಕೆಗಾಗಿ ಅಗೆದು ಹಾಳು ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕೇಬಲ್‌ ಅಳವಡಿಕೆಗೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ, ಅನುಮತಿ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಹಾಗಾಗಿ, ಈಗಾಗಲೇ ನೀಡಿರುವ ಅನುಮತಿಗಳನ್ನು ರದ್ದುಪಡಿಸಲಾಗಿದೆ," ಎಂದು ಈ ಸಮಯದಲ್ಲಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದರು.

ಟೆಲಿಕಾಂ ಸಂಸ್ಥೆಗಳು

ಟೆಲಿಕಾಂ ಸಂಸ್ಥೆಗಳು

"ಟೆಲಿಕಾಂ ಸಂಸ್ಥೆಗಳು ಯಾವಯಾವ ರಸ್ತೆಯಲ್ಲಿ ಕೇಬಲ್ ಅಳವಡಿಸುತ್ತದೆ ಎನ್ನುವುದನ್ನು ಪ್ರಮಾಣಪತ್ರದ ಸಮೇತ ಬಿಬಿಎಂಪಿಗೆ ಮುಂಚಿತವಾಗಿಯೇ ತಿಳಿಸಬೇಕು. ಇದರಿಂದ, ರಸ್ತೆ ಅಭಿವೃದ್ದಿ ಪಡಿಸುವ ಅಥವಾ ಡಾಂಬರು ಹಾಕುವ ಕೆಲಸವನ್ನು ಮುಂದೂಡುವುದೋ ಅಥವಾ ತಡೆಹಿಡಿಯುವುದೋ ಎನ್ನುವುದನ್ನು ನಿರ್ಧರಿಸಲು ನಮಗೆ ಅನುಕೂಲವಾಗುತ್ತದೆ. "ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳು ಪ್ರತ್ಯೇಕವಾಗಿ ಕೇಬಲ್ ಎಳೆಯಬೇಕಾಗುತ್ತದೆ. ಎಲ್ಲಾ ಸಂಸ್ಥೆಗಳ ಕೇಬಲ್ ಗಳು ಒಂದು ಕೊಳವೆಯ ಮೂಲಕ ಎಳೆಯಲು ಅವಕಾಶ ನೀಡಲಾಗುವುದು" ಎಂದು ಬಿಬಿಎಂಪಿ ಸಮಸ್ಯೆಗೆ ತಾರ್ಕಿಕ ಅನ್ನಿಸುವಂತಹ ಪರಿಹಾರವನ್ನು ಸೂಚಿಸಿತ್ತು.

ಬಿಬಿಎಂಪಿಯ ಮೇಲಾಧಿಕಾರಿಗಳ ಸೂಚನೆ ಕೆಳ ಹಂತದಲ್ಲಿ ಕಾರ್ಯಗೊಳ್ಳಲಿಲ್ಲ

ಬಿಬಿಎಂಪಿಯ ಮೇಲಾಧಿಕಾರಿಗಳ ಸೂಚನೆ ಕೆಳ ಹಂತದಲ್ಲಿ ಕಾರ್ಯಗೊಳ್ಳಲಿಲ್ಲ

ಆದರೆ, ಬಿಬಿಎಂಪಿಯ ಮೇಲಾಧಿಕಾರಿಗಳ ಈ ಸೂಚನೆ ಕೆಳ ಹಂತದಲ್ಲಿ ಕಾರ್ಯಗೊಳ್ಳಲಿಲ್ಲ. ಪರಿಣಾಮ ಕೇಬಲ್‌ಗಳು ಎಲ್ಲೆಂದರಲ್ಲಿ ಕಾಣಿಸುತ್ತಿವೆ. ಇದೀಗ ಮತ್ತೆ ಚುರುಕಾದಂತೆ ಕಾಣಿಸುತ್ತಿರುವ ಬಿಬಿಎಂಪಿ ಆಡಳಿತ ಕಳೆದ ವಾರ ಅನಧಿಕೃತ ಕೇಬಲ್ ಅಳವಡಿಕೆ ಹಿನ್ನೆಲೆಯಲ್ಲಿ ಎಂದು ಜಯನಗರ ಮೂರನೇ ಬ್ಲಾಕ್ ವ್ಯಾಪ್ತಿಯಲ್ಲಿ ಸಿಕ್ಕಸಿಕ್ಕ ಓವರ್ ಹೆಡ್ ಕೇಬಲ್ ಗಳನ್ನು ಕಟ್ ಮಾಡಿ ಬಿಸಾಕಿತ್ತು. ಆದರೆ, ಕಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕೇಬಲ್ ಅನ್ನು ಮತ್ತೆ ಅಳವಡಿಸಿ ಟೆಲಿಕಾಂ ಸಂಸ್ಥೆಗಳು ಸೇವೆಯನ್ನು ನೀಡಲಾರಂಭಿಸಿವೆ. ತೆರೆಮರೆಯಲ್ಲಿ ಏನು ನಡೆದಿದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.

ಕಾನೂನು ಬಾಹಿರ ಕೇಬಲ್ ಸೇವೆ ಪುನರಾರಂಭಗೊಳ್ಳುತ್ತದೆ

ಕಾನೂನು ಬಾಹಿರ ಕೇಬಲ್ ಸೇವೆ ಪುನರಾರಂಭಗೊಳ್ಳುತ್ತದೆ

ಚಪ್ಪಾಳೆ ಹೊಡೆಯಲು ಎರಡೂ ಕೈ ಬೇಕು ಎನ್ನುವ ಮಾತಿನಂತೆ, ಓವರ್ ಹೆಡ್ ಅಥವಾ ಅಂಡರ್ ಗ್ರೌಂಡ್ ಕೇಬಲ್‌ ಅಳವಡಿಕೆ ವಿಚಾರದಲ್ಲಿ, ಒಂದು ದೂರದೃಷ್ಟಿ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಮನಸ್ಸು ಬಿಬಿಎಂಪಿ ಅಥವಾ ಟೆಲಿಕಾಂ ಸಂಸ್ಥೆಗಳಿಗೆ ಇದ್ದಂತಿಲ್ಲ. ಅಂಡರ್ ಗ್ರೌಂಡ್ ಕೇಬಲ್‌ ಮೂಲಕವೇ ಸೇವೆ ನೀಡಲಾಗುವುದು ಎಂದು ಸಂಸ್ಥೆಗಳಿಂದ ಪರ್ಚೇಸ್ ಆರ್ಡರ್ ಪಡೆಯುವ ಟೆಲಿಕಾಂ ಸಂಸ್ಥೆಗಳು, ಅವಲಂಬಿಸುತ್ತಿರುವುದು ಓವರ್ ಹೆಡ್ ಕೇಬಲ್ ನಿಂದ. ಯಾವುದು ಕಾನೂನು ಬಾಹಿರವೋ, ಅದು ಎಗ್ಗಿಲ್ಲದೆ ಸಾಗುತ್ತಿದೆ. ಕೆಲವೊಮ್ಮೆ ಆಡಳಿತಗಳು ಬದಲಾದಾಗ ಇದಕ್ಕೆ ಕಡಿವಾಣ ಹಾಕುವಂತಹ ಕ್ರಮಗಳನ್ನು ನೆಪಮಾತ್ರಕ್ಕೆ ಪ್ರದರ್ಶನ ಮಾಡಲಾಗುತ್ತದೆ. ಒಮ್ಮೆ ಆಡಳಿತಗಾರರ ಕಣ್ಣೊರಿಸಿದ ನಂತರ ಮತ್ತದೇ ಕಾನೂನು ಬಾಹಿರ ಕೇಬಲ್ ಸೇವೆ ಪುನರಾರಂಭಗೊಳ್ಳುತ್ತದೆ.

ಇವತ್ತಿಗೆ ಇಂಟರ್ನೆಟ್ ಇಲ್ಲದ ಜಗತ್ತನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ

ಇವತ್ತಿಗೆ ಇಂಟರ್ನೆಟ್ ಇಲ್ಲದ ಜಗತ್ತನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ

ಇವತ್ತಿಗೆ ಇಂಟರ್ನೆಟ್ ಇಲ್ಲದ ಜಗತ್ತನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಅಂತರ್ಜಾಲವನ್ನೇ ಆಧರಿಸಿದ ಉದ್ಯಮಗಳು ದಿನದ 24 ಗಂಟೆಗಳೂ ಚಾಲ್ತಿಯಲ್ಲಿರುತ್ತವೆ. ಆದರೆ ಸೇವೆ ನೀಡುವ ಕಂಪನಿಗಳು ಹಾಗೂ ಸ್ಥಳೀಯ ಆಡಳಿತ ಮಾತ್ರ ಇದರ ಗಂಭೀರತೆಯನ್ನು ಮರೆತು, ಅವರಿಷ್ಟಕ್ಕೆ ತಕ್ಕಂತೆ ಸೇವೆಯನ್ನು ನೀಡುವ ಹಾಗೂ ಬಂದ್ ಮಾಡುವ ಕೆಲಸ ಮಾಡುತ್ತಿವೆ. ಇದರಿಂದ ತೊಂದರೆಯಾಗುತ್ತಿರುವುದು ಉದ್ಯಮಗಳಿಗೆ. ಒಂದು ಆಯಾಮದಲ್ಲಿ ಇದು ಕಂಪನಿಯೊಂದಕ್ಕೆ ಆಗುವ ನಷ್ಟದಂತೆ ಕಂಡರೂ ಅಂತಿಮವಾಗಿ ಸಿಲಿಕಾನ್‌ ಸಿಟಿ ಎಂಬ ಖ್ಯಾತಿಗೆ ಒಳಗಾಗಿರುವ ನಗರದ ಒಟ್ಟಾರೆ ಬೆಳವಣಿಗೆಗೆ ಆಗುತ್ತಿರುವ ನಷ್ಟ ಎಂಬುದನ್ನು ಆಡಳಿತಗಾರರಿಗೆ ಅರ್ಥಪಡಿಸಬೇಕಿದೆ.

ಇಂಟರ್ನೆಟ್‌ ಕೇಬಲ್‌ಗಳಿಗಾಗಿಯೇ ಸುರಂಗಗಳನ್ನು ನಿರ್ಮಿಸಲಾಗಿದೆ

ಇಂಟರ್ನೆಟ್‌ ಕೇಬಲ್‌ಗಳಿಗಾಗಿಯೇ ಸುರಂಗಗಳನ್ನು ನಿರ್ಮಿಸಲಾಗಿದೆ

ಇವತ್ತು ಬದಲಾಗಿರುವ ಹೊತ್ತಿನಲ್ಲಿ ಅಮೆರಿಕಾ, ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಅಂತರ್ಜಾಲ ಸೇವೆ ಪೂರೈಸುವ ಇಂಟರ್ನೆಟ್‌ ಕೇಬಲ್‌ಗಳಿಗಾಗಿಯೇ ಸುರಂಗಗಳನ್ನು ನಿರ್ಮಿಸಲಾಗಿದೆ. ದೂರವಾಣಿ, ಅಂತರ್ಜಾಲ, ಟಿವಿ ಹಾಗೂ ಎಲೆಕ್ಟ್ರಿಕ್ ಕೇಬಲ್‌ಗಳನ್ನು ಬಳಸಲೇಬೇಕಿದೆ. ಹೀಗಿರುವಾಗ ಬಿಬಿಎಂಪಿ ಹಾಗೂ ರಾಜ್ಯ ಸರಕಾರ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕಿದೆ. ಒಂದೋ ಭೂಮಿ ಅಡಿಯಲ್ಲಿ ಕೇಬಲ್‌ ಅಳವಡಿಕೆಗೆ ಅಥವಾ ಹೊರಗೆ ಕೇಬಲ್‌ ಎಳೆಯಲು ಮೂಲ ಸೌಕರ್ಯ ಒದಗಿಸಬೇಕಿದೆ. ಕೇಬಲ್‌ಗಳನ್ನು ಅನಧಿಕೃತ ಆದಾಯದ ಮೂಲವನ್ನಾಗಿಸಿಕೊಂಡು ಕುಳಿತಿರುವ ಆಡಳಿತಗಾರರು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಿದೆ.

English summary
BBMP And Telecom Service Provider Fight Over, Overhead And Under Ground Cabling: Who Is The Looser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X